ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 8: ಸೇನಾ ಪ್ರಯಾಣ
೮. ಸೇನಾ ಪ್ರಯಾಣ
ಕಮಲಾಪೀಡನು ಬಂದು ಪರ್ವತರಾಜನನ್ನು ಕಂಡು ಕೈಮುಗಿದು, ‘ಜೀಯಾ ನಾನು ಹೋಗಿದ್ದ ಕಾರ್ಯ ಜಯವಾಯಿತು’ ಎಂದು ಅದರ ವಿವರಗಳನ್ನು ರಾಜನಿಗೆ ಗುಟ್ಟಾಗಿ ಬಿನ್ನೈಸಿದನು. ಪರ್ವತರಾಜನು ಈ ಸುದ್ದಿಯನ್ನು ಕೇಳಿ ಬೆರಗಾಗಿ, ಮೂಗಿನ ಮೇಲೆ ಬೆರಳಿಟ್ಟು ತಲೆದೂಗಿ ಶಬರವರ್ಮನನ್ನು ಕುರಿತು ಎಲೈ ಮಂತ್ರಿ, ಚಾಣಕ್ಯನು ಮಹಾ ಬುದ್ಧಿ ಸಂಪನ್ನ. ನಾವು ಮಾಡಬೇಕಾದ ಕಾರ್ಯ ಗಂಧರ್ವರಿಂದಲೇ ಆಯಿತೆನ್ನುವಂತೆ ನಮ್ಮಿಂದ ಆಗಬೇಕಾದ ಕಾರ್ಯ ಕಾಮರೂಪಾಧಿಪತಿಯಿಂದಲೇ ಆಯಿತು. ಚಂದ್ರಗುಪ್ತನಿಗೆ ಉಪಕಾರ ಮಾಡುವುದಕ್ಕೆ ಬದಲು ಈಗ ನಾವೇ ಆತನಿಗೆ ಪ್ರತಿಯಾಗಿ ಉಪಕಾರ ಮಾಡಬೇಕಾಗಿ ಬಂತು. ಪಾಟಲೀಪುರಕ್ಕೆ ಸಮಸ್ತ ಸೇನೆಯೊಡನೆ ಈಗ ನಾವೇ ತೆರಳಬೇಕು’ ಎಂದನು. ಕೂಡಲೇ ಚಾಣಕ್ಯನನ್ನು ಸಭೆಗೆ ಬರಮಾಡಿಕೊಂಡು ಈ ಒಸಗೆಯನ್ನು ಆತನಿಗೆ ತಿಳಿಸಿ ಚಾಣಕ್ಯನ ಜಾಣ್ಮೆಯನ್ನು ಹೊಗಳಿ ಉಪಚರಿಸಿ ಬೀಡಾರಕ್ಕೆ ಕಳುಹಿಸಿದನು.
ಸಂಜೆಯಾಯಿತು. ಮನ್ಮಥನ ನಗೆಯಂತೆ ಬೆಳುದಿಂಗಳನ್ನು ಸೂಸುತ್ತ ಚಂದ್ರನು ಮೂಡಿಬಂದನು. ಸಂಜೆವೆಣ್ಣು ಮುಡಿದ ಅರಳುಗಳಂತೆ ತಿಳಿನೀಲಿಯಾಕಾಶದಲ್ಲಿ ಚುಕ್ಕೆಗಳು ಮಿನುಗಿದುವು. ಆಗ ಪರ್ವತರಾಜನು ತನ್ನ ಮಗನಾದ ಮಲಯಕೇತುವನ್ನು ಕರೆದು ‘ಕುಮಾರ, ನಂದರನ್ನು ನಿಗ್ರಹಿಸಲು ಚಂದ್ರಗುಪ್ತನೊಡನೆ ನಾವೇ ಸೇನಾಸಮೇತವಾಗಿ ತೆರಳಬೇಕಾಗುತ್ತದೆ. ಈ ಕಾರ್ಯವನ್ನು ನಾವು ಮಾಡಿಕೊಟ್ಟರೆ ನಮಗೆ ಉಪಕಾರಮಾಡುವ ವಿಷಯದಲ್ಲಿ ಆತನ ಅಭಿಪ್ರಾಯವನ್ನು ತಿಳಿದು ಬಾ’ ಎಂದು ಕಳುಹಿಸಿಕೊಟ್ಟ ನು.
