ನನ್ನ ದೇವರು – ನೆಂಪು ನರಸಿಂಹಭಟ್ಟರ ಕವನ

ನಿತ್ಯ ನಮಗೆ ಬೆಳಕು ಕೊಡುವ
ಸೂರ್ಯ ನನ್ನ ದೇವರು
ರಾತ್ರಿ ಹಾಲು ಬೆಳಕು ಕೊಡುವ
ಚಂದ್ರ ನನ್ನ ದೇವರು ||1||
ಕೋಟಿ ತಾರೆ ಬೆಳ್ಳಿ ಚುಕ್ಕಿ
ಉಲ್ಕೆ ನನ್ನ ದೇವರು
ಬೆಂಕಿ ಗಾಳಿ ನೀರು ಗಗನ
ಎಲ್ಲ ನನ್ನ ದೇವರು ||2||
ಹಚ್ಚ ಹಸಿರು ಹೊದ್ದು ನಿಂತ
ಭೂಮಿ ನನ್ನ ದೇವರು
ಗುಡ್ಡ – ಬೆಟ್ಟ ಕಾಡು ಮೇಡು
ಹೊಳೆಗಳೆನ್ನ ದೇವರು ||3||
ಹೊಲದಿ ಬೆವರು ಸುರಿಸಿ ದುಡಿವ
ರೈತ ನನ್ನ ದೇವರು
ದೇಶಕಾಗಿ ಶ್ರಮಿಸುತಿರುವ
ಯೋಧ ನನ್ನ ದೇವರು||4||
ತಂದೆ – ತಾಯಿ ಬಂಧು ಬಳಗ—
ವೆಲ್ಲ ನನ್ನ ದೇವರು
ವಿದ್ಯೆ ಕಲಿಸಿ ಹಿತವ ನುಡಿವ
ಗುರುಗಳೆನ್ನ ದೇವರು ||5||
ನನ್ನ ದೇವರಿವರು ನಿತ್ಯ
ನನಗೆ ಕಾಣುತಿರುವರು
ಶುದ್ಧ ಮನದಿ ಬೇಡಿದುದನು
ನೀಡಿ ಪೊರೆಯುತಿರುವರು ||6||