ಚಾಲುಕ್ಯ ಸಾಮ್ರಾಜ್ಯದ ರತ್ನ: ಇಮ್ಮಡಿ ಪುಲಿಕೇಶಿಯ ಕಥೆ

‘ಇಮ್ಮಡಿ ಪುಲಿಕೇಶಿ‘ ಎಂದರೆ, ಎರಡನೆಯ ಪುಲಿಕೇಶಿ ಎಂದರ್ಥ. ಇವನು ಬಾದಾಮಿಯ ಚಾಲುಕ್ಯ ಮನೆತನದಲ್ಲಿ ತುಂಬ ಪ್ರಸಿದ್ಧಿಯನ್ನು ಪಡೆದ ಸಾರ್ವಭೌಮನು. ಒಂದನೆಯ ಪುಲಿಕೇಶಿಯು ಈತನ ಅಜ್ಜನು. ಅವನಿಗೆ ಕೀರ್ತಿವರ್ಮ, ಮಂಗಳೇಶ ಎಂದು ಇಬ್ಬರು ಮಕ್ಕಳಿದ್ದರು. ಕೀರ್ತಿವರ್ಮನ ಮಗನೇ ಇಮ್ಮಡಿ ಪುಲಿಕೇಶಿ. ಇವನು ತನ್ನ ಪರಾಕ್ರಮ-ಸಾಹಸಗಳಿಂದ, ಬಾದಾಮಿಯ ಚಾಲುಕ್ಯರ ಚಿಕ್ಕದಾದ ರಾಜ್ಯವನ್ನು ವಿಸ್ತಾರವಾದ ಸಾಮ್ರಾಜ್ಯವನ್ನಾಗಿ ಮಾಡಿದನು; ದೇಶ ವಿದೇಶಗಳಲ್ಲಿಯೂ ತನ್ನ ಕೀರ್ತಿ ಪ್ರತಾಪಗಳನ್ನು ಹಬ್ಬಿಸಿದನು.
ಕೀರ್ತಿವರ್ಮನು ತೀರಿಕೊಂಡಾಗ ಪುಲಿಕೇಶಿ ಇನ್ನೂ ಹಸುಮಗುವಾಗಿದ್ದನು. ಆದುದರಿಂದ ಕೀರ್ತಿವರ್ಮನ ತಮ್ಮನಾದ ಮಂಗಳೇಶನೇ ರಾಜ್ಯ ಕಾರ್ಯಭಾರವನ್ನು ನೋಡಿಕೊಳ್ಳತೊಡಗಿದನು. ಮಂಗಳೇಶನೂ ಸಾಮಾನ್ಯ ಮನುಷ್ಯನಾಗಿರಲಿಲ್ಲ; ಶೂರನೂ, ಆಡಳಿತದಲ್ಲಿ ನಿಪುಣನೂ ಆಗಿದ್ದನು. ಅವನು ವಿರೋಧಿಗಳನ್ನೆಲ್ಲ ಹತ್ತಿಕ್ಕಿ ಅವರನ್ನು ತನ್ನ ಆಧೀನಪಡಿಸಿಕೊಂಡನು. ರಾಜ್ಯದಲ್ಲೆಲ್ಲ ಸುಖ ಸಮಾಧಾನಗಳು ನೆಲೆಸುವಂತೆ ಮಾಡಿದನು. ಬಾದಾಮಿಯಲ್ಲಿ ‘ಮೇಣಬಸತಿ‘ಗಳನ್ನು ಕೊರೆಸಿದವನು ಈ ಮಂಗಳೇಶನೆ. ಗುಡ್ಡದಲ್ಲಿಯ ಬಂಡೆಗಳನ್ನೆ ಕೊರೆದು ಅಲ್ಲಿ ಸುಂದರವಾದ ಗವಿಗುಡಿಗಳನ್ನು ನಿರ್ಮಿಸಿದ್ದಾರೆ.
ಪುಲಿಕೇಶಿಯು ಬೆಳೆದು ದೊಡ್ಡವನಾದನು. ಆದರೆ ಮಂಗಳೇಶನು ಅವನಿಗೆ ರಾಜ್ಯವನ್ನು ಒಪ್ಪಿಸಲಿಲ್ಲ. ‘ಅನಾಯಾಸವಾಗಿ ಸಿಕ್ಕಿರುವ ಅಧಿಕಾರವನ್ನು ಕಳೆದುಕೊಳ್ಳಬೇಕೇಕೆ?’ ಎಂಬ ದುರಾಶೆ ಮಂಗಳೇಶನಿಗೆ. ಅಲ್ಲದೆ ತನ್ನ ತರುವಾಯ ಬಾದಾಮಿಯ ರಾಜ್ಯಕ್ಕೆ ತನ್ನ ಮಗನು ಅಧಿಕಾರಿಯಾಗಬೇಕು ಎಂಬ ಆಶೆ ಅವನಿಗೆ.
