ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 7: ಲಂಪಾಕಾಧಿಪತಿಯ ಪರಾಜಯ

೭. ಲಂಪಾಕಾಧಿಪತಿಯ ಪರಾಜಯ

ಬೆಳ್ಳಗೆ ಬೆಳಗಾಯಿತು. ಪರ್ವತರಾಜನ ಆಪ್ತರಾಯಭಾರಿಯಾದ ಕಮಲಾಪೀಡನು ತನ್ನ ಒಡೆಯನ ಅಪ್ಪಣೆಯಂತೆ ಚಾಣಕ್ಯನನ್ನು ಬಂದು ಕಂಡನು. ಆಗ ಚಾಣಕ್ಯನು ಸಂಧರ್ಭವೋಚಿತವಾದ ಎರಡು ಕಾಗದಗಳನ್ನು ಬರೆದು ಅವಕ್ಕೆ ರಾಜಮುದ್ರೆಯನ್ನೊತ್ತಿ ಕಾಗದಗಳನ್ನು ನಿಯೋಗಿಯ ವಶಕ್ಕೆ ಕೊಟ್ಟನು. ಆ ಬಳಿಕ ‘ಕಾಮರೂಪ ದೇಶಾಧಿಪತಿಯ ರಾಜಧಾನಿಗೆ ಹೋಗಿ ಈ ಕಾರ್ಯವನ್ನು ಮಾಡಿಕೊಂಡು ಬಾ’ ಎಂದು ಅವನು ಮಾಡತಕ್ಕ ಕಾರ್ಯಕೌಶಲವನ್ನು ವಿವರವಾಗಿ ಹೇಳಿ ಕಳುಹಿಸಿಕೊಟ್ಟನು.

ಚಾಣಕ್ಯನ ಅಪ್ಪಣೆಯಂತೆ ನಿಯೋಗಿಯು ಕೆಲವು ದಿನಗಳಾದ ಮೇಲೆ ಕಾಮರೂಪದೇಶದ ರಾಜಧಾನಿಯನ್ನು ಬಂದು ಸೇರಿದನು. ತನ್ನ ಹೆಸರಿನಲ್ಲಿದ್ದ ರಾಜನ ಕಾಗದವನ್ನು ತನ್ನ ಆಪ್ತದೂತನಿಗೆ ಕೊಟ್ಟು ‘ಈ ರೀತಿ ಮಾಡು ‘ ಎಂದು ಮಾಡಬೇಕಾದ ಕೆಲಸವನ್ನು ಅವನಿಗೆ ತಿಳಿಸಿ, ತಾನು ರಾಜಧಾನಿಯ ಉದ್ಯಾನವನದಲ್ಲಿ ಬೀಡಾರ ಮಾಡಿದನು.

ದೂತನು ಕಮಲಾಪೀಡನು ಹೇಳಿದಂತೆ, ಅವನನ್ನು ಅಲ್ಲಲ್ಲಿ ಹುಡುಕುತ್ತ ಜನರನ್ನು ಕೇಳುತ್ತ, ಆ ನಗರದ ಗೂಢಚಾರರು ಬಂದು ಇಳಿಯುವ ಚಾವಡಿಯ ಬಳಿಯಲ್ಲಿ ನಿಂತು ಎಲ್ಲರನ್ನೂ ಕೇಳುವಂತೆ ಅವರನ್ನೂ ಈ ರೀತಿ ಕೇಳಿದನು : * ಎಲೈ ಜನಗಳಿರಾ, ಪರ್ವತರಾಜನ ನಿಯೋಗಿ ಎಲ್ಲಿ ಇಳಿದಿರುವನು? ಅವನಲ್ಲಿ ರಾಜಕಾರ್ಯವುಂಟು. ನೀವು ತಿಳಿದಿದ್ದರೆ ನನಗೆ ದಯಮಾಡಿ ಹೇಳಬೇಕು. ನಿಮಗೆ ಬಹೆಳ ಪುಣ್ಯ ಬರುವುದು.’

