ವನರಾಜನ ಕತೆ

ಸುಮಾರು 1200 ವರ್ಷಗಳ ಹಿಂದಿನ ಮಾತು. ಸೌರಾಷ್ಟ್ರದಲ್ಲಿ ಈಗಿನ ರಾಧನಪುರ ಎಂಬ ಪಟ್ಟಣದ ನೆರೆಯಲ್ಲಿ ಆಗ ಚಂಪಾಸರ ಎಂಬುದೊಂದು ರಾಜಧಾನಿ ಇತ್ತು. ಅಲ್ಲಿ ‘ಜಯಶಿಖರಿ‘ ಎಂಬ ಶೂರನಾದ ಅರಸನು ರಾಜ್ಯವಾಳುತ್ತಿದ್ದನು. ಆಗ ಕಲ್ಯಾಣದಲ್ಲಿ ಭುವಡ ಎಂಬ ರಾಜನು ಆಳುತ್ತಿದ್ದನು. ಗುಜರಾತ ದೇಶದ ಒಬ್ಬ ಭಟ್ಟಂಗಿಯು ಒಮ್ಮೆ ಭುವಡನ ಓಲಗಕ್ಕೆ ಹೋಗಿದ್ದನು; ಅಲ್ಲಿ ಅವನು ಜಯಶಿಖರಿಯ ಶೌರ್ಯವನ್ನೂ, ಗುಜರಾತದ ಸಂಪತ್ತನ್ನೂ ಹೊಗಳಿ ಕವನಗಳನ್ನು ಹಾಡಿದನು. ಅವುಗಳನ್ನು ಕೇಳಿ ಭುವಡನಿಗೆ ಗುಜರರಾತದ ಮೇಲೆ ಆಸೆ ಹುಟ್ಟಿತು. ಜಯಶಿಖರಿಯನ್ನು ಸೋಲಿಸಿ ಗುಜರಾತವನ್ನು ಲೂಟಿ ಮಾಡಲು, ಮಿಹಿರ ಎಂಬ ತನ್ನ ಒಬ್ಬ ಸರದಾರನನ್ನು ಅವನು ಕಳುಹಿದನು.
ಮಿಹಿರನು ದೊಡ್ಡ ಸೈನ್ಯದೊಡನೆ ಗುಜರಾತದ ಕಡೆಗೆ ಹೊರಟನು, ಹಾದಿಯಲ್ಲಿ ಸಿಕ್ಕ ಊರುಗಳನ್ನು ಸುಲಿದನು. ಹೆಂಗಸರು ಮಕ್ಕಳನ್ನು ಸೆರೆ ಹಿಡಿದನು. ಜನರಿಗೆ ನಾನಾಬಗೆಯ ತೊಂದರೆಗಳನ್ನು ಕೊಟ್ಟನು. ಇದನ್ನು ಕೇಳಿ ಜಯಶಿಖರಿಯು ಕಿಡಿಕಿಡಿಯಾದನು. ಮಿಹಿರನನ್ನು ಎದುರಿಸಲು ಅವನು ಸುರಪಾಲ ಎಂಬ ತನ್ನ ಆಪ್ತಬಂಧುವನ್ನು ಕಳುಹಿದನು. ಸುರಪಾಲಿಸು ಮಿಹಿರನನ್ನು ಸೋಲಿಸಿ ಓಡಿಸಿದನು.
ಭುವಡರಾಜನಿಗೆ ಈ ಸಂಗತಿಯು ತಿಳಿಯುತ್ತಲೆ, ಅವನು ದೊಡ್ಡ ಸೈನ್ಯದೊಡನೆ ತಾನೇ ಚಂಪಾಸರದ ಮೇಲೆ ದಂಡೆತ್ತಿ ಬಂದನು. ಆದರೂ ಶೂರನಾದ ಜಯಶಿಖರಿಯು ಇವನಿಗೆ ಮಣಿಯಲಿಲ್ಲ. ಆಗ ಭುವಡನು “ಯುದ್ಧದಲ್ಲಿ ಮಡಿಯುವೆ, ಇಲ್ಲವೆ ಜಯಶಾಲಿಯಾಗುವೆ” ಎಂದು ಪಣತೊಟ್ಟು ಚಂಪಾಸರದ ಮುತ್ತಿಗೆಯನ್ನು ಮುಂದುವರಿಸಿದನು. ಜಯಶಿಖರಿಗೆ ಬೇರೆ ಗತಿಯಿಲ್ಲದಾಯಿತು. ಅವನು ಗರ್ಭವತಿಯಾದ ತನ್ನ ಹೆಂಡತಿ ರೂಪಸುಂದರಿಯನ್ನು, ಆಕೆಯ ಅಣ್ಣನಾದ ಸುರಪಾಲನೊಡನೆ ಗುಪ್ತವಾಗಿ ಅಡವಿಗೆ ಕಳುಹಿದನು. ತಾನು ತನ್ನ ಶೂರಸೈನಿಕರೊಂದಿಗೆ ಕೋಟೆಯಿಂದ ಹೊರಬಿದ್ದು ಯುದ್ಧ ಮಾಡಲಾರಂಭಿಸಿದನು. ಆದರೆ ಯುದ್ಧದಲ್ಲಿ ಜಯಶಿಖರಿಯು ಮಡಿದನು. ಚಂಪಾಸರವು ಭುವಡನ ಕೈವಶವಾಯಿತು.
ಅತ್ತ ಸುರಪಾಲ ಮತ್ತು ರೂಪಸುಂದರಿಯರು ಅಡವಿಯಲ್ಲಿ ಅಲೆಯುತ್ತಿರುವಾಗ, ಭಿಲ್ಲ ಜನರು ಅವರನ್ನು ಕಂಡು ಆಶ್ರಯಕೊಟ್ಟರು. ತುಸು ದಿನಗಳಲ್ಲಿಯೇ ರೂಪಸುಂದರಿಯು ಒಂದು ಗಂಡುಮಗುವನ್ನು ಹೆತ್ತಳು. ಕೂಸು ಎಲ್ಲ ರಾಜಲಕ್ಷಣಗಳಿಂದ ಶೋಭಿಸುತ್ತಿತ್ತು. ಆ ಕೂಸೇ ವನರಾಜ.
ಬಾಲಕ ವನರಾಜನು ಬೆಳೆದು ದೊಡ್ಡವನಾದಂತೆ, ಶೌರ್ಯ – ಸಾಹಸದ ಕೆಲಸಗಳಲ್ಲಿ ಹೆಚ್ಚು ಮನಸ್ಸು ಹಾಕಿದನು. ಭಿಲ್ಲ ಜನರಿಂದ ಬಿಲ್ಲು ವಿದ್ಯೆಯನ್ನು ಕಲಿತುಕೊಂಡನು. ಅವನ ಮಾವನಾದ ಸುರಪಾಲನು ಯುದ್ಧದ ಕಥೆಗಳನ್ನು ವಿವರಿಸಿ ಅವನನ್ನು ಹುರಿದುಂಬಿಸುತ್ತಿದ್ದನು.
ಒಮ್ಮೆ ಶೀಲಗುಣಸೂರಿ ಎಂಬ ಜೈನಸಾಧುವು ಬಾಲಕ ವನರಾಜನನ್ನು ಕಂಡನು. ಬಾಲಕನು ರಾಜಲಕ್ಷಣ ಉಳ್ಳವನಾಗಿದ್ದುದನ್ನು ನೋಡಿ, ಅವನನ್ನೂ ಅವನ ತಾಯಿ ರೂಪಸುಂದರಿಯನ್ನೂ ತನ್ನ ಸಂಗಡ ಕರೆದುಕೊಂಡು ಹೋಗಿ ಜೋಪಾನ ಮಾಡಿದನು.
ವನರಾಜನು ಹರಯಕ್ಕೆ ಬರುತ್ತಲೆ, ತನ್ನ ತಂದೆಯ ರಾಜ್ಯವನ್ನು ತಿರುಗಿ ಸಂಪಾದಿಸಲು ಯತ್ನಿಸತೊಡಗಿದನು. ಆದರೆ ಅವನಲ್ಲಿ ಹಣವಿರಲಿಲ್ಲ. ಅವನ ಜೊತೆಗೆ ಜನರಿರಲಿಲ್ಲ. ಹಣವಿಲ್ಲದೆ ದೊಡ್ಡ ಸೈನ್ಯವನ್ನು ಸಿದ್ಧಪಡಿಸುವುದು ಹೇಗೆ? ಆದುದರಿಂದ ಅವನು ಚಿಕ್ಕ ಪುಟ್ಟ ಕಳವು-ಸುಲಿಗೆಗಳಿಂದ ಹಣ ಕೂಡ ಹಾಕಲು ಪ್ರಾರಂಭಿಸಿದನು. ಬರುಬರುತ್ತ ಅಮಿರ-ಉಮರಾವರ ಖಜಾನೆಗಳನ್ನೂ ಸುಲಿಯಹತ್ತಿದನು. ಒಮ್ಮೆ ಭುವಡನ ಖಜಾನೆಯನ್ನು ಕಲ್ಯಾಣದ ಕಡೆಗೆ ಒಯ್ಯುತ್ತಿದ್ದ ಸುದ್ದಿಯು ವನರಾಜನಿಗೆ ತಿಳಿಯಿತು. ಕೂಡಲೆ ಅವನು ತನ್ನ ಸಂಗಡಿಗರನ್ನು ಕೂಡಿಕೊಂಡು ಹೊಗಿ, ಆ ಖಜಾನೆಯನ್ನು ಪೂರವಾಗಿ ಸುಲಿದುಬಿಟ್ಟನು. ಇದರಿಂದ ಇವನಿಗೆ ಅಪಾರವಾದ ಸಂಪತ್ತು ದೊರೆಯಿತು.
ಹೀಗೆ ವನರಾಜನು ದ್ರವ್ಯಸಂಗ್ರಹಮಾಡಿ, ಅದರ ನೆರವಿನಿಂದ ದೊಡ್ಡ ಸೈನ್ಯವನ್ನು ಸಿದ್ಧಗೊಳಿಸಿದನು. ಇವನಿಗೆ ಅಣಹಿಲ ಎಂಬ ಒಬ್ಬ ಚತುರನಾದ ಕುರುಬನೂ, ಚಾಪಾ ಎಂಬ ಶ್ರೀಮಂತ ವ್ಯಾಪಾರಿಯೂ ತುಂಬ ಸಹಾಯಕರಾಗಿದ್ದರು. ಅಣಹಿಲನು ಅಡವಿಯಲ್ಲಿ ತಿರುಗಿ ಒಂದು ಒಳ್ಳೆಯ ಸ್ಥಳವನ್ನು ಹುಡುಕಿದನು. ಅಲ್ಲಿಯೆ ವನರಾಜನು ಹೊಸದೊಂದು ರಾಜಧಾನಿಯನ್ನು ಕಟ್ಟಿಸಿದನು. ಚಾಪಾನು ಹಣದ ಸಹಾಯ ಮಾಡಿದನು. ಸುರಪಾಲನಂತೂ ಯಾವಾಗಲೂ ಬೆಂಬಲಿಗನಾಗಿದ್ದನು.
ವನರಾಜನು ಕ್ರಮೇಣ ಗುಜರಾತದ ಎಲ್ಲ ಭಾಗಗಳನ್ನೂ ಮರಳಿ ಗೆದ್ದುಕೊಂಡನು. ತಾನು ಕಟ್ಟಿಸಿದ ರಾಜಧಾನಿಗೆ “ಅಣಹಿಲವಾಡ” ಎಂದು ತನ್ನ ಗೆಳೆಯನ ಹೆಸರನ್ನೇ ಇಟ್ಟನು. ಅದೇ “ಪಟಾನ್” ಎಂದು ಈಗ ಹೆಸರನ್ನು ಪಡೆದಿದೆ. ತನ್ನ ಇನ್ನೊಬ್ಬ ಗೆಳೆಯನಾದ ಚಾಪಾನ ಹೆಸರಿನಿಂದ “ಚಾಪಾನೇರ” ಎಂಬ ಮತ್ತೊಂದು ಹೊಸ ನಗರವನ್ನು ಕಟ್ಟಿಸಿದನು. ಬಾಲ್ಯದಲ್ಲಿ ತನಗೂ ತನ್ನ ತಾಯಿಗೆ ನೆರವು ಕೊಟ್ಟ ಶೀಲಗುಣಸೂರಿಸಾಧುವಿನ ಸ್ಮರಣಾರ್ಥವಾಗಿ, ಚಂಪಾಸರಾ ಎಂಬಲ್ಲಿ ಪಾರಸನಾಥನ ಬಸದಿಯನ್ನು ಕಟ್ಟಿಸಿದನು.

ವನರಾಜನು ಪ್ರಜೆಗಳಿಗೆ ಬಹಳ ಪ್ರೀತಿಯವನಾಗಿದ್ದನು. ಆದುದರಿಂದ ಅವರು ವನರಾಜನ ಮೂರ್ತಿಯನ್ನು ಮಾಡಿಸಿ ಪಾರಸನಾಥನ ಬಸದಿಯಲ್ಲಿ ಇರಿಸಿದನು. ಅದು ಈಗಲೂ ನೋಡಲು ಸಿಗುವುದು.
ಐತಿಹಾಸಿಕ ಕತೆಗಳು ಪುಸ್ತಕದಿಂದ ಸಂಗ್ರಹಿಸಿದ ಕತೆ. ಲೇಖಕರು: ಜಿ.ವಿ ಅಂಗಡಿ.