ಪುಲಿಕೇಶಿ ಈ ವಿಷಯವನ್ನೆಲ್ಲ ಸೂಕ್ಷ್ಮವಾಗಿ ನೋಡಿ ತಿಳಿದುಕೊಂಡನು. ತನ್ನ ಸಾಮಥ್ಯವನ್ನು ಪ್ರಕಟಿಸದೆ ತನ್ನ ರಾಜ್ಯವು ತನಗೆ ದೊರೆಯದು ಎಂಬುದನ್ನು ಅರಿತುಕೊಂಡನು. ಚತುರನಾದ ಪುಲಿಕೇಶಿ, ಮಂಗಳೇಶನಿಗೆ ಗೊತ್ತಾಗದಂತೆ ಗುಪ್ತರೀತಿಯಿಂದ ಸೈನ್ಯವನ್ನು ಕೂಡಿಸಿದನು. ಮಂಗಳೇಶನ ಅನ್ಯಾಯವನ್ನು ಸಹಿಸದೆ ಅನೇಕ ಜನರು ತರುಣ ಪುಲಿಕೇಶಿಗೆ ತುಂಬ ಸಹಾಯ ನೀಡಿದರು.
ಪುಲಿಕೇಶಿ ತನ್ನ ಸೈನ್ಯವನ್ನು ತೆಗೆದುಕೊಂಡು ಮಂಗಳೇಶನ ಮೇಲೆ ಸಾಗಿಬಂದನು. ಮಂಗಳೇಶನಿಗೆ ಈ ವರ್ತಮಾನವು ತಿಳಿಯಿತು. ಅವನೂ ದೊಡ್ಡ ಸೈನ್ಯವನ್ನು ತೆಗೆದುಕೊಂಡು ಪುಲಿಕೇಶಿಯನ್ನು ಎದುರಿಸಿದನು. ಚಿಕ್ಕಪ್ಪ, ಮಗ ಇವರ ನಡುವೆ ಘನಘೋರವಾದ ಯುದ್ಧ ನಡೆಯಿತು. ಮಂಗಳೇಶನ ಸೈನ್ಯ ಸೋತು ಹಿಂಜರಿಯಿತು. ಮಂಗಳೇಶನು ಯುದ್ಧದಲ್ಲಿ ಸತ್ತು ಹೋದನು. ಕ್ರಿ. ಶ. 610ರಲ್ಲಿ ಪುಲಿಕೇಶಿಯು ತನ್ನದೇ ಆದ ಚಾಲುಕ್ಯ ಸಿಂಹಾಸನದ ಮೇಲೆ ಕುಳಿತುಕೊಂಡನು.
ಪುಲಿಕೇಶಿ ಬಲು ಶೂರ, ಸಾಹಸಿ, ನೋಡು-ನೋಡುವಷ್ಟರಲ್ಲಿಯೇ ಕರ್ನಾಟಕದೊಳಗಿನ ಎಲ್ಲ ರಾಜರನ್ನು ಗೆದ್ದು, ಅವರನ್ನೆಲ್ಲ ತನ್ನ ಆಧೀನರನ್ನಾಗಿ ಮಾಡಿಕೊಂಡನು. ದಕ್ಷಿಣದಲ್ಲಿಯ ಚೋಳ, ಚೇರ, ಪಾಂಡ್ಯ, ಕೇರಳ, ಪಲ್ಲವ ಮೊದಲಾದ ಅರಸರು ಇವನ ಮಾಂಡಲಿಕರಾದರು. ಉತ್ತರದಲ್ಲಿ ಗುರ್ಜರ, ಮಾಳವ-ಲಾಟ-ಕೋಸಲ ದೇಶಗಳ ಅರಸರನ್ನೂ ಇವನು ಹಣ್ಣಿಗೆ ತಂದನು. ಅವರೂ ಚಾಲುಕ್ಯ ಸಾಮ್ರಾಜ್ಯದ ಆಧಿಪತ್ಯವನ್ನು ಒಪ್ಪಿದರು. ನರ್ಮದೆಯಿಂದ ಸಿಂಹಳದ್ವೀಪದವರೆಗಿನ ದಕ್ಷಿಣಭಾರತವನ್ನೆಲ್ಲ ಗೆದ್ದು ಪುಲಿಕೇಶಿಯು ನಾರ್ವಭೌಮನಾದನು.