ರಾಜಕಾರ್ಯಕ್ಕಾಗಿ ಪರದೇಶದಿಂದ ಬಂದ ಇವನಲ್ಲಿ ಏನೋ ಮೋಸವಿರಬೇಕೆಂದು ತಿಳಿದು ಗೂಢಚಾರರು ಅವನನ್ನು ಬಂಧಿಸಿ ಕಾಗದದೊಡನೆ ಅವನನ್ನು ತಮ್ಮ ರಾಜನ ಬಳಿಗೆ ಕರೆದುಕೊಂಡು ಹೋದರು. ರಾಜನು ರಾಜಮುದ್ರೆಯ ಕಾಗದವನ್ನು ನೋಡಿ, ಇದರಲ್ಲಿ ಏನೋ ವಿಶೇಷವಿದೆಯೆಂದುಕೊಂಡು ದೂತರಿಗೆ ‘ಈ ಕಾಗದ ನಮ್ಮ ಬಳಿ ಇರಲಿ. ಪರ್ವತರಾಜನ ನಿಯೋಗಿಯನ್ನು ಹುಡುಕಿ ತನ್ನಿ. ಅವನು ರಾಜಸ ಸಭೆಯನ್ನು ಹೊಕ್ಕಮೇಲೆ ಈ ದೂತನನ್ನು ಬಿಡಿ. ಅಲ್ಲಿಯವರೆಗೆ ಇವನು ಕಾವಲಿನಲ್ಲಿರಲಿ’ ಎಂದು ಅಪ್ಪಣೆ ಮಾಡಿದನು.

ರಾಜಭಟರು ನಗರದ ಒಳಗೂ ಹೊರಗೂ ಚೆನ್ನಾಗಿ ಹುಡುಕಿ, ಉದ್ಯಾನವನದಲ್ಲಿ ಇಳಿದಿದ್ದ ನಿಯೋಗಿಯನ್ನು ಕಂಡು ‘ರಾಜರ ಅಪ್ಪಣೆಯಾಗಿದೆ. ನೀವು ಆಸ್ಥಾನಕ್ಕೆ ಬರಬೇಕು ‘ ಎಂದು ಬಿನ್ನೈಸಿದರು.

ಕಮಲಾಪೀಡನು ಅಟ್ಟಹಾಸದಿಂದ ಆಸ್ಥಾನಕ್ಕೆ ಬರುತ್ತಿರಲು ಪರ್ವತರಾಜನಐಶ್ವರ್ಯಕ್ಕೆ ಪಾರವಿಲ್ಲವೆಂದು ರಾಜಬೀದಿಯ ಇಕ್ಕೆಲಗಳಲ್ಲಿಯೂ ನಿಂತಿದ್ದ ಜನ ಹೊಗಳಿತು. ನಿಯೋಗಿಯು ರಾಜನಲ್ಲಿಗೆ ಹೋಗಿ ಕೈಮುಗಿದು ತಾನು ತಂದ ಉಡುಗೊರೆಯನ್ನು ಆತನಿಗೊಪ್ಪಿಸಿ ‘ರಾಜೋತ್ತಮರೇ, ರಾಜಾಧಿರಾಜ ಪರ್ವತೇಶ್ವರರು ನಿಮ್ಮ ಕುಶಲವನ್ನು ಕೇಳಿದರು? ಎಂದು ಬಿನ್ನೈಸಿದನು.

ಅದಕ್ಕೆ ಪ್ರತಿಯಾಗಿ ರಾಜನು ‘ನಿಯೋಗಿಯೇ, ನಾವೆಲ್ಲರೂ ಕ್ಷೇಮವಾಗಿರುವೆವು. ನಿಮ್ಮ ಅರಸರಿಗೆ ಕುಶಲವೇ? ಏನು ಕಾರ್ಯಕ್ಕಾಗಿ ನಿಮ್ಮನ್ನು ಕಳುಹಿಸಿದರು? ‘ ಎಂದು ಕೇಳಿದನು.

