ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 9: ಮಿತ್ರಭೇದ

೯.ಮಿತ್ರಭೇದ

ಚಾಣಕ್ಯ ಚಂದ್ರಗುಪ್ತರೊಡನೆ ಪರ್ವತರಾಜನು ಪಾಟಲೀಪುರವನ್ನು ಮುತ್ತಲು ದಂಡೆತ್ತಿ ಬರುತ್ತಿರುವನೆಂಬ ಸಮಾಚಾರ ರಾಕ್ಷಸನಿಗೆ ಗೂಢಚಾರರಿಂದ ತಿಳಿಯಿತು. ನಂದರಾಜ್ಯದ ಗಡಿದುರ್ಗಗಳು ಒಂದೊಂದಾಗಿ ಪರ್ವತರಾಜನ ಸಾಮಂತರ ವಶವಾದುವು. ತುಂಟ ಪಾಳೆಯಗಾರರು ಇದೇ ಸಮಯವೆಂದು ತಿಳಿದು ಸ್ವತಂತ್ರರಾಗಲು ಯತ್ನಿಸಿದರು. ನಂದರಾಜ್ಯಕ್ಕೆ ಈಗ ನಿಜವಾಗಿಯೂ ವಿಪತ್ತು ತಲೆ ದೋರುವಂತೆ ಕಂಡುಬಂತು. ಹಿಂದೆ ನಂದರು ದಾಯಾದಿಗಳಾದ ಮೌರ್ಯರನ್ನು ಸುಟ್ಟು ಬೂದಿಮಾಡಿದ್ದರೂ ಚಂದ್ರಗುಪ್ತನೊಬ್ಬನು ಮಾತ್ರ ಆ ಬೂದಿಯಲ್ಲಿ ಕಿಡಿಯಾಗಿ ಉಳಿದನು. ಈ ಕಿಡಿಗೆ ಈಗ ಬ್ರಾಹ್ಮಣನ ತೇಜಸ್ಸೆಂಬ ನೆರೆ ಬೇರೆ ದೊರಕಿತು. ಇನ್ನು ಕೇಳುವುದೇನು? ನಂದರು ಮೌರ್ಯರನ್ನು ಕೊಂದದ್ದೇ ಅನುಚಿತ. ಜೊತೆಗೆ ಚಂದ್ರಗುಪ್ತನು ಪರ್ವತರಾಜನೊಡನೆ ಸ್ನೇಹ ಬೆಳೆಸಲು ಅವಕಾಶ ಕೊಟ್ಟು ಸ್ವಜನ ವಿರೋಧವನ್ನು ತಂದುಕೊಂಡರು. ಇವುಗಳೊಡನೆ ಬ್ರಾಹ್ಮಣಾಪಮಾನದ ಅಪರಾಧ ತ್ರಿವೇಣಿ ಸಂಗಮದಂತೆ ಬಂದು ಸೇರಿತು. ಚಂದ್ರಗುಪ್ತನು ಗೆಲ್ಲುವ, ಸೋಲುವ ಮಾತು ಹಾಗಿರಲಿ. ನಂದರು ಹಾಳಾಗಿ ಅವರ ನಗರ ವೈರಿಗಳಿಂದ ಸೂರೆಯಾದರೆ ಅವನಿಗೆ ಅಷ್ಟೇ ಸಂತೋಷ. ನಂದರು ತನ್ನಂತಾದರೆನ್ನುವ ತೃಪ್ತಿ ಬರುವುದು ಅವನಿಗೆ. ನಂದರು ದಾಯಾದಿಗಳನ್ನು ಕೊಂದು ಸುಖಿಗಳಾಗಬೇಕೆಂದು ಬಗೆದರು. ಆದರೆ ಈಗ ಅವರ ನಾಶಕ್ಕೆ ದೈವ, ಚಾಣಕ್ಯ ಚಂದ್ರಗುಪ್ತ ರೊಡನೆ ಒಂದುಗೂಡಿ ಸಂಚುಮಾಡಿತು. ಒಟ್ಟಿನಲ್ಲಿ ರಾಜಕಾರ್ಯ ಈಗ ಪ್ರಬಲವಾದಂತೆ ಅಮಾತ್ಯನಿಗೆ ಕಂಡುಬಂತು. ಈ ವಿಷಮ ಸಮಯದಲ್ಲಿ ಸ್ವಾಮಿಭಕ್ತನಾದವನು ಕೈಕಟ್ಟಿಕೊಂಡು ಕುಳಿತಿರಲಾದೀತೇ? ಮುಂದಿನ ರಾಜಕಾರ್ಯವನ್ನು ನೆನೆದು, ರಾಯಸದವರನ್ನು ಕರೆಸಿ ದಶಾರ್ಣ, ಶೂರದೇಶಾಧಿಪತಿಗಳಿಗೆ ರಾಕ್ಷಸನು ಈ ರೀತಿ ನಿರೂಪಗಳನ್ನು ಬರೆಸಿದನು.