ದಕ್ಷಿಣದಲ್ಲಿ ಪುಲಿಕೇಶಿಯು ಆಳುತ್ತಿದ್ದಾಗ, ಉತ್ತರಭಾರತದಲ್ಲಿ ಹರ್ಷವರ್ಧನನು ಆಳುತ್ತಿದ್ದನು. ಅವನು ದಕ್ಷಿಣಭಾರತವನ್ನು ಗೆಲ್ಲಬೇಕೆಂದು ಹೊಂಚುಹಾಕಿದ್ದನು. ಒಂದು ದೊಡ್ಡ ದಂಡಿನೊಡನೆ ಅವನು ಪುಲಿಕೇಶಿಯ ಮೇಲೆ ಸಾಗಿಬಂದನು. ಗಂಡುಗಲಿಯಾದ ಪುಲಿಕೇಶಿಯು ಈ ದೊಡ್ಡ ದಂಡನ್ನು ನರ್ಮದಾ ನದಿಯ ದಂಡೆಯ ಮೇಲೆ ತರುಬಿದನು. ಎರಡೂ ದಂಡುಗಳ ನಡುವೆ ಭೀಕರವಾದ ಯುದ್ಧವಾಯಿತು. ಪುಲಿಕೇಶಿಯ ‘ಕರ್ನಾಟಕ ಬಲ‘ದ ಹೊಡೆತಕ್ಕೆ ಹರ್ಷವರ್ಧನನ ಸೈನಿಕರು ರಣದಲ್ಲಿ ಪಟಪಟನೆ ಬಿದ್ದರು. ಆಗ ಹರ್ಷವರ್ಧನನು ಸೋತು ಓಡಿಹೋದನು. ಮುಂದೆ ಅವನು ಪುಲಿಕೇಶಿಯ ಮೇಲೆ ದಂಡೆತ್ತಿ ಬರಲು ಎಂದೂ ಹವಣಿಸಲಿಲ್ಲ. ಹರ್ಷವರ್ಧನನೊಡನೆ ಯುದ್ಧ ಮಾಡಿ ಜಯಸಂಪಾದಿಸಿದುದಕ್ಕಾಗಿ, ಪುಲಿಕೇಶಿಯು ‘ಪರಮೇಶ್ವರ‘ ಎಂಬ ಬಿರುದನ್ನು ಧರಿಸಿದನು. ‘ಸತ್ಯಾಶ್ರಯ‘ ಎಂಬ ಮತ್ತೊಂದು ಬಿರುದೂ ಆತನಿಗೆ ಇತ್ತು. ಆ ಕಾಲದಲ್ಲಿ ಇಡಿ ಭಾರತದಲ್ಲಿ ಪುಲಿಕೇಶಿಯನ್ನು ಎದುರಿಸುವವರು ಯಾರೂ ಇರಲಿಲ್ಲ.
ಪುಲಿಕೇಶಿಯ ಕಾಲದಲ್ಲಿ ಕರ್ನಾಟಕದ ಕೀರ್ತಿಯು ಭಾರತದಲ್ಲಿ ಅಷ್ಟೇ ಅಲ್ಲದೆ ಬೇರೆ ದೇಶಗಳಲ್ಲಿಯೂ ಹಬ್ಬಿತು. ಇವನ ಪರಾಕ್ರಮವನ್ನು ಕೇಳಿ ಇರಾಣದ ಅರಸನಾದ ಖುಸ್ರುವು ತನ್ನ ರಾಯಭಾರಿಯನ್ನು ಇವನಲ್ಲಿಗೆ ಕಳುಹಿದನು. ಕಾಣಿಕೆಯನ್ನು ಕೊಟ್ಟು ಆತನು ಪುಲಿಕೇಶಿಯ ಸ್ನೇಹವನ್ನು ಸಂಪಾದಿಸಿದನು.