ಮಲಯಕೇತು ಚಂದ್ರಗುಪ್ತನನ್ನು ಬಂದು ಕಂಡನು. ಪರಸ್ಪರ ಕುಶಲಪ್ರಶ್ನೆಯಾದ ಮೇಲೆ ಚಾಣಕ್ಯನು ಮಲಯಕೇತುವನ್ನು ಕುರಿತು
” ಕುಮಾರ, ಚಂದ್ರಗುಪ್ತನು ನಿಮ್ಮ ಸ್ನೇಹನನ್ನು ಬಯಸಿ ಬಂದಿದ್ದಾನೆ. ನಿಮ್ಮಿಬ್ಬರಿಗೆ ಸ್ನೇಹವಾದಲ್ಲಿ ಉಳಿದ ಸಾಮಂತರಾಜರು ನಿಮ್ಮಡಿಗಳಿಗೆ ತಲೆಬಾಗುವುದರಲ್ಲಿ ಸಂದೇಹವೇನು? ನಮ್ಮ ಕೆಲಸ ಕೈಗೂಡಿದಾಗ ನಿಮಗೆ ಅರ್ಧ ರಾಜ್ಯವನ್ನು ಕೊಡುವುದಾಗಿ ಚಂದ್ರಗುಪ್ತನು ತನ್ನ ಅಕ್ಷರದಿಂದಲೇ ಬರೆದ ಕಾಗದವಿದು. ಇದನ್ನು ನಿಮ್ಮ ತಂದೆಗೆ ತೋರಿಸಬಹುದು. ಈ ನಮ್ಮ ಆಲೋಚನೆ ಹಗೆಗಳಿಗೆ ತಿಳಿಯುವುದಕ್ಕೆ ಮುಂಚೆ ಪಾಟಲೀಪುರದ ಮುತ್ತಿಗೆಗೆ ನಿಮ್ಮ ಸೈನ್ಯ ತೆರಳಲಿ” ಎಂದು ಆ ಕಾಗದವನ್ನು ಅವನ ಕೈಗೆ ಕೊಟ್ಟು ಉಪಚರಿಸಿ ಸುಮ್ಮಾನದಿಂದ ಕಳುಹಿಸಿಕೊಟ್ಟನು.
ಮಲಯಕೇತು ಹಿಂದಿರುಗಿ ಬಂದು ತಂದೆಗೆ ನಮಸ್ಕರಿಸಿ ‘ತಂದೆಯೇ, ದುಂಬಿಗಳು ಪರಿಮಳದಿಂದ ತಾಳೆಯ ಹೂವನ್ನು ತಿಳಿಯುವಂತೆ ಬುದ್ಧಿವಂತನಾದ ಚಾಣಕ್ಯನು ನಾನು ಹೋದೊಡನೆಯೇ ತಾನು ಮೊದಲೇ ಬರೆಸಿಟ್ಟಿದ್ದ ಅರ್ಧರಾಜ್ಯ ಕೊಡುವ ಚಂದ್ರಗುಪ್ತನ ಅಕ್ಷರದ ಈ ಕಾಗದವನ್ನು ಕೊಟ್ಟನು ‘ ಎಂದು ಅದನ್ನು ತೋರಿಸಿದನು. ಆ ಕಾಗದವನ್ನು ನೋಡಿಕೂಂಡು ಪರ್ವತೇಶ್ವರನು ಸಂತೋಷದಲ್ಲಿ ಮುಳುಗಿಹೋದನು.
ಪಾಟಲೀಪುರದ ಮುತ್ತಿಗೆಗೆ ಸರ್ವತರಾಜನ ಸೈನ್ಯ ಬಹು ವೈಭವದಿಂದ ಹೊರಟಿತು. ಆ ಸಮಯದಲ್ಲಿ ಚಾಣಕ್ಯನು ಚಂದ್ರಗುಪ್ತನಿಗೆ ‘ಕುಮಾರ, ಮಲಯಕೇತುವಿನ ಕೈಯಲ್ಲಿ ಕೊಟ್ಟಿದ್ದ ಕಾಗದ ಪರ್ವತೇಶ್ವರನ ಮನಸ್ಸನ್ನು ಪರೀಕ್ಷಿಸುವುದಕ್ಕಾಗಿ. ಅವನು ಅದನ್ನು ಹಿಂದಕ್ಕೆ ಕಳುಹಿಸದೆ, ಬಹುಲಾಭ ಪಡೆದವನಂತೆ ಉತ್ಸಾಹದಿಂದ ಪ್ರಯಾಣ ಹೊರಟಿದ್ದಾನೆ. ಈತನಿಗೆ ಈಗ ನಾವು ಮಾಡಿದ ಉಪಕಾರ ಕೃತಘ್ನನಾದ ರೋಗಿಗೆ ಮಾಡಿದ ಚಿಕಿತ್ಸೆಯಂತಾಯಿತು. ನಮ್ಮ ಕಾರ್ಯವಾದಾಗ ಅರ್ಧರಾಜ್ಯದ ಮಾತು ಬರುವುದು; ಇರಲಿ. ಆಗ ಅದಕ್ಕೆ ತಕ್ಕ ಉಪಾಯವನ್ನು ಕಂಡುಕೊಳ್ಳೋಣ ‘ ಎಂದು ಪ್ರಯಾಣಕ್ಕೆ ಸಿದ್ಧನಾದನು. ಚಾಣಕ್ಯನು ಪಲ್ಲಕ್ಕಿಯನ್ನೇರಿದನು. ಚಂದ್ರಗುಪ್ತನು ತನ್ನ ಭಾಗದ ಭಾಗ್ಯದೇವತೆಯಂತಿದ್ದ ಚಾಣಕ್ಯನಿಗೆ ನಮಸ್ಕರಿಸಿ, ಮಲಯಕೇತುವಿನೊಡನೆ ಮದ್ದಾನೆಯನ್ನೇರಿ ಬಂದನು. ಪರ್ವತರಾಜನು ಆನೆಯನ್ನೇರಿ ಅಟ್ಟಹಾಸದಿಂದ ಯುದ್ಧಕ್ಕೆ ಹೊರಟನು.
ಮುಂದಿನ ಅಧ್ಯಾಯ: ೯. ಮಿತ್ರಭೇದ