ಧರ್ಮ ಮತ್ತು ಅಧರ್ಮದ ಯುದ್ಧ: ಸಂಪೂರ್ಣ ಮಹಾಭಾರತ – 1

ವ್ಯಾಸಮುನಿಗಳು ನಿರೂಪಿಸಿದಂತೆ ಮಹಾಭಾರತವನ್ನು ಬರೆಯುತ್ತಿರುವ ಗಣಪತಿ

ಮಹಾ ಎಂದರೆ ದೊಡ್ಡದು; ಭಾರತವೆಂದರೆ ಭರತವಂಶದವರ ಚರಿತ್ರೆ ; ಆದುದರಿಂದ ಮಹಾಭಾರತವೆಂದರೆ ಭರತವಂಶದವರನ್ನು ಕುರಿತ ದೊಡ್ಡಚರಿತ್ರೆ ಎಂದು ಅರ್ಥ.

ಭರತನೆಂದು ಪ್ರಸಿದ್ಧನಾದ ಚಕ್ರವರ್ತಿಯ ವಂಶದಲ್ಲಿ ಹುಟ್ಟಿದವರ ಚರಿತ್ರೆಯನ್ನು ತಿಳಿಸುವ ಗ್ರಂಥಕ್ಕೆ ಮಹಾಭಾರತವೆಂದು ಹೆಸರು. ಆ ಭರತನು ದುಷ್ಯಂತ ಚಕ್ರವರ್ತಿಯ ಪತ್ನಿಯಾದ ಶಕುಂತಲೆಯ ಗರ್ಭದಲ್ಲಿ ಜನಿಸಿದ ಪುತ್ರನು. ಆ ಚರಿತ್ರೆಯು ಮುಂದೆ ವಿವರಿಸಲ್ಪಡುವುದು,. ಶಕುಂತಲೆಯ ವೃತ್ತಾಂತವನ್ನೇ ಶಾಕುಂತಲ ನಾಟಕವೆಂಬದಾಗಿ ಮಹಾಕವಿಯಾದ ಕಾಳಿದಾಸನು ಸಂಸ್ಕೃತ ಭಾಷೆಯಲ್ಲಿ ರಚಿಸಿರುವನು. ಮಹಾ ಎಂದರೆ ದೊಡ್ಡದು; ಭಾರತವೆಂದರೆ ಭರತವಂಶದವರ ಚರಿತ್ರೆ ; ಆದುದರಿಂದ ಮಹಾಭಾರತವೆಂದರೆ ಭರತವಂಶದವರನ್ನು ಕುರಿತ ದೊಡ್ಡಚರಿತ್ರೆ ಎಂದು ಅರ್ಥ. ಆ ವಂಶದಲ್ಲಿ ಕುರುವೆಂಬ ರಾಜಶ್ರೇಷ್ಠನೊಬ್ಬನು ರಾಜ್ಯಭಾರ ಮಾಡುತ್ತಿದ್ದು ಅನಂತರ ಸನ್ಯಾಸವನ್ನು ಹೊಂದಿ ಒಂದು ದೊಡ್ಡ ಕ್ಷೇತ್ರದಲ್ಲಿ ಪರಮನಿಷ್ಠೆಯಿಂದ ಅನೇಕ ಕಾಲ ತಪಸ್ಸು ಮಾಡುತ್ತಿದ್ದುದರಿಂದ ಆ ಕ್ಷೇತ್ರವು ಕುರುಕ್ಷೇತ್ರವೆಂದು ಹೆಸರುಗೊಂಡಿತು. ಆ ಕುರುಕ್ಷೇತ್ರವೇ ಪಾಂಡವ ಕೌರವರಿಗೆ ನಡೆದ ಮಹಾಯುದ್ಧದ ರಂಗಸ್ಥಾನವು. ಆ ಕುರುವಿನ ವಂಶದಲ್ಲಿ ಧೃತರಾಷ್ಟ್ರ, ಪಾಂಡು, ವಿದುರರೆಂಬ ಮೂವರು ಅಣ್ಣತಮ್ಮಂದಿರು ಹುಟ್ಟಿದರು. ಅವರಲ್ಲಿ ಧೃತರಾಷ್ಟ್ರನ ಮಕ್ಕಳು ಯುದ್ಧದಲ್ಲಿ ಅಧರ್ಮನಿರತರಾಗಿದ್ದು ಹೋರಾಡಿದರು. ನಾಮಮಾತ್ರಕ್ಕೆ ಪಾಂಡು ಪುತ್ರರಾದ ಧರ್ಮರಾಯ ಮೊದಲಾದ ಐದು ಜನರೂ ಧರ್ಮಕ್ಕಾಗಿ ಯುದ್ಧಮಾಡಿದರು. ವಿದುರನು ಅತ್ಯಂತ ಬುದ್ಧಿ ಶಾಲಿಯೂ ಧರ್ಮನಿರತನೂ ಆಗಿದ್ದು ರಾಜ್ಯದಲ್ಲಿ ಶ್ರೇಷ್ಠವಾದ ಪದವಿಯನ್ನು ಹೊಂದಿದನು. ಇವರುಗಳ ಚರಿತ್ರೆಯು ಈ ಮಹಾಕಾವ್ಯದ ಹದಿನೆಂಟು ಪರ್ವಗಳಲ್ಲಿ ಹೇಳಲ್ಪಟ್ಟಿರುವುದು. ಆ ಪರ್ವಗಳಲ್ಲಿರುವ ಸಂಧರ್ಭಗಳಿಗೆ ಅನುಸಾರವಾಗಿ ಪ್ರತಿಪರ್ವಕ್ಕೂ ಹೆಸರು ಕೊಡಲಾಗಿದೆ.

ಈ ಕಾವ್ಯವನ್ನು ರೋಮಹರ್ಷಣನೆಂಬ ಸೂತನ ಪ್ರತ್ರನಾದ ಸೌತಿ ಎಂಬ ಹೆಸರುಳ್ಳ ಉಗ್ರಶ್ರವಸ್ಸೆಂಬುವನು ನೈಮಿಶಾರಣ್ಯವಾಸಿಗಳಾದ ಋಷಿಗಳಿಗೆ ಹೇಳಿದನು. ಒಬ್ಬಾನೊಬ್ಬ ಖುಷಿ ಶ್ರೇಷ್ಠನು ಅತನನ್ನು ಕುರಿತು ನೀನೆಲ್ಲಿಂದ ಬಂದೆ ಎಂದು ಕೇಳಲು ಉಗ್ರಶ್ರವಸ್ಸು ಹೀಗೆ ಹೇಳಿದನು, “ಸ್ವಾಮಿ, ನಾನು ಜನಮೇಜಯನು ಮಾಡುತ್ತಿದ್ದ ಸರ್ಪಯಾಗಕ್ಕೆ ಹೋಗಿದ್ದು ಅಲ್ಲಿಂದ ಬಂದೆನು, ಕಪ್ಪಾದ ಶರೀರವುಳ್ಳವನಾದುದರಿಂದ ಕೃಷ್ಣನೆಂದೂ, ದ್ವೀಪದಲ್ಲಿ ಹುಟ್ಟಿದವನಾದುದರಿಂದ ದ್ವೈಪಾಯನನೆಂದೂ, ವೇದಗಳನ್ನು ವಿಭಾಗ ಮಾಡಿದವನಾದುದರಿಂದ ವೇದವ್ಯಾಸನೆಂದೂ ಪ್ರಸಿದ್ಧಿಗೊಂಡ ಕೃಷ್ಣದ್ವೈಪಾಯನ ವೇದವ್ಯಾಸನೆಂಬ ಮುನಿಶ್ರೇಷ್ಠನಿಂದ ವಿರಚಿತವಾದ ಮಹಾಭಾರತವೆಂಬ ಕಾವ್ಯರತ್ನವನ್ನು ಅಲ್ಲಿ ವೈಶಂಪಾಯನನು ಪಠಿಸುತ್ತಿರಲು ಅದನ್ನು ಕೇಳಿ ನಾನೂ ತಿಳಿದುಕೊಂಡೆನು”ಎಂದು ಉತ್ತರ ಹೇಳಿದನು. ಆ ಮುನಿಶ್ರೇಷ್ಠರು ಆ ಕಾವ್ಯವನ್ನು ನಮಗೆ ಹೇಳಬೇಕೆಂದು ಆ ಸೂತಪುತ್ರನನ್ನು ಪ್ರಾಥಿ೯ಸಲು ಆತನು ಅತ್ಯಂತ ಆನಂದಭರಿತನಾಗಿ ಅವರಿಗೆ ಆ ಕಥೆಯನ್ನು ಹೇಳತೊಡಗಿದನು. ಆ ಕಥೆಯನ್ನೇ ನಾವು ಮುಂದಿನ ಅಧ್ಯಾಯದಲ್ಲಿ ಓದಲು ಪ್ರಾರಂಭಿಸುವೆವು.

Leave a Reply

Your email address will not be published. Required fields are marked *