ಪುಲಿಕೇಶಿಯ ಕಾಲವೆಂದರೆ ‘ಕರ್ನಾಟಕದ ಸುವರ್ಣಕಾಲ’ ಎಂದು ಹೇಳಬಹುದು. ಇವನ ಆಳ್ವಿಕೆಯಲ್ಲಿ ಚೀನದ ಪ್ರವಾಸಿಯಾದ ಹುವೆನ್ ತ್ಸಾಂಗನು (ಇವನಿಗೆ ಯವನ್‌ಚಂಗ್ ಎಂದೂ ಕರೆಯುವರು) ಬಾದಾಮಿಗೆ ಬಂದಿದ್ದನು. ಇವನು ಆಗಿನ ಕರ್ನಾಟಕದ ಸ್ಥಿತಿಯನ್ನು ಕಣ್ಣಾರೆ ಕಂಡು ಹೀಗೆ ಬರೆದಿದ್ದಾನೆ:-“ಈ ರಾಜಧಾನಿಯ ಸುತ್ತಳತೆ ಆರು ಮೈಲು. ಇಲ್ಲಿಯ ಭೂಮಿಯು ಬೆಳೆಯುಳ್ಳದ್ದು. ಹವೆಯು ಸೆಕೆಯುಳ್ಳದ್ದು. ಜನರು ಪ್ರಾಮಾಣಿಕರು, ಸ್ವಾಭಿಮಾನಿಗಳು; ಮುಯ್ಯಗೆ ಮುಯ್ಯ ತೀರಿಸಿಕೊಳ್ಳುವವರು. ಅಪಮಾನವಾದರೆ ಪ್ರಾಣದ ಹಂಗು ಬಿಡುವವರು. ಮಾನವೇ ಇವರ ಧನ. ಸಂಕಟಕಾಲದಲ್ಲಿ ಇವರು ಒಬ್ಬರಿಗೊಬ್ಬರು ನೆರವಾಗುವರು. ಓಡಿಹೋಗುವ ಶತ್ರುಗಳನ್ನು ಇವರು ಎಂದೂ ಕೊಲ್ಲರು. ನಿಲುವಿಕೆಯಲ್ಲಿ ಜನರು ಎತ್ತರವಾದವರು. ಇಲ್ಲಿಯ ಅರಸನ ಹತ್ತಿರ ಸಾವಿರಾರು ಆನೆಗಳೂ ಲಕ್ಷಾವಧಿ ಶೂರ ದಂಡಾಳುಗಳೂ ಇರುವರು.”
ಹೀಗೆ ವೈಭವದಿಂದ ಪುಲಿಕೇಶಿಯು ಮೂವತ್ತು ಮೂರು ವರುಷಗಳವರೆಗೆ ರಾಜ್ಯವನ್ನು ಆಳಿದನು. ಮೊದಲಿನಿಂದಲೂ ಚಾಲುಕ್ಯರ ವೈರಿಯಾಗಿದ್ದ ಪಲ್ಲವರಾಜ ನರಸಿಂಹವರ್ಮನು, ದೊಡ್ಡದಂಡಿನೊಡನೆ ಬಾದಾಮಿಯನ್ನು ಮುತ್ತಿದನು. ಈ ಯುದ್ಧದಲ್ಲಿ ಪುಲಿಕೇಶಿಯು ಕ್ರಿ. ಶ. 642ರಲ್ಲಿ ಮಡಿದನು.
ಪುಲಿಕೇಶಿಯು ಸತ್ತು ಹೋಗಿದ್ದರೂ ಅವನ ಕೀರ್ತಿಯು ಆಳಿದಿಲ್ಲ. ಅವನು ಅಜಂತೆಯ ಗವಿಗಳಲ್ಲಿ ಕೊರೆಸಿದ ತರತರದ ಚಿತ್ರಗಳು ಇನ್ನೂ ಅಚ್ಚಳಿಯದೆ ಉಳಿದಿರುವವು. ದೇಶ-ವಿದೇಶಗಳ ಪ್ರವಾಸಿಕರು ಬಂದು ಅವುಗಳನ್ನು ನೋಡಿ ಆಶ್ಚರ್ಯಪಡುತ್ತಾರೆ. ಪುಲಿಕೇಶಿಯ ಕೀರ್ತಿಯನ್ನು ಬೆಳಗಿಸುವ ಶಿಲಾಲೇಖಗಳು ಐಹೊಳೆ-ಪಟ್ಟದಕಲ್ಲುಗಳಲ್ಲಿ ಈಗಲೂ ಇವೆ.
ಐತಿಹಾಸಿಕ ಕತೆಗಳು ಪುಸ್ತಕದಿಂದ ಸಂಗ್ರಹಿಸಿದ ಕತೆ. ಲೇಖಕರು: ಜಿ.ವಿ ಅಂಗಡಿ.