ಕೂಸು ಇದ್ದ ಮನಿಗೆ ಬೀಸಣಿಗೆ ಯಾತಕ – ಜಾನಪದ ಗೀತೆ

ಕೂಸು ಇದ್ದ ಮನಿಗೆ ಬೀಸಣಿಗೆ ಯಾತಕ
ಕೂಸು ಕಂದಯ್ಯ ಒಳ ಹೊರಗ | ಆಡಿದರ
ಬೀಸಣಿಗೆ ಗಾಳಿ ಸುಳಿದಾವ ||
ಆಡಿ ಬಾ ನನ ಕಂದ ಅಂಗಾಲ ತೊಳೆದೇನ
ತೆಂಗಿನ ಕಾಯಿ ತಿಳಿನೀರ | ತಕ್ಕೊಂಡು
ಬಂಗಾರ ಮಾರಿ ತೊಳೆದೇನ ||
ಅಳುವ ಕಂದನ ತುಟಿಯು ಹವಳದ ಕುಡಿಹಂಗ
ಕುಡಿಹುಬ್ಬು ಬೇವಿನೆಸಳ್ಹಂಗ | ಕಣ್ಣೋಟ
ಶಿವನ ಕೈಯಲಗು ಹೊಳೆದ್ಹಂಗ ||
ಕಂದಾನ ಕಿರಿಕಿರಿ ಇಂದೇನು ಹೇಳಲಿ
ಬಿಂದೀಗೆ ಹಾಲು ಸುರಿವಂದ | ಚಂಜೀಯ
ಚಂದ್ರಮನ ತಂದು ನಿಲಿಸೆಂದಾ ||