‘ಮಿತ್ರರೇ, ಕೆಲವು ದಿನಗಳ ಹಿಂದೆ ನಿಮಗೂ ಪರ್ವತರಾಜನಿಗೂ ಕಲಹವುಂಟಾದುದು ಸರಿಯಷ್ಟೆ. ಆಗ ನೀವು ನಮ್ಮನ್ನು ಸಹಾಯಕ್ಕೆ ಬರಬೇಕೆಂದು ಪ್ರಾರ್ಥಿಸಿದಿರಿ. ಆಗ ನಾವು ನಿಮಗೂ ತಕ್ಕ ಆಲೋಚನೆಯನ್ನು ಹೇಳಿ, ಪರ್ವತರಾಜನಿಗೂ ಸರಿಯಾದ ದಾರಿ ತೋರಿ ನಿಮ್ಮಿಬ್ಬರಿಗೂ ಆಗಬೇಕಾದ ಮಹಾಕಲಹವನ್ನು ತಪ್ಪಿಸಿದೆವು. ಈಗ ಪರ್ವತರಾಜನು ನಾವು ಮಾಡಿದ ಉಪಕಾರವನ್ನು ಮರೆತು, ನಮ್ಮ ಮೇಲೆ ದಂಡೆತ್ತಿ ಬರುತ್ತಿದ್ದಾನೆ. ಆ ಕೃತಘ್ನನನ್ನು ಪಟ್ಟಣಕ್ಕೆ ಹಿಂದಿರುಗಲು ಅವಕಾಶಕೊಡದೆ ಅವನನ್ನು ಇಲ್ಲೇ ನಾಶಮಾಡುತ್ತೇವೆ. ನೀವು ನಮಗೆ ಪರಮಮಿತ್ರರಾದುದು ನಿಜವಾದಲ್ಲಿ ಸೇನೆಯೊಡಗೂಡಿ ಅವನ ಗಡಿದುರ್ಗಗಳನ್ನು ಹಿಡಿದು, ರಾಜಧಾನಿಯನ್ನು ವಶಪಡಿಸಿಕೊಳ್ಳಿ. ಪರ್ವತರಾಜನ ರಾಜಧಾನಿ ನಿಮ್ಮ ವಶವಾದರೆ ಆತನ ದೇಶ ಕೋಶಗಳೆಲ್ಲ ನಿಮಗೇ ಸೇರುವುವು.’

ಈ ಲೇಖನಗಳನ್ನು ಚಾರರ ವಶಕ್ಕೆ ಕೊಟ್ಟು ‘ವೇಗವಾದ ಕುದುರೆಗಳನ್ನೇರಿ ಈ ನಿರೂಪಗಳನ್ನು ಆಯಾ ದೇಶದ ಅರಸರಿಗೆ ತಲುಪಿಸಿ, ಅವರ ಸೇನೆ ಸಿದ್ಧವಾಗಿ ಪರ್ವತರಾಜ್ಯಕ್ಕೆ ಹೊರಟುದನ್ನು ನೋಡಿ ಬಂದು ನಮಗೆ ಬೇಗ ತಿಳಿಸಿ’ ಎಂದು ಹೇಳಿ ಅವರಿಗೆ ಒಂದು ವರ್ಷದ ಸಂಬಳವನ್ನು ಉಚಿತವಾಗಿ ಕೊಟ್ಟು ಕಳುಹಿಸಿದನು.

ನಂದರ ಪರವಾಗಿ ಚಂದ್ರಗುಪ್ತನೊಡನೆ ಯುದ್ಧ ನಡೆಸುವ ಭಾರ ರಾಕ್ಷಸನದಾಯಿತು. ರಾಜತಂತ್ರದಲ್ಲಿ ಹಸುಳೆಗಳಂತಿದ್ದ ನಂದರು ಮುಂದಿನ ಕಾರ್ಯಕ್ಕೆ ತಮ್ಮ ನಚ್ಚಿನ ಮಂತ್ರಿಯನ್ನೆ ನಂಬಿದರು. ರಾಕ್ಷಸನು ಏಕಾಂತದಲ್ಲಿ ಕುಳಿತು ‘ಈ ಪಟ್ಟಣದ ಜನರಿಗೂ ಅರಸುಗಳಿಗೂ ಗ್ರಹಬಲ ಹೇಗಿರುವುದೋ? ಬುದ್ಧಿವಂತರಾದ ಜೋಯಿಸರನ್ನು ಕೇಳಿ ತಿಳಿಯಬೇಕು’ ಎಂದು ಚಿಂತಿಸಿದನು. ಅದನ್ನು ಆಮೇಲೆ ತಿಳಿದರಾದೀತೆಂದು ನಿರ್ಧರಿಸಿ ರಾಯಸದವರನ್ನು ಕರೆಸಿ ಅವರಿಂದ ನಿರೂಪಗಳನ್ನು ಬರೆಸಲು ಸಿದ್ಧನಾದನು. ಚಾಣಕ್ಯನ ಗೆಳೆಯನಾದ ಇಂದುಶರ್ಮನು ಕ್ಷಪಣಕ ವೇಷದಿಂದ ರಾಕ್ಷಸನನ್ನು ಆಶ್ರಯಿಸಿದ್ದನಷ್ಟೆ. ಇಂದುಶರ್ಮನಾದರೋ ವಾದ, ವಶ್ಯ, ಜ್ಯೋತಿಷ್ಯ, ಮಂತ್ರ ನೀತಿಗಳಲ್ಲಿ ಅತಿ ಕುಶಲ. ಈಗ ಈತನು ರಾಕ್ಷಸನ ಮನೆಯ ಬಾಗಿಲಲ್ಲಿ ಬಂದು ನಿಂತು, ತನ್ನ ಬರುವಿಕೆಯನ್ನು ರಾಕ್ಷಸನಿಗೆ ತಿಳಿಸುವಂತೆ ದೂತರಿಗೆ ತನ್ನ ಪಿಂಛದಿಂದ ಸನ್ನೆಮಾಡಿದನು. ರಾಕ್ಷಸನ ಅಪ್ಪಣೆಯಂತೆ ಅವನನ್ನು ಒಳಕ್ಕೆ ಬಿಡಲು ಕ್ಷಪಣಕನು ಅಮಾತ್ಯನಿಗೆ ಹರಸಿ ಕುಳಿತುಕೊಂಡನು. ಆತನನ್ನು ನೋಡಿ ರಾಕ್ಷಸನು–

‘ಕ್ಷಪಣಕರೇ, ನೆನೆಸಿದಂತೆ ಒಳ್ಳೆಯ ಸಮಯದಲ್ಲಿ ಬಂದಿರಿ!’ ಎಂದನು.

