ಪಂಚತಂತ್ರ ಕತೆಗಳು ಭಾಗ-3, ಮಿತ್ರಭೇದತಂತ್ರ – ಕೀಲನ್ನು ಕಿತ್ತ ಕೋತಿಯ ಕತೆ

ಎಲೈ ಹುಚ್ಚನೇ, ದಾರೀಲಿ ಹೋಗುವ ಜಗಳವನ್ನು ಮೈಮೇಲೆ ತಂದುಕೊಂಡ ಹಾಗೆ ನಮಗೆ ಯಾಕೆ ಬೇಕು? ದೇವರು ಕೊಟ್ಟಷ್ಟು ತಿಂದು ಉಂಡು ಸುಖವಾಗಿರೋಣ. ಸುಮ್ಮನೆ ಅಧಿಕಪ್ರಸಂಗಕ್ಕೆ ಹೋದರೆ ‘ಮೇಕು ಕಿತ್ತ ಕೋತಿಯ ಹಾಗೆ ನಮಗೇ ತೊಂದರೆಯಾಗುವುದು’, ಅಂತಾ ಹೇಳಿತು.
‘ಮೇಕು ಕಿತ್ತ ಕೋತಿಯೇ?’ , ಏನು ಹಾಗೆಂದರೆ ಎಂದು ದಮನಕನು ಕೇಳಲು ಕರಟಕನು ಆ ಕೋತಿಯ ಕತೆಯನ್ನು ಹೀಗೆ ಹೇಳಿದನು.
ಒಂದು ಪಟ್ಟಣದ ಹತ್ತಿರ ಒಂದು ದೊಡ್ಡ ಗುಡಿ ಪಾಳುಬಿದ್ದು ಅರ್ಧಕ್ಕರ್ಧ ನೆಲಕ್ಕೆಕುಸಿದಿತ್ತು. ದೈವಭಕ್ತಿಯುಳ್ಳ ಒಬ್ಬ ವೈಶ್ಯನು (ವ್ಯಾಪಾರಿಯು) ಅದನ್ನು ಮುಂಚಿನ ಹಾಗೆ ಮತ್ತೆ ಕಟ್ಟಲು (ಜೀರ್ಣೋದ್ಧಾರ ಮಾಡಲು ) ಹೇಳಿ ಶಿಲ್ಪಗಾರರಿಗೆ ಸ್ವಲ್ಪ ಧನವನ್ನು (ಹಣವನ್ನು) ಕೊಟ್ಟನು. ಅವರು ಆ ಧನವನ್ನು ತೆಗೆದುಕೊಂಡು ಗುಡಿಯನ್ನು ಕಟ್ಟುತ್ತಾ ಇರುವ ಸಮಯದಲ್ಲಿ, ಒಂದು ತೇಗಿನ ತೊಳೆಯನ್ನು ಹಲಗೆಗಳಾಗಿ ಕೊಯ್ಯಲು ಅದನ್ನು ಸೀಳುವುದಕ್ಕಾಗಿ ಅಲ್ಲಲ್ಲಿ ಬೆಣೆಗಳನ್ನು (ಕೀಲುಗಳನ್ನು) ಮೊಳೆ ಹೊಡೆದಂತೆ ಹೊಡೆದು,ಅಷ್ಟರಲ್ಲಿ ಕತ್ತಲಾಯಿತೆಂದೂ ತಮ್ಮ ಮನೆಗಳಿಗೆ ಹೋದರು.
ಆಗ ಆ ದೇವಾಲಯದ ಸಮೀಪದಲ್ಲಿಯೇ ಇದ್ದ ವೃಕ್ಷಗಳನ್ನು (ಮರಗಳನ್ನು) ಆಶ್ರಯಿಸಿ ಅಲ್ಲಿಯೇ ಆಡುತ್ತಿದ್ದ ಕೋತಿಗಳು ದೇವಾಲಯದ ಹತ್ತಿರಕ್ಕೆ ಬಂದು, ಗುಡಿಯ ಹತ್ತಿ ಮರಗಳ ಮೇಲಕ್ಕೆ ಚಕ್ಕನೆ ನೆಗೆಯುತ್ತಾ, ಕೊಂಬೆಯಿಂದ ಕೊಂಬೆಗೆ ಹಾರುತ್ತಾ, ಗೋಡೆಗಳ ಮೇಲೆ ಚಿಮ್ಮಿ ಓಡುತ್ತಾ, ಒಂದಕ್ಕೊಂದು ಜಗಳವಾಡಿ, ಹಲ್ಲು ಕಿರಿದು, ಹಣ್ಣು ತಿನ್ನುತ್ತಾ, ಸ್ವಾಭಾವಿಕವಾದ ಚಪಲತ್ವದಿಂದ ತಿರುಗುತ್ತಿದ್ದವು.
ಅವುಗಳಲ್ಲಿ ಒಂದು ಮುದಿ ಕೋತಿ ಬೆಣೆಗಳನ್ನು ಬಡಿದಿದ್ದ ತೇಗಿನ ತೊಳೆಯ ಹತ್ತಿರಕ್ಕೆ ಬಂದು, ಸಂದಿನಲ್ಲಿ ಹಿಂಗಾಲುಗಳನ್ನು ಇಳಿಯಬಿಟ್ಟುಕೊಂಡು, ಅದರ ಬೆಣೆಯನ್ನು ಎರಡೂ ಕೈಗಳಿಂದ ಹಿಡಿದು ಬಲವಂತವಾಗಿ ಕಿತ್ತಿತು. ಆಗ ಅದರ ಕಾಲುಗಳು ಮರದ ಸೀಳಿನ ಸಂದಿನಲ್ಲಿ ಸಿಕ್ಕಿ ನಲುಗಿ ಹೋದುದರಿಂದ, ಆ ಕೋತಿ ನೋವಿನಿಂದ ಚೀರಾಡುತ್ತ, ಬಿಡಿಸಿಕೊಳ್ಳಲಾಗದೆ ಅಲ್ಲಿಯೇ ಸತ್ತು ಬಿದ್ದಿತು.
ಆದಕಾರಣ ತನಗೆ ಸಂಬಂಧವಿಲ್ಲದ ಕೆಲಸದ ನಡುವೆ ಹೋದವರಿಗೆ ಈಗ ಹೇಳಿದ ಕೋತಿಯ ಹಾಗೆ ಆದೀತು. ನಮಗೆ ಆ ವಿಷಯವನ್ನು ವಿಚಾರಿಸಿ ಏನಾಗಬೇಕು? ನಮ್ಮ ದೊರೆ ತಿಂದು ಬಿಟ್ಟ ