ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 6: ಸ್ನೇಹ ಸಂಪಾದನೆ

೬. ಸ್ನೇಹ ಸಂಪಾದನೆ

ಪಾಟಿಲೀಪುರಕ್ಕೆ ಹೋಗಿದ್ದ ಪರ್ವತರಾಜನ ಗೂಢಚಾರರು ರಾಜಧಾನಿಗೆ ಹಿಂದಿರುಗಿ ಬಂದರು. ಪಾಟಿಲೀಪುರದಲ್ಲಿ ಚಂದ್ರಗುಪ್ತನಿಂದ ನಡೆದ ಸಿಂಹ ಪರೀಕ್ಷೆ, ನಂದರು ಮಾಡಿದ ಬ್ರಾಹ್ಮಣಾಪಮಾನ —ಈ ಕಥೆಯೆಲ್ಲವನ್ನೂ ದೂತರಿಂದ ಕೇಳಿ ಪರ್ವತರಾಜನು ಸೋಜಿಗದಿಂದ ತಲೆದೂಗಿದನು. ಆ ಬಳಿಕ ಮಂತ್ರಿಯಾದ ಶಬರವರ್ಮನನ್ನು ಕುರಿತು ‘ಮಂತ್ರಿ, ಪಾಟಲೀಪುರದ ಸಮಾಚಾರವನ್ನು ಕೇಳಿದೆಯಾ? ಆ ಬ್ರಾಹ್ಮಣನು ಸಾಧಾರಣನಂತೆ ತೋರುವುದಿಲ್ಲ. ಅವನಿಂದ ನಂದರಿಗೆ ವಿಪತ್ತು ಸಂಭವಿಸಬಹುದು. ಅಲ್ಲದೆ ನಂದರ ವೈರಿಯಾದ ಚಂದ್ರಗುಪ್ತನು ಅಲ್ಲಿಂದ ಹೊರಟುಹೋದನಂತೆ. ದೂತರಿಂದ ಚಂದ್ರಗುಪ್ತನನ್ನು ಹುಡುಕಿಸಿದರೂ ಸಿಕ್ಕಲಿಲ್ಲವಂತೆ!’ ಎಂದನು.

ರಾಜನ ಮಾತಿಗೆ ಶಬರವರ್ಮನು ಈ ರೀತಿ ಹೇಳಿದನು “ಸ್ವಾಮಿ, ಪಾಟಲೀಪುರದ ಸಮಾಚಾರವನ್ನು ಚೆನ್ನಾಗಿ ವಿಚಾರ ಮಾಡಿದರೆ ಇದರಲ್ಲಿ ದೈವಯತ್ನ ಮಾತ್ರ ಇದೆ ಎಂದು ತೋರುವುದಿಲ್ಲ. ಸ್ವಲ್ಪ ಪುರುಷ ಯತ್ನವೂ ಉಂಟೆಂದು ತೋರುತ್ತದೆ. ಪೂರ್ವಸಂಕೇತವಿಲ್ಲದೆ ಬ್ರಾಹ್ಮಣನಾದವನು ಅಗ್ರಸ್ಥಾನದಲ್ಲಿ ಬಂಗಾರದ ಪೀಠದ ಮೇಲೆ ಪ್ರಭುಗಳನ್ನು ಲಕ್ಷಿಸದೆ ಕಾಲಮೇಲೆ ಕಾಲನ್ನು ಹಾಕಿಕೊಂಡು ಕುಳಿತುಕೊಂಡಿರಲು ಕಾರಣವೇನು? ಆತನು ತೇಜಸ್ವಿಯಾಗಿದ್ದರೆ ನಂದರಿಗೆ ವಿಪತ್ತು ತಪ್ಪದು. ಸಾಧುಸಜ್ಜನರ ನಿಟ್ಟುಸಿರು ಕುಲವನ್ನು ನಾಶಮಾಡುವುದರಲ್ಲಿ ಸಂದೇಹವೇನು? ಚಂದ್ರಗುಪ್ತನು ಬ್ರಾಹ್ಮಣನನ್ನು ಮರೆಹೊಕ್ಕು ಅವನೊಡನೆ ಹೋಗಿರಬೇಕು. ಈ ಕೆಲಸ ರಾಕ್ಷಸನಿಲ್ಲದ ಕಾಲದಲ್ಲಿ ತಿಳಿಗೇಡಿಗಳಾದ ನಂದರಿಂದ ನಡೆದಿರಬೇಕು.’

ಶಬರವರ್ಮನ ಮಾತಿಗೆ ಪರ್ವತರಾಜನು ‘ಎಲೈ ಮಂತ್ರಿ, ನೀನು ಹೇಳಿದುದೆಲ್ಲ ಸರಿ. ಆದರೆ ಆ ಬ್ರಾಹ್ಮಣನು ತೇಜಸ್ವಿಯಾಗಿದ್ದರೆ ಅವನೇಕೆ ನಂದರಿಗೆ ಶಾಪಕೊಡಲಿಲ್ಲ.? ಆ ಬ್ರಾಹ್ಮಣನು ದರಿದ್ರ. ಚಂದ್ರ ಗುಪ್ತಬಲಹೀನ. ಇವರಿಬ್ಬರೂ ಸೇರಿ ಬಹುಸೇನೆಯಿಂದ ಕೂಡಿರುವ ನಂದರನ್ನು ಗೆಲ್ಲಲು ಹೇಗೆ ಸಾಧ್ಯ?’ ಎಂದು ತಿರುಗಿ ಕೇಳಿದನು. ಅದಕ್ಕೆ ಮಂತ್ರಿಯು ‘ಲೋಭಿಗೆ ಹಣದಲ್ಲಿ ಆಸೆಯಿರುವಂತೆ ಮಹಾತ್ಮರಿಗೆ ತಪಸ್ಸಿನಲ್ಲಿ ಆಸೆಯಿರುವುದರಿಂದ ಅದನ್ನು ನಷ್ಟಪಡಿಸಿಕೊಳ್ಳಲು ಅವರು ಒಪ್ಪರು. ವಿಶ್ವಾಮಿತ್ರನು ಶ್ರೀರಾಮಚಂದ್ರನಿಂದ ಸುಬಾಹುಮಾರೀಚರನ್ನು ಕೊಲ್ಲಿಸಿದಂತೆ ಆತನು ಚಂದ್ರಗುಪ್ತನಿಂದ ನಂದರನ್ನು ಕೊಲ್ಲಿಸಬಹುದು. ಚಂದ್ರಗುಪ್ತನಿಗೆ ದೈವಬಲವುಂಟಾಗಿದೆ. ಜೊತೆಗೆ ತೇಜಸ್ವಿಯಾದ ಬ್ರಾಹ್ಮಣನ ಸಹಾಯ ದೊರಕಿದೆ. ಹೀಗಿರುವಲ್ಲಿ ಹೇಳತಕ್ಕದ್ದೇನು? ಗಾಳಿಬೆಂಕಿಗಳು ಒಟ್ಟು ಕೂಡಿದರೆ ಕಾಡು ಸುಟ್ಟು ಬೂದಿಯಾಗದೆ?’ ಎಂದನು. ಮಂತ್ರಿಯ ಮಾತಿಗೆ ತನ್ನ ಒಪ್ಪಿಗೆಯನ್ನಿತ್ತು ರಾಜನು ಅಂತಃಪುರಕ್ಕೆ ತೆರಳಿದನು. ಮಾರನೆಯ ದಿನ ಲಂಪಾಕಾಧಿಪತಿ ರಾಜಧಾನಿಗೆ ಹತ್ತಿರವಾಗುತ್ತಿದ್ದಾನೆ ಎಂಬ ಸುದ್ದಿ ತಿಳಿದುಬರಲು, ಪರ್ವತೇಶ್ವರನು ಯುದ್ಧಕ್ಕೆ ಸಿದ್ಧನಾದನು.

ಇತ್ತ ಪರ್ವತರಾಜನ ರಾಜಧಾನಿಗೆ ಪ್ರಯಾಣ ಹೊರಟಿದ್ದ ಚಾಣಕ್ಯನು ಕೆಲವು ದಿನಗಳಾದ ಮೇಲೆ ಚಂದ್ರಗುಪ್ತನೊಡನೆ ಆ ರಾಜ್ಯವನ್ನು ಹೊಕ್ಕನು. ನಾಡಿಗೆ ನಾಡೇ ಹಸುರುಟ್ಟು ನಲಿಯುತ್ತಿದ್ದುದನ್ನು ಕಂಡು ಚಾಣಕ್ಯನಿಗೆ ತುಂಬ ಸಂತೋಷವಾಯಿತು. ಆದರೆ ತನ್ನೊಡನೆ ಚಿಂತಿಸುತ್ತಾ ಬರುತ್ತಿದ್ದ ಚಂದ್ರಗುಪ್ತನನ್ನು ನೋಡಿ ‘ಕುಮಾರ, ಏಕೆ ಬಾಡಿದ ಮುಖವುಳ್ಳವನಾಗಿರುವೆ? ನಿನ್ನ ಚಿಂತೆಗೆ ಕಾರಣವೇನು? ಚಿಂತೆಗೆ ಮನಸ್ಸಿನಲ್ಲಿ ಸ್ಥಳಕೊಡುವುದೂ, ಹಾವಿಗೆ ಮುತ್ತಿಡುವುದೂ ಎರಡೂ ಒಂದೇ. ಚಿಂತೆಗೂ ಚಿತೆಗೂ ಇರುವ ವ್ಯತ್ಯಾಸ ಒಂದು ಬಿಂದು. ಚಿತೆ ಜೀವವಿಲ್ಲದ ದೇಹವನ್ನು ಸುಡುವುದು. ಚಿಂತೆ ಜೀವಂತ ಮನುಷ್ಯನನ್ನೇ ಸುಡುವುದು’ ಎಂದನು. ಆಚಾರ್ಯರ ಮಾತನ್ನು ಕೇಳಿ ಚಂದ್ರಗುಪ್ತನು ‘ತಾವು ಹೇಳಿದ ಮಾತು ಸತ್ಯ. ನನ್ನ ಮಾತನ್ನು ಸ್ವಲ್ಪ ಲಾಲಿಸಬೇಕು. ಈ ಪಟ್ಟಣದ ಈಶಾನ್ಯ ದಿಕ್ಕಿನಲ್ಲಿ ಶತ್ರು ನಾಶ ಸೂಚಕವಾಗಿ ಹುಟ್ಟಿರುವ ಧೂಮಕೇತುವಿನಂತೆ ಬಾವುಟ ಹಾರಾಡುತ್ತಿದೆ. ಅದರ ಸುತ್ತಲೂ ಸೇನೆ ನೆರೆದಿದೆ. ಇದನ್ನು ನೋಡಿದರೆ ರಾಜನಿಗೆ ದಂಡಯಾತ್ರೆಯ ಸಮಯನೆಂದು ಕಾಣುತ್ತದೆ. ಆದ್ದರಿಂದ ಈ ರಾಜನು ತನ್ನ ಕೆಲಸವನ್ನು ಬಿಟ್ಟು ನಮ್ಮ ಕೆಲಸ ಮಾಡಿಕೊಡುವನೇ ಎಂದು ಮನಸ್ಸು ಚಿಂತಿಸುತ್ತದೆ.’ ಎಂದು ನುಡಿದನು.

ಚಂದ್ರಗುಪ್ತನ ಮನೋಭಾವವನ್ನು ಗ್ರಹಿಸಿ ಚಾಣಕ್ಕನು ‘ಕುಮಾರ, ಇದಕ್ಕೆ ಏಕಿಷ್ಟು ಚಿಂತೆ? ಈ ಲೋಕದಲ್ಲಿ ಪರೋಪಕಾರಕ್ಕೆ ಮಿಂಚಿದ ಧರ್ಮ ಮತ್ತೊಂದಿಲ್ಲ. ಶ್ರೀಗಂಧದ ಮರ ತಾನು ಒಣಗಿ ಪರರಿಗೆ ಆನಂದವನ್ನುಂಟುಮಾಡುವಂತೆ, ಉತ್ತಮರು ತಮಗೆ ಕಷ್ಟ ಬಂದರೂ ಮರೆಹೊಕ್ಕವರನ್ನು ಕಾಪಾಡುತ್ತಾರೆ. ಈ ಪರ್ವತೇಶ್ವರನು ಪರಮಗುಣಾಢ್ಯ. ತನ್ನ ಕೆಲಸವೆಷ್ಟಿದ್ದರೂ ಅದನ್ನು ಬಿಟ್ಟು ನಮ್ಮ ಕಾರ್ಯಕ್ಕೆ ಸಹಾಯ ಮಾಡುವನು. ಇದರ ಮೇಲೆ ಎಲ್ಲಕ್ಕೂ ಅದೃಷ್ಟ ದೊಡ್ಡದು. ಇದಕ್ಕೆ ಒಂದು ಕಥೆಯುಂಟು, ಹೇಳುವೆನು ಕೇಳು. ಒಂದು ಕಾಡಿನಲ್ಲಿ ಒಂದು ಮರದ ಮೇಲೆ ಎರಡು ಪಾರಿವಾಳದ ಹಕ್ಕಿಗಳು ಪ್ರೀತಿಯಿಂದ ಮನೆ ಮಾಡಿಕೊಂಡಿದ್ದುವು. ಒಮ್ಮೆ ಬೇಡನೊಬ್ಬನು ಹಕ್ಕಿಗಳನ್ನು ಕೊಲ್ಲಲು ಬಿಲ್ಲಿನಲ್ಲಿ ಬಾಣ ಹೊಡಿ ಬಿಡಲು ಸಿದ್ಧನಾಗಿ ಮರದಡಿ ಬಂದು ನಿಂತನು. ಹಕ್ಕಿಗಳು ಮೇಲೆ ಹಾರಿ ಹೋಗುವಂತಿಲ್ಲ. ಏಕೆಂದರೆ ಗಿಡುಗವೊಂದು ಹಕ್ಕಿಗಳನ್ನು ತಿನ್ನಲು ಆಕಾಶದಲ್ಲಿ ಸುತ್ತುತ್ತಿದೆ. ಹಕ್ಕಿಗಳಿಗೆ ಎಂಥ ಕಷ್ಟ ಬಂತು! ಅವು ಈಗೇನು ಮಾಡಬೇಕು? ಆ ಸಮಯದಲ್ಲಿ ಬೇಡನು ಹಾವು ಕಚ್ಚಿ ಸತ್ತು ಹೋದನು. ಅವನ ಬಿಲ್ಲಿನಲ್ಲಿ ಹೂಡಿದ್ದ ಬಾಣ ಗಿಡುಗನನ್ನು ಕೊಂದಿತು. ದೈವಯೋಗದಿಂದ ಪಾರಿವಾಳಗಳು ಬದುಕಿಕೊಂಡುವು. ಹಾಗೆಯೇ ನಮಗೆ ದೈವಬಲ ಒದಗಿದ್ದರೆ ನಮ್ಮ ಉಪಾಯದಿಂದ ಈ ರಾಜನಿಗೆ ಶತ್ರುಗಳ ಆತಂಕ ತಪ್ಪಿ ಇದೇ ಸೇನೆಯೊಡನೆ ನಾವು ಪಾಟಲೀ ಪುರದ ಮುತ್ತಿಗೆಗೆ ತೆರಳಬಹುದು” ಎಂದನು. ಈ ಮಾತಿನಿಂದ ಚಂದ್ರಗುಪ್ತನಿಗೆ ಸ್ವಲ್ಪ ಸಮಾಧಾನವಾಯಿತು. ಇಬ್ಬರೂ ಪರ್ವತೇಶ್ವರನ ರಾಜಧಾನಿಯನ್ನು ಸೇರಿದನು.

ಮಾರನೆಯ ದಿನ ಚಾಣಕ್ಯನು ಚಂದ್ರಗುಪ್ತನೊಡನೆ ಪರ್ವತ ರಾಜನನ್ನು ಕಂಡನು. ರಾಜನು ಇಬ್ಬರನ್ನೂ ಆದರದಿಂದ ಕಂಡು ಬಂದ ಕಾರ್ಯವೇನೆಂದು ಅವರನ್ನು ಕೇಳಿದನು. ರಾಜನ ಮಾತಿಗೆ ಚಾಣಕ್ಯನು ಏಕಾಂತ ಯೋಗ್ಯವಾದ ರಾಜಕಾರ್ಯವುಂಟೆಂದು ಹೇಳಲು ದೊರೆಯ ಇಂಗಿತವನ್ನು ಅರಿತು ಸಭೆಯಲ್ಲಿದ್ದವರೆಲ್ಲ ದೂರಸರಿದರು. ಆಗ ಚಾಣಕ್ಯನು ರಾಜನಿಗೆ ತಾನು ಬಂದ ಕೆಲಸವನ್ನು ತಿಳಿಸಿ, ಭಾಗುರಾಯಣಾದಿಗಳ ಒಪ್ಪಿಗೆಯ ಕಾಗದವನ್ನು ಆತನ ಕೈಗೆ ಕೊಟ್ಟನು. ಅದನ್ನು ನೋಡಿಕೊಂಡು ರಾಜನು ಮನಸ್ಸಿನಲ್ಲಿ ‘ನಾನು ಮೊದಲು ಆಲೋಚಿಸಿದಂತೆಯೇ ಕೆಲಸ ನಡೆದಿದೆ. ಮೌರ್ಯರ ಮರಣದಿಂದ ಅಲ್ಲಿಯ ಅಧಿಕಾರಿಗಳಿಗೆ ಅಸಮಾಧಾನವಾಗಿರಬೇಕು. ಈ ಕಾಗದವೇ ಅದನ್ನು ಸೂಚಿಸುತ್ತದೆ. ಚಂದ್ರಗುಪ್ತನನ್ನು ನೋಡಿದರೆ ಪ್ರಭುಪದಕ್ಕೆ ಯೋಗ್ಯನಂತೆ ಕಾಣುತ್ತಾನೆ. ಇವನಿಂದಲೇ ಪಂಜರ ಪರೀಕ್ಷೆ ನಡೆದಿರಬೇಕು. ಆದರೆ ಈಗ ಲಂಪಾಕಾಧಿಸತಿ ನಮ್ಮ ಮೇಲೆ ದಂಡೆತ್ತಿ ಬಂದಿರುವಾಗ ಇವರಿಗೆ ಹೇಗೆ ಅಭಯಕೊಡುವುದು? ಇರಲಿ, ಮಂತ್ರಿ ಗಳೊಡನೆ ಆಲೋಚಿಸಿ ಇವರಿಗೆ ಉತ್ತರ ಹೇಳುತ್ತೇನೆ’ ಎಂದು ಕೊಂಡು ಚಾಣಕ್ಯನಿಗೆ ‘ಸ್ವಾಮಿ, ಮಧ್ಯಾಹ್ನಕಾಲ ಮೀರಿತು, ತಾವು ಬಳಲಿದ್ದೀರಿ. ವಿಶ್ರಮಿಸಿಕೊಳ್ಳಿ. ಈ ಕಾರ್ಯವನ್ನು ಮತ್ತೊಮ್ಮೆ ಆಲೋಚಿಸೋಣ ‘ ಎಂದು ಅವರನ್ನು ಬೀಳ್ಳೂಟ್ಟನು. ಶಬರವರ್ಮನು ಅವರಿಬ್ಬರಿಗೂ ಉಚಿತವಾದೆಡೆಯಲ್ಲಿ ಬೀಡಾರ ಮಾಡಿಸಿದನು.

ಆ ಮಾರನೆಯ ದಿನ ಪರ್ವತರಾಜನು, ತನ್ನ ಮಂತ್ರಿಗಳಾದ ಉಲೂಕ, ಶಬರವರ್ಮರನ್ನು ಏಕಾಂತದಲ್ಲಿ ಕುಳ್ಳಿರಿಸಿಕೊಂಡು ‘ಮಂತ್ರಿಗಳೆ, ಈಗ ಚಂದ್ರಗುಪ್ತನು ನಂದರಲ್ಲಿ ಹಗೆತನವನ್ನು ಸಾಧಿಸಲು ನಮ್ಮ ಸಹಾಯವನ್ನು ಬಯಸಿ ಬಂದಿರುವನೇ? ಇಲ್ಲವೆ ಶತ್ರುರಹಿತವಾದ ರಾಜ್ಯವನ್ನು ಸಂಪಾದಿಸಲು ಬಂದಿರುವನೇ? ಚಾಣಕ್ಯರು ಹೇಳಿದ ಭಾವವನ್ನು ನೋಡಿದರೆ ಎರಡು ವಿಧವಾಗಿಯೂ ತೋರುತ್ತದೆ. ಅಲ್ಲದೆ ಈಗ ಲಂಪಾಕಾಧಿಪತಿ ಬೇರೆ ದಂಡೆತ್ತಿ ಬಂದಿದ್ದಾನೆ. ಈಗ ನಾವು ಮಾಡಬೇಕಾದ ಕರ್ತವ್ಯವನ್ನು ತಿಳಿದು ಹೇಳಿ ‘ ಎಂದನು.

ರಾಜನ ಮಾತಿಗೆ ರಾಕ್ಷಸನ ಮಿತ್ರನಾದ ಉಲೂಕನೆಂಬ ಮಂತ್ರಿ ಈ ರೀತಿ ಹೇಳಿದನು: ‘ಸ್ವಾಮಿ, ಪಾಟಲೀಪುರದ ಅರಸರಿಗೂ ನಮಗೂ ಎಂದಿಗೂ ವೈರವಿಲ್ಲ. ಈಗ ಚಂದ್ರಗುಪ್ತನಿಂದ ಅದನ್ನು ಸಂಪಾದಿಸಿಕೊಳ್ಳಬೇಕಾಗುತ್ತದೆ. ನಂದರು ಧನದಲ್ಲಿ, ಬಲದಲ್ಲಿ ಎಲ್ಲರನ್ನೂ ಮೀರಿಸಿರುವ ಅಂಶ ತಮಗೆ ತಿಳಿದೇ ಇದೆ. ಅವರು ಶೂರರೂ ಶೂರಪರಿವಾರವುಳ್ಳವರೂ ಆದಕಾರಣ ದಂಡೋಪಾಯ ಅವರಲ್ಲಿ ಸಾಗದು. ಸಾಮ, ದಾನ ಭೇದಗಳಿಗೆ ಅವರಲ್ಲಿ ಅವಕಾಶವುಂಟೇ? ಚಂದ್ರಗುಪ್ತ ಶೂದ್ರ ಸ್ತ್ರೀಯ ಮೊಮ್ಮಗ. ಆದಕಾರಣ ಅವನು ಪ್ರಭುಪದಕ್ಕೆ ಯೋಗ್ಯನಲ್ಲ. ಈಗ ನಂದರಲ್ಲಿ ಯುದ್ಧ ಪ್ರಯತ್ನವನ್ನು ಕೈಕೊಂಡರೆ ಜಯಲಕ್ಷ್ಮಿ ಯಾರಿಗೆ ಒಲಿಯುವಳೋ ಹೇಳಬಲ್ಲವರಾರು? ಇಲಿಯನ್ನು ಹಡಿಯಲು ಬೆಟ್ಟವನ್ನು ಅಗೆದಂತಾಗಬಹುದು ಈ ಕಾರ್ಯಸಾಧನೆ. ಈಗ ಚಂದ್ರಗುಪ್ತನಲ್ಲಿ ಸ್ನೇಹವನ್ನು ಬೆಳೆಸಿ ರಾಕ್ಷಸನ ಮೂಲಕ ಚಂದ್ರಗುಪ್ತ ನಂದರ ವೈರವನ್ನು ಸರಿಹರಿಸುವುದು ಮೇಲು. ಆಗ ಅವರು ಚಂದ್ರಗುಪ್ತನಿಗೆ ಉಚಿತವಾದ ಜೀವನೋಪಾಯವನ್ನು ಕಲ್ಪಿಸಬಹುದು. ಅದಕ್ಕಿಂತ ಮೊದಲು ಈಗ ನಮ್ಮ ಮೇಲೆ ದಂಡೆತ್ತಿ ಬಂದಿರುವ ಲಂಪಾಕಪತಿಯ ಗರ್ವವನ್ನು ಮುರಿಯಬೇಕು.’

ಉಲೂಕನ ಮಾತಿಗೆ ಶಬರವರ್ಮನು ಈ ರೀತಿ ನುಡಿದನು–

‘ಸ್ವಾಮಿ, ಮನುಷ್ಯನಿಗೆ ಗುಣ ಮುಖ್ಯವೇ ಹೊರತು ಕುಲವಲ್ಲ. ಜನರು ಶೂರನೂ, ನ್ಯಾಯಪರನೂ ಆದ ಅರಸನನ್ನು ಪ್ರೀತಿಸುತ್ತಾರೆ. ನಂದರಾದರೋ ಮದಿಸಿ, ಪರದೇಶಗಳನ್ನೊತ್ತಿಕೊಳ್ಳುತ್ತ ಹೆಚ್ಚಿ ಹೋಗಿದ್ದಾರೆ. ನಂದರಲ್ಲಿ ಈಗ ಒಡಕು ಉಂಬಾಗಿದೆ. ಇದೇ ಸಮಯವನ್ನು ಉಪಯೋಗಿಸಿಕೊಂಡು ನಾವು ಅವರನ್ನು ನಾಶಮಾಡಬೇಕು. ಈಗ ಉದಾಸೀನ ಮಾಡಿದರೆ ಮುಂದೆ ಅನರ್ಥವಾದೀತು! ಲಂಪಾಕಾಧಿಪತಿಯನ್ನು ಜಯಿಸಲು ಈಗ ನಾವು ಎಷ್ಟು ಕಷ್ಟ ಸಡಬೇಕಾಗಿದೆ! ಮೊದಲು ಈಗ ಮೇಲೆ ಬಂದಿರುವ ವೈರಿಯನ್ನು ನಿಗ್ರಹಿಸಿ, ಆಮೇಲೆ ಗೌಡದೇಶಕ್ಕೆ ತೆರಳೋಣ. ಚಂದ್ರಗುಪ್ತನು ಪರಮಗುಣಾಢ್ಯ. ಅವನಿಗೆ ಸಹಾಯ ಮಾಡಿದರೆ ತಮಗೆ ಯಶಸ್ಸೂ, ಲಾಭವೂ ಉಂಬಾಗುವುದು.’

ಶಬರವರ್ಮನ ಮಾತಿನಿಂದ ಪರ್ವತರಾಜನಿಗೆ ನಂದರ ಮೇಲೆ ಕೋಪ ಹುಟ್ಟಿ ‘ಅಯ್ಯಾ ಮಂತ್ರಿ, ನೀನು ಹೇಳಿದ ಮಾತು ಸತ್ಯ. ಮುಂದಕ್ಕೆ ನಾವು ಮಾಡಬೇಕಾದ ಕರ್ತವ್ಯವೇ ಇದು. ಮೊದಲು ಲಂಪಾಕಾಧಿಪತಿಯನ್ನು ಎದುರಿಸಲು ನಮ್ಮ ಸೈನ್ಯ ಸಿದ್ಧವಾಗಿ ತೆರಳಲಿ.’ ಎಂದು ಮಂತ್ರಿಗೆ ಅಪ್ಪಣೆ ಮಾಡಿ ರಾಜನು ಅಂತಃಪುರಕ್ಕೆ ಹೋದನು”

ಮರುದಿವಸ ಪರ್ವತರಾಜನು ಚಾಣಕ್ಯ ಚಂದ್ರಗುಪ್ತರನ್ನು ಆಸ್ಥಾನಕ್ಕೆ ಕರೆಸಿಕೊಂಡು, ಚಾಣಕ್ಯನಿಗೆ ನಂದರ ಮೇಲೆ ಕೋಪವುಂಟಾಗುವುದಕ್ಕೂ, ಚಂದ್ರಗುಪ್ತನ ಮೇಲೆ ಅನುಗ್ರಹವುಂಟಾಗುವುದಕ್ಕೂ ಕಾರಣವನ್ನು ಕೇಳಿದನು. ಚಾಣಕ್ಯನು ಹಿಂದಿನ ಕಥೆಯೆಲ್ಲವನ್ನೂ ರಾಜನಿಗೆ ವಿವರಿಸುತ್ತ ಹೀಗೆ ಹೇಳಿದನು: ‘ನಂದರು ವಿಮರ್ಶೆ ಮಾಡದೆ ನಿರಪರಾಧಿಯಾದ ನನ್ನ ಮೇಲೆ ಕೋಪಗೊಂಡು ಅವಮಾನ ಪಡಿಸಿದರು. ಇದರಿಂದ ಚಂದ್ರಗುಪ್ತನಿಗಿಂತಲೂ ನಂದರ ನಿಗ್ರಹ ನನಗೆ ಅತ್ಯವಶ್ಯ. ನನಗೆ ತಪೋಹಾನಿಯಾಗದಂತೆ ನಂದರನ್ನು ನಿಗ್ರಹಿಸಬೇಕಾಗಿರುವಕಾರಣ, ನಿನ್ನ ಸಹಾಯವನ್ನು ಬಯಸಬೇಕಾಯಿತು. ನನ್ನ ಪ್ರತಿಜ್ಞೆ ಸಫಲವಾಗುವಂತೆ ಚಂದ್ರಗುಪ್ತನಿಗೆ ರಾಜ್ಯ ದೊರಕುವಂತೆ ಆಗಬೇಕಾದರೆ ಮೊದಲು ನಿನ್ನ ಸೈನ್ಯ ಗೌಡದೇಶದಲ್ಲಿ ನಿಲ್ಲಬೇಕು. ನೆಪಮಾತ್ರಕ್ಕೆ ನಿನ್ನ ಸೈನ್ಯ ನಮ್ಮೊಡನೆ ಬರಲಿ. ನನ್ನ ಬುದ್ಧಿ ಶಕ್ತಿಯಿಂದಲೇ ನಂದರನ್ನು ಕೊಲ್ಲುವೆನು. ಆ ಬಳಿಕ ಎಲ್ಲವೂ ನೀನು ಹೇಳಿದಂತಾಗುವುದು.’

ಪರ್ವತರಾಜ– ಸ್ವಾಮಿ ಬ್ರಾಹ್ಮಣೋತ್ತಮರೇ, ತಾವು ಹೇಳಿದುದೆಲ್ಲ ವಿಹಿತ. ಮರೆಹೊಕ್ಕವರನ್ನು ಕಾಪಾಡುವುದೂ, ದುಷ್ಟರನ್ನು ಶಿಕ್ಷಿಸುವುದೂ ಶಿಷ್ಟಾಚಾರ. ಆದರೆ ಈಗಲೇ ನಿಮಗೆ ಇಷ್ಟವಾದ ಕಾರ್ಯವನ್ನು ಮಾಡಿಕೊಡಲು ನಮಗೆ ಇದು ಸಮಯವಲ್ಲ. ಈಗ ನಮ್ಮ ಮೇಲೆ ದಂಡೆತ್ತಿ ಬಂದಿರುವ ಲಂಪಾಕಾಧಿಪತಿಯನ್ನು ನಾವು ಮೊದಲು ನಿಗ್ರಹಿಸಬೇಕಾಗಿದೆ. ಅಲ್ಲಿಯವರೆಗೆ ನಮ್ಮಲ್ಲಿ ಕೃಪೆಮಾಡಿ ತಾವು ಇಲ್ಲಿಯೇ ಇರಬೇಕು.

ಚಾಣಕ್ಯ- ಅಯ್ಯಾ ರಾಜಾಧಿರಾಜನೆ, ನೀನು ಹೇಳಿದುದು ಯುಕ್ತ. ಆದರೂ ಯಾವ ಮಹಾಕಾರ್ಯಗೌರವಕ್ಕೆಂದು ಯುದ್ಧೋದ್ಯೋಗವನ್ನು ಮಾಡುವೆ? ಇದೊಂದು ನಿನಗೆ ಮಹಾವಿಷಯವಲ್ಲ.

ಪರ್ವತರಾಜ– ಹಾಗಾದರೆ ಈ ವಿಷಯದಲ್ಲಿ ನಿಮ್ಮ ಸಲಹೆಯೇನು?

ಚಾಣಕ್ಯ– ರಾಜನೇ, ಲೋಕದಲ್ಲಿ ವೈರಿಗಳನ್ನು ಜಯಿಸಲು ನಾಲ್ಕು ತೆರನಾದ ಉಪಾಯಗಳುಂಟು. ಅವುಗಳಲ್ಲಿ ಅರಸರು ಸಾಮ, ದಾನ, ಭೇದಗಳನ್ನೇ ಅನುಸರಿಸಬೇಕು. ದಂಡೋಪಾಯ ಹಿಂಸೆಗೆ ಮೂಲ. ಇದನ್ನು ಅನುಸರಿಸುವ ರಾಜನಿಗೆ ಜಯಶೀಲನೆಂಬ ಕೀರ್ತಿ ಮಾತ್ರ ಬರುವುದು. ಉಳಿದ ಉಪಾಯಗಳನ್ನು ಅನುಸರಿಸುವ ಅರಸನು ತನ್ನ ವೈರಿಗಳನ್ನು ನಾಶಪಡಿಸಿ ಸುಖಿಯಾಗುವನು ; ಅವನಿಗೆ ದಯಾಶೀಲನೆಂದು ಕೀರ್ತಿ ಉಂಟಾಗುವುದಲ್ಲವೆ?

ಸರ್ವತರಾಜ– ಪೂಜ್ಯರೇ, ನೀವು ಹೇಳಿದ ಉಪಾಯಗಳನ್ನು ನಂದರಲ್ಲಿ ಏಕೆ ಪ್ರಯೋಗಿಸಕೂಡದು?

ಚಾಣಕ್ಯ– ದೂರಾಲೋಚನೆಯುಳ್ಳ ರಾಜನೇ, ನಿನ್ನ ಅಭಿಪ್ರಾಯ ತಿಳಿಯಿತು. ನಂದರನ್ನು ಸಂಹರಿಸಿದ ಹೊರತು ನಾನು ಜುಟ್ಟನ್ನು ಕಟ್ಟುವುದಿಲ್ಲವೆಂದು ಶಪಥಮಾಡಿದ್ದೇನೆ. ಅಲ್ಲದೆ ಶತ್ರುಗಳಿಂದ ಕೂಡಿದ ರಾಜ್ಯಕ್ಕೆ ಅರಸಾಗಲು ಚಂದ್ರಗುಪ್ತನು ಒಡಂಬಡನು. ಆದ್ದರಿಂದ ನಂದರಲ್ಲಿ ದಂಡೋಪಾಯ ನನಗೆ ಮುಖ್ಯ ಕರ್ತವ್ಯ.

ಚಂದ್ರಗುಪ್ತ – ನೀಚರಾದ ನಂದರ ಸಿಗ್ರಹವಿಲ್ಲದೆ ದೊರಕುವ ರಾಜ್ಯಕ್ಕಿಂತ ವನವಾಸ ಎಷ್ಟೋ ಮೇಲು. ಇದನ್ನು ಆಚಾರ್ಯರಲ್ಲಿ ಬಿನ್ನೈಸಿಕೂಳ್ಳಲು, ಅವರು ಶತ್ರುರಹಿತವಾದ ಪ್ರಭುತ್ರವನ್ನುಂಟು ಮಾಡುವೆವೆಂದು ಅಭಯಕೊಟ್ಟಿದ್ದಾರೆ.

ಸರ್ವತರಾಜ– (ನಸುನಗುತ್ತ) ಕುಮಾರ, ಶತ್ರುರಹಿತವಾದ ರಾಜ್ಯಲಾಭಕ್ಕೆ ಕಾರ್ಯ ದಕ್ಷರಾದ ಮಾನಧನರ ಸಹಾಯವನ್ನು ಬಯಸದೆ, ತಪೋಧನರ ಆಶ್ರಯವನ್ನು ಸಂಪಾದಿಸಿದರೆಂಬ ಭಾವವನ್ನು ಇತರರಿಗೆ ತೋರಿಸಕ್ಕುದಲ್ಲ.

ಚಂದ್ರಗುಪ್ತ–ಬೇರುಗಳನ್ನು ಅಗೆಯುವಾಗ ನಿಧಿಯೇ ಸಿಕ್ಕುವಂತೆ, ನಮ್ಮ ಆಚಾರ್ಯರ ಕರುಣೆಯಿಂದ, ರಾಜಾಧಿರಾಜನಾದ ನಿನ್ನ ಆಶ್ರಯ ದೊರೆತಿರುವಾಗ ಇನ್ನು ನನಗೆ ಕ್ಲೇಶವೆಂದರೇನು?

ಪರ್ವತರಾಜ– (ಚಂದ್ರಗುಪ್ತನ ಮೃದುಮಾತಿಗೆ ಮನಸೋತು) ಈ ಮೃದುವಾದ ಮಾತು, ಈ ವಿನಯ ಮಹಾರಾಜನಿಗಲ್ಲದೆ ಇತರರಿಗೆ ಬರಲಾರವು. ಈ ಚಂದ್ರಗುಪ್ತನ ಮಾತು ನಮ್ಮನ್ನು ಸಂತೋಷಗೊಳಿಸಿದೆ. (ಪ್ರಕಾಶವಾಗಿ) ಆರ್ಯರೇ, ಈಗ ನಮ್ಮ ಮೇಲೆ ದಂಡೆತ್ತಿ ಬಂದಿರುವ ಲಂಪಾಕಾಧಿಪತಿಯನ್ನು ಜಯಿಸುವ ಕಾರ್ಯದಲ್ಲಿ ನಿಮ್ಮ ಅಭಿಪ್ರಾಯವೇನು?

ಚಾಣಕ್ಯ– ರಾಜನೇ, ನಮ್ಮ ಅಭಿಪ್ರಾಯ ಕಾರ್ಯಾಂತದಲ್ಲಿ ತಿಳಿದುಬರುವುದು. ನಿನಗೆ ಆಪ್ತನಾಗಿರುವ ಬುದ್ಧಿಶಾಲಿಯಾದ ಒಬ್ಬ ನಿಯೋಗಿಯನ್ನು ನಮ್ಮ ಬಳಿ ಕಳುಹು. ನಾವು ಹೇಳಿದಂತೆ ಆತನು ನಡೆದುಕೊಳ್ಳಲಿ.

ಪರ್ವತರಾಜನು ಚಾಣಕ್ಯನ ಮಾತಿಗೆ ಒಪ್ಪಿಗೆಯಿತ್ತನು. ಆಲೋಚನೆ ಮುಗಿಯಿತು. ಎಲ್ಲರೂ ತಮ್ಮ ಮನೆಗಳಿಗೆ ತೆರಳಿದರು.


ಮುಂದಿನ ಅಧ್ಯಾಯ: ೭. ಲಂಪಾಕಾಧಿಪತಿಯ ಪರಾಜಯ


Leave a Reply

Your email address will not be published. Required fields are marked *