ಅದಕ್ಕೆ ಕ್ಷಪಣಕನು ‘ಅಮಾತ್ಯರೇ, ನಾವು ಸಂನ್ಯಾಸಿಗಳು. ಕಾಡೇ ನಮ್ಮ ವಾಸಸ್ಥಳ. ಎಲ್ಲವನ್ನೂ ತ್ಯಾಗಮಾಡಿದವರು ನಾವು. ನಿಮ್ಮಲ್ಲಿ ಇರುವ ಆದರದಿಂದ ನಿಮ್ಮಲ್ಲಿ ಮೌನವನ್ನು ಬಿಟ್ಟು, ನಿಮ್ಮಕಲ್ಯಾಣವನ್ನು ಬಯಸುತ್ತಿದ್ದೇವೆ. ನಾಲ್ವಾರು ದಿನಗಳಿಂದ ತಮ್ಮ ದರ್ಶನವೇ ಇಲ್ಲದಾಗಿದೆ. ನಾವಿಲ್ಲಿದ್ದು ಏನು ಪ್ರಯೋಜನ? ‘ ಎಂದು ನುಡಿದನು.

“ರಾಜಕಾರ್ಯಗೌರವದಿಂದ, ಕ್ಷಪಣಕರೇ, ತಮ್ಮನ್ನು ಕರೆಕಳುಹಿಸಲಾಗಲಿಲ್ಲ. ಈಗ ನೀವು ಬಂದುದು ಒಳ್ಳೆಯದೇ ಆಯಿತು. ನಿಮ್ಮನ್ನು ಒಂದು ಪ್ರಶ್ನೆ ಕೇಳಬೇಕಾಗಿದೆ.’

ಕ್ಷಪಣಕನು ಸಮಯಜ್ಞನಾದುದರಿಂದೆ ರಾಕ್ಷಸನ ಭಾವವನ್ನು ಗ್ರಹಿಸಿದವನಂತೆ ನಟಿಸಿ ” ಅಮಾತ್ಯರೆ ನೀವು ಕೇಳಬಯಸುವ ಪ್ರಶ್ನೆ ರಾಜರಿಗೆ ಆತಂಕವನ್ನೂ ಶತ್ರುಗಳ ಬರುವಿಕೆಯನ್ನೂ ಸೂಚಿಸುತ್ತದೆ. ಈ ಲಗ್ನಕ್ಕೆ ಶತ್ರುಗ್ರಹವನ್ನು ಶತ್ರುಗ್ರಹ ನೋಡುವುದರಿಂದ ನಿಮ್ಮ ಮೇಲೆ ದಂಡೆತ್ತಿ ಬರುವ ಶತ್ರು ಬದುಕಿ ಹಿಂದಿರುಗಲಾರ. ಇದಕ್ಕೆ ನನ್ನ ವ್ರತವೇ ಸಾಕ್ಷಿ, ನಿಮಗೆ ಕಾರ್ಯಾವಸಾನದಲ್ಲಿ ಜಯಲಾಭವೆಂದು ಹೇಳಬೇಕು. ಗ್ರಹಗತಿಗಳನ್ನು ನೋಡಿದರೆ ಶತ್ರುವಿಗೆ ಸಹಾಯಕರಾಗಿ ಬಂದವರು ಭೇದಕ್ಕೆ ಒಳಗಾದಾರು. ಆಗ ದಂಡೋಪಾಯದಿಂದ ಶತ್ರು ಹತನಾದಾನು ಎಂದು ಹೇಳಿ, ಚಾಣಕ್ಯನು ಹಿಂದೆ ತನಗೆ ಹೇಳಿದ್ದ ಮಾತನ್ನು ನೆನೆದು * ಅಮಾತ್ಯರೇ, ನನ್ನ ಮಾತು ತಮ್ಮ ಮನಸ್ಸಿಗೆ ಬಂದರೆ, ಈ ಅನಿಷ್ಟ ನಿವಾರಣೆಗಾಗಿ ನದೀತೀರದಲ್ಲಿ ಇದೇ ಲಗ್ನದಲ್ಲಿ ಜಪಶೀಲರಾದ ಬ್ರಾಹ್ಮಣರಿಂದ ಶತ್ರುಪಲಾಯನ ಜಪಮಾಡಿಸಿದರೆ ಈ ಅನಿಷ್ಟ ನಿವೃತ್ತಿಯಾಗುವುದು’ ಎಂದನು.

ಕ್ಷಪಣಕನ ಮಾತಿನಿಂದ ಸಂತೋಷಗೊಂಡ ರಾಕ್ಷಸನು ‘ಕ್ಷಪಣಕರೇ ನಿಮ್ಮ ಅಭಿಪ್ರಾಯ ನಮ್ಮ ಮನಸ್ಸಿಗೆ ಬಂತು. ಜ್ಯೋತಿಷ್ಯದಲ್ಲಿ ನೀವು ಮಹಾ ಸಮರ್ಥರು. ನೀವು ನಮ್ಮನ್ನು ಬಿಡದೆ ಇಲ್ಲಿಯೇ ಇರಬೇಕು. ನಮ್ಮಿಂದ ನಿಮಗಾಗಬೇಕಾದ ಪ್ರಯೋಜನವನ್ನು ತಿಳಿಸಿ” ಎಂದು ಹೇಳಿದನು. ಆದಕ್ಕೆ ಉತ್ತರವಾಗಿ ಕ್ಷಪಣಕನು, ತನಗೆ ಲೌಕಿಕವಾದ ಪ್ರಯೋಜನ ಯಾವುದೂ ಬೇಡವೆಂದ, ನಗರದ ಹೊರಗಡೆ ಪರ್ಣಶಾಲೆಯೊಂದರಲ್ಲಿ ವಾಸಮಾಡುತ್ತಿದ್ದು ಅಮಾತ್ಯರ ಕಲ್ಯಾಣವನ್ನು ನೆನೆಯುವುದೇ ತನ್ನ ಕರ್ತವ್ಯವೆಂದೂ ಅದಕ್ಕಾಗಿಯೇ ತಾನು ರಾಕ್ಷಸನನ್ನು ಬಿಡದಿರುವುದೆಂದು ಹೇಳಿ ಬುದ್ಧನನ್ನು ನೆನೆದು ಕಣ್ಣನ್ನು ಮುಚ್ಚಿ ಧ್ಯಾನಮಾಡುವವನಂತೆ ಕುಳಿತುಬಿಟ್ಟನು. ಆಗ ರಾಕ್ಷಸನು ಭಾಗುರಾಯಣನನ್ನು ಕರೆಸಿ, ಅವನಿಗೆ ಆಗ ಒದಗಿಬಂದಿರುವ ರಾಜಕಾರ್ಯದ ವಿಷಯವನ್ನು ತಿಳಿಸಿ, ನದೀತೀರದಲ್ಲಿ ಬ್ರಾಹ್ಮಣರಿಂದ ಜಪಮಾಡಿಸಲು ಏರ್ಪಡಿಸುವಂತೆ ಅಪ್ಪಣೆಮಾಡಿ ಕಳುಹಿಸಿದನು.

ಇಷ್ಟೆಲ್ಲ ಕಲಸ ಮುಗಿದಮೇಲೆ ರಾಯಸದವರಿಂದ ಪತ್ರ ಬರೆಸಲು ರಾಕ್ಷಸನು ಯತ್ನಿಸಿ, ಹತ್ತಿರದಲ್ಲಿದ್ದ ಕ್ಷಪಣಕನನ್ನು ಆಚೆ ಹೋಗು ಎಂದು ಹೇಳಲು ಸಂಕೋಚಪಟ್ಟುಕೊಂಡು ( ಈತ ವಿರಕ್ತ, ನಮ್ಮಲ್ಲಿರುವ ಪ್ರೀತಿಯಿಂದ ಈತನಿಗೆ ನಮ್ಮಲ್ಲಿ ಮಾತೇ ಹೊರತು ಇತರರಲ್ಲಿ ಮೌನ. ಇಷ್ಟಾಗಿಯೂ ಈ ಲೌಕಿಕ ವ್ಯವಹಾರದಿಂದ ಈತನಿಗೇನು ಪ್ರಯೋಜನ? ಆದ್ದರಿಂದ ಈತನು ಇಲ್ಲಿದ್ದರೂ ಬಾಧಕನಿಲ್ಲ’ ಎಂದು ನಿರ್ಧರಿಸಿ, ಪರರಾಜರ ಬಳಿ ವರ್ತಕವೇಷದಲ್ಲಿದ್ದ ಮಂತ್ರಿಗಳಿಗೆ ಈ ರೀತಿ ಕಾಗದಗಳನ್ನು ಬರೆಸಿದನು.

“ಸ್ವಾಮಿಭಕ್ತರಾದ ನೀವು ಈ ಕಾರ್ಯವನ್ನು ಮಾಡತಕ್ಕದ್ದು. ನಿಮಗೆ ಆಶ್ರಯ ಕೊಟ್ಟಿರುವ ಪರ್ವತರಾಜನ ಸಾಮಂತರು ನಂದರ ಮೇಲೆ ದಂಡೆತ್ತಿ ಬರುತ್ತಿರುವರಷ್ಟೆ. ಈ ಸಮಯದಲ್ಲಿ ಎಷ್ಟು ಹಣ ವೆಚ್ಚವಾದರೂ ಚಿಂತೆಯಿಲ್ಲ. ನಿಮ್ಮ ಅರಸರನ್ನು ಯಾವ ರೀತಿಯಲ್ಲಾ ದರೂ ಒಡಂಬಡಿಸಿ ಚಂದ್ರಗುಪ್ತನನ್ನು ಸಂಹರಿಸುವುದು ಉತ್ತಮೋತ್ತಮ. ಇಲ್ಲವಾದರೆ ಆವರು ಏನಾದರೂ ಒಂದು ನೆಪದಿಂದ ಪರ್ವತರಾಜನನ್ನು ಬಿಟ್ಟು ನಂದರಿಗೆ ಸಹಾಯವಾಗುವುದು ಒಂದು ಪಕ್ಷ. ಆದೂ ಸಾಧ್ಯವಾಗದಿದ್ದರೆ ಏನಾದರೂ ಒಂದು ಕಾರಣದಿಂದ ಜಗಳ ತೆಗೆದು ತಮ್ಮ ದೇಶಗಳಿಗೆ ಸೇನೆಯೊಡನೆ ಹೋಗುವುದು ಒಂದು ಮಾರ್ಗ. ಈ ಕಾರ್ಯವೂ ಕೈಗೂಡದಿದ್ದರೆ ಪರ್ವತರಾಜನಿಗೂ ನಂದರಿಗೂ ಯುದ್ಧವಾಗುವಾಗ ನಂದರಮೇಲೆ ಕೈಮಾಡದೆ ಸುಮ್ಮನಿರುವುದು ಒಂದು ರೀತಿ, ನಮ್ಮಿಂದ ಪರ್ವತರಾಜನು ಹತನಾಗುವುದರಲ್ಲಿ ಸಂದೇಹವಿಲ್ಲ. ಆಗ ನಮಗೆ ಅನುಕೂಲರಾದ ಅರಸುಗಳಿಗೆ ಅವರು ಮಾಡಿದ ಉಪಕಾರಕ್ಕಾಗಿ ಆತನ ದೇಶ ಕೋಶಗಳನ್ನು ಸಮನಾಗಿ ಹಂಚಿಕೊಡುತ್ತೇವೆ’ ಹೀಗೆಂದು ನಿರೂಪಗಳನ್ನು ಬರೆಸಿದ ಮೇಲೆ ಅವುಗಳನ್ನು ನಾಲ್ಕುಮಂದಿ ಚಾರರಿಗೆ ಕೊಟ್ಟು ವೇಗವಾದ ಕುದುರೆಗಳನ್ನೇರಿ ನಿರೂಪಗಳನ್ನು ಆ ಎಂಟುಜನ ವರ್ತಕರಿಗೆ ತಲುಪಿಸಬೇಕೆಂದು ಅಸ್ಪಣೆಮಾಡಿ ಕಳುಹಿಸಿದನು.