ಆ ಮಾತಿಗೆ ಕಮಲಾನೀಡನು ‘ದೇವರೇ, ಕುಲೀನರಾದ ನಿಮ್ಮ ಸಂಬಂಧವನ್ನು ನಮ್ಮ ದೊರೆ ಬಯಸಿ ನನ್ನನ್ನು ಕಳುಹಿಸಿದರು. ಸಮಾನ ಕುಲದವರಾದ ನಿಮ್ಮಿಬ್ಬರಿಗೂ ಸಂಬಂಧವುಂಟಾದರೆ ಹಾಲ್ಲಡಲಿನೊಡನೆ ಇಕ್ಷುಸಾಗರೆ ಬೆರೆತಂತಾಗುವುದು. ಇದರಿಂದ ಲೋಕಕ್ಕೆ ಮಂಗಳನವುಂಟು. ಈ ವಿಷಯವನ್ನು ತಿಳಿಸುವ ನಿರೂಪವಿದು’ ಎಂದು ಕಾಗದವನ್ನು ರಾಜನಿಗೆ ಒಪ್ಪಿಸಿದನು.

ರಾಜನು ಅದನ್ನು ಬಿಚ್ಚಿ ನೋಡಲು, ಅದರಲ್ಲಿ ಈ ರೀತಿ ಬರೆ ದಿತ್ತು: ” ಸ್ವಸ್ತಿಶ್ರೀ, ನಮಗೆ ಪರಮಪ್ರಿಯರಾಗಿರುವ ಕಾಮರೂಪ ದೇಶಾಧಿಪತಿಗಳಾದ ಸೂರ್ಯವರ್ಮರಿಗೆ ಪರ್ವತೇಶ್ವರರು ಮಾಡುವ ವಿಜ್ಞಾಪನೆ ಏನೆಂದರೆ – ನಿಮ್ಮ ಸೀಮಂತಪುತ್ರಿಯನ್ನು ನಮ್ಮ ಕುಮಾರ ಮಲಯಕೇತುವಿಗೆ ತಂದು ಮದುವೆ ಮಾಡಬೇಕೆಂಬ ಬಯಕೆಯಿಂದ ನಮ್ಮ ನಿಯೋಗಿಯನ್ನು ನಿಮ್ಮ ಬಳಿ ಕಳುಹಿಸಿರುವೆವು. ಇದಕ್ಕೆ ನೀವು ನಿಮ್ಮ ಒಪ್ಪಿಗೆಯನ್ನು ಸೂಚಿಸಿ ನಿಮ್ಮ ನಿಯೋಗಿಯೊಡನೆ ಕನ್ಯಾರತ್ನದ ಜಾತಕವನ್ನು ನಿಮ್ಮ ಪುರೋಹಿತನ ಸಂಗಡ ಕಳುಹಬೇಕು. ಈ ಶುಭ ಕಾರ್ಯ ಬೇಗ ನೆರನೇರುವುದರಿಂದ ನಮ್ಮ ಅಭ್ಯುದಯ ನಿಮ್ಮದಾಗುವುದು. ನಿಮ್ಮ ಯೋಗಕ್ಷೇಮವೇ ನಮ್ಮದಾಗುವುದು.’

