ನಮ್ಮ ಬಾವುಟ -ಕಯ್ಯಾರ ಕಿಞ್ಞಣ್ಣ ರೈ ಅವರ ಪದ್ಯ

ಏರುತಿಹುದು ಹಾರುತಿಹುದು
ನೋಡು ನಮ್ಮ ಬಾವುಟ
ತೋರುತಿಹುದು ಹೊಡೆದು ಹೊಡೆದು
ಬಾನಿನಗಲ ಪಟಪಟ || 1 ||
ಕೇಸರಿ ಬಿಳಿ ಹಸಿರು ಮೂರು
ಬಣ್ಣ ನಡುವೆ ಚಕ್ರವು
ಸತ್ಯ ಶಾಂತಿ ತ್ಯಾಗ ಮೂರ್ತಿ
ಗಾಂಧಿ ಹಿಡಿದ ಚರಕವು || 2 ||
ಇಂತ ಧ್ವಜವು ನಮ್ಮ ಧ್ವಜವು
ನೋಡು ಹಾರುತಿರುವುದು
ಧ್ವಜದ ಭಕ್ತಿ ನಮ್ಮ ಶಕ್ತಿ
ನಾಡ ಗುಡಿಯ ಮೆರೆವುದು || 3 ||
ಕೆಂಪು ಕಿರಣ ತುಂಬಿ ಗಗನ
ಹೊನ್ನ ಬಣ್ಣವಾಗಿದೆ
ನಮ್ಮ ನಾಡ ಗುಡಿಯ ನೋಡ
ನೋಡಿರಣ್ಣ ಹೇಗಿದೆ ||
ಈ ಕವನವು ಭಾರತದ ರಾಷ್ಟ್ರಧ್ವಜವನ್ನು ವರ್ಣಿಸುತ್ತದೆ. ಕವನದಲ್ಲಿ ಧ್ವಜವು ಹೇಗೆ ಹಾರುತ್ತಿದೆ ಮತ್ತು ಪಟಪಟ ಎಂಬ ದನಿಯಲ್ಲಿ ಬೀಸುತ್ತಿದೆ, ಧ್ವಜದ ಮೂರು ಬಣ್ಣಗಳಾದ ಕೇಸರಿ, ಬಿಳಿ, ಮತ್ತು ಹಸಿರಿನ ಅರ್ಥ ಹಾಗೂ ಮಧ್ಯದಲ್ಲಿನ ಚಕ್ರವನ್ನು ವಿವರಿಸುತ್ತಾ ಅದು ಗಾಂಧಿಜಿಯ ಚರಕದ ಸಂಕೇತವಾಗಿದೆ ಎಂದು ತಿಳಿಸುತ್ತದೆ. ಕೊನೆಯಲ್ಲಿ, ಧ್ವಜದ ಭಕ್ತಿಯು ನಮ್ಮ ನಾಡಿನ ಶಕ್ತಿ ಮತ್ತು ಗೌರವವಾಗಿದೆ ಮತ್ತು ನಮ್ಮ ನಾಡಿನ ಗುಡಿ ಹೇಗೆ ಸುಂದರವಾಗಿದೆ ಎಂದು ಬಣ್ಣಿಸುತ್ತದೆ.