ರಾಕ್ಷಸನ ತಂತ್ರ ಕ್ಷಪಣಕನಿಗೆ ತಿಳಿಯಿತು. ಧ್ಯಾನದಿಂದ ಎಚ್ಚೆತ್ತು ‘ನಮ್ಮ ಪ್ರಭುವಿಗೆ ಜಯವಾಗಲಿ’ ಎಂದು ಹರಸಿ ಭಿಕ್ಷಾ ಸಮಯವಾದುದರಿಂದ ರಾಕ್ಷಸನಿಂದ ಬೀಳ್ಳೊಡಿಸಿಕೊಂಡನು. ಅಲ್ಲಿಂದ ತಾನಿದ್ದ ಸ್ಥಳಕ್ಸೆ ಬಂದು ‘ಈ ಕಾಗದಗಳಂತೆ ಕಾರ್ಯ ನಡೆದು ರಾಕ್ಷಸನ ಉಪಾಯ ಫಲಿಸಿದರೆ ಚಾಣಕ್ಯರ ಪ್ರಯತ್ನ ಬೂದಿಯಲ್ಲಿ ಹೋಮಮಾಡಿದಂತಾಗುತ್ತದೆ. ರಾಕ್ಷಸನ ಈ ಕಾಗದಗಳು ವರ್ತಕರಿಗೆ ತಲಪುವುದಕ್ಕೆ ಮುಂಚೆ ಚಾಣಕ್ಯರಿಗೆ ಈ ಸಮಾಚಾರ ತಿಳಿಯದಿದ್ದರೆ ನಾನು ಇಲ್ಲಿದ್ದು ಏನು ತಾನೆ ಪ್ರಯೋಜನ? ಅವರಿಗೆ ಹೇಗೆ ತಾನೆ ಸ್ನೇಹಿತನೆನಿಸಿಕೊಳ್ಳುವೆ?” ಎಂದು ನಿರ್ಧರಿಸಿ, ಅಲ್ಲಿ ನಡೆದ ಸಮಾಚಾರವನ್ನೆಲ್ಲಾ ವಿಶದವಾಗಿ ಬರೆದು ಅದನ್ನು ವೇಗಶರ್ಮನೆಂಬ ತನ್ನ ಶಿಷ್ಯನೊಡನೆ ಚಾಣಕ್ಯನಿಗೆ ಕಳುಹಿಸಿಕೊಟ್ಟನು. ವೇಗಶರ್ಮನು ಗುರುವಿನ ಅಪ್ಪಣೆಯಂತೆ ಹತ್ತಿರದಲ್ಲಿ ಯಾರೋ ಸಿದ್ಧಪಡಿಸಿಟ್ಟಿದ್ದ ಕುದುರೆಯನ್ನೇರಿ, ರಾಜಮಾರ್ಗವನ್ನು ಬಿಟ್ಟು ಕಾಲುದಾರಿಯಲ್ಲಿ ಯಾರಿಗೂ ಕಾಣಿಸದಂತೆ ಚಾಣಕ್ಯನ ಬಳಿಗೆ ಬಂದನು.


ಮುಂದಿನ ಅಧ್ಯಾಯ: ೧೦. ಜಪಶಾಲೆ


Leave a Reply

Your email address will not be published. Required fields are marked *