ಓಲೆಯ ವಿಷಯವನ್ನು ನೋಡಿ ಮಹಾರಾಜನಿಗೆ ಬಲು ಸಂತೋಷವಾಯಿತು. ತನ್ನ ಬಳಿ ಇರುವ ಕಾಗದ ಇದೇ ಅಭಿಪ್ರಾಯವನ್ನು ಸೂಚಿಸಬಹುದೆಂದು ನಿಯೋಗಿಗೆ ನಾಲ್ಕು ಉಪಚಾರದ ಮಾತುಗಳನ್ನಾಡಿ ‘ನೀವು ಬಂದಮೇಲೆ ತಡವಾದುದರಿಂದಲೋ ಏನೋ ನಿಮ್ಮ ರಾಜರು ಬರೆದು ಕಳುಹಿಸಿರುವ ನಿರೂಪ ನಮ್ಮೆಡೆಗೆ ಬಂದಿದೆ’ ಎಂದು ಆ ನಿರೂಪವನ್ನು ಅವನ ಕೈಗೆ ಕೊಟ್ಟನು. ಕಮಲಾಪೀಡನು ಅದನ್ನು ಓದಿಕೊಂಡು ಎಲ್ಲವನ್ನೂ ಕಳೆದುಕೊಂಡವನಂತೆ ತಲೆಬಾಗಿ ಯೋಚಿಸುತ್ತ ನಿಂತುಕೊಂಡುಬಿಟ್ಟನು. ಅವನ ಭಾವವನ್ನು ನೋಡಿ ರಾಜನು ‘ಅಯ್ಯಾ ನಿಯೋಗಿಯೇ, ಕಾಗದವನ್ನು ನೋಡಿಕೊಂಡು ಏಕೆ ಉತ್ಸಾಹರಹಿತನಾಗಿ ಯೋಚಿಸುತ್ತಿರುವೆ?’ ಎನ್ನಲು, ಕಮಲಾಪೀಡನು ‘ಸ್ವಾಮಿ, ಮತ್ತೇನೂ ಇಲ್ಲ’ ಎಂದು ವಿವರವನ್ನು ಹೇಳದೆ ನಾಚಿ ಸುಮ್ಮನಾದನು. ರಾಜನು ಆ ಕಾಗದವನ್ನು ಓದಬೇಕೆನ್ನಲು ಮಂತ್ರಿ ಓದಿದನು. ಅದರಲ್ಲಿ ಈ ರೀತಿ ಬರೆದಿತ್ತು :–

” ಶ್ರೀ, ಪರ್ವತೇಶ್ವರರು ಕಾಮರೂಪದೇಶಕ್ಕೆ ಹೋಗಿರುವ ನಮ್ಮ ನಿಯೋಗಿಯಾದ ಕಮಲಾಪೀಡನಿಗೆ ಬರೆಸಿ ಕಳುಹಿಸಿದ ನಿರೂಪವೇನೆಂದರೆ- ನೀನು ಕನ್ಯಾರ್ಥಿಯಾಗಿ ಕಾಮರೂಪಾಧಿಪತಿಗಳ ಬಳಿಗೆ ಹೋಗಿರುವುದು ಸರಿಯಷ್ಟೆ. ಅಲ್ಲಿ ನೀನು ಅರಸರನ್ನು ಕಂಡೆಯೋ ಇಲ್ಲವೋ ತಿಳಿಯದು. ನಿನಗೆ ಗುಟ್ಟಾಗಿ ತಿಳಿಸಬೇಕಾದ ಇನ್ನೊಂದು ವಿಷಯವುಂಟು. ಈಚೆಗೆ ಲಂಪಾಕಾಧಿಪತಿಯ ಸಭೆಯಲ್ಲಿ ರಾಜಮಂತ್ರಿಗಳು ಮಾತನಾಡುವಾಗ ಎಲ್ಲ ದೇಶದ ರಾಜರ ಪ್ರಶಂಸೆ ಬಂತು. ಆಗ ಲಂಪಾಕಾಧಿಪತಿ ” ಕಾಮರೂಪದೇಶಾಧಿಪತಿಯ ವಂಶದಲ್ಲಿ ವರ್ಣಸಾಂಕರ್ಯವುಂಟಾಗಿದೆ. ಅವರು ಶೌರ್ಯದಲ್ಲಿ ಒಂದು ಮಟ್ಟ ಕೆಳಗೆ? ಎಂದನಂತೆ. ನರಕಾಸುರನ ವಂಶದಲ್ಲಿ ಈ ಕಾರ್ಯ ನಡೆದಿಲ್ಲವೆಂಬುದು ನಮಗೆ ಗೊತ್ತು. ಏನೋ ಮಾತ್ಸರ್ಯದಿಂದ ಲಂಪಾಕಪತಿ ಈ ತುಚ್ಛ ವಚನವನ್ನು ಆಡಿರಬೇಕು. ಆದರೂ ನಾವು ಮಾಡುವ ಸಂಬಂಧ ಬಹುಕಾಲ ನಿಲ್ಲತಕ್ಕದ್ದು. ಆದ್ದರಿಂದ ಆ ರಾಜನ ಕುಲಶೀಲಗಳನ್ನು ಪರೋಕ್ಷದಲ್ಲಿ ಚೆನ್ನಾಗಿ ವಿಚಾರಿಸಿಕೊಂಡು ನಿನ್ನ ಮನಸ್ಸು ಒಪ್ಪಿದರೆ ಈ ಶುಭಕಾರ್ಯ ಬೆಳೆಯಲು ನಿಶ್ಚಯಿಸಿಕೊಂಡು ಬಾ.’

ಓಲೆಯ ಒಕ್ಕಣೆಯನ್ನು ಕೇಳಿ ಕಾಮರೂಪಾಧಿಪತಿ ಕಲ್ಲಿಟ್ಟು ಕೆಣಕಿದ ಹುಲಿಯಂತೆ ಕೋಪದಿಂದ ‘ಎಲೈ ಮಂತ್ರಿ, ನೀಚನಾದ ಲಂಪಾಕಾಧಿಪತಿ ನಮ್ಮ ವಂಶದವರ ಮೇಲಾಡಿದ ಕೆಟ್ಟ ಮಾತಿಗೆ ಅವನ ತಲೆಯನ್ನು ತೆಗೆಯದೆ ಈ ಕಿರೀಟವನ್ನು ಧರಿಸುವುದೇ ಇಲ್ಲ. ಈ ಮಾತಿಗೆ ಪ್ರತಿ ಹೇಳಿದವರು ನನಗೆ ಹಗೆಗಳೇ ಸರಿ. ಈಗಲೇ ನಮ್ಮ ಸೇನೆ ಲಂಪಾಕದೇಶಕ್ಕೆ ತೆರಳಲು ಸಿದ್ಧವಾಗಲಿ. ನಾಳೆ ನಮಗೆ ಯುದ್ಧಕ್ಕೆ ಪ್ರಯಾಣ’ ಎಂದು ಅಪ್ಪಣೆಮಾಡಿದನು.

ಸೂರ್ಯವರ್ಮನು ಕಮಲಾಪೀಡನಿಗೆ ಉಚಿತವಾದ ಕಾಗದವನ್ನು ಬರೆಸಿಕೊಟ್ಟು ಮರ್ಯಾದೆಮಾಡಿ, ಅವನನ್ನುಬಿಳ್ಕೊಟ್ಟನು. ಆಗ ರಾಜಧಾನಿಯಲ್ಲಿ ಯುದ್ಧ ಸೂಚಕ ವಾದ್ಯಗಳು ಮೊಳಗಿದುವು. ಕಮಲಾಪೀಡನು ಮೂರು ನಾಲ್ಕು ದಿನ ಅಲ್ಲಿಯೇ ಇದ್ದು ಸೂರ್ಯವರ್ಮನ ಸೈನ್ಯ ಲಂಪಾಕದೇಶಕ್ಕೆ ತೆರಳಿದುದನ್ನು ನೋಡಿ ಪರ್ವತ ರಾಜ್ಯಕ್ಕೆ ಹಿಂದಿರುಗಿದನು.


ಮುಂದಿನ ಅಧ್ಯಾಯ: ೮. ಸೇನಾ ಪ್ರಯಾಣ


Leave a Reply

Your email address will not be published. Required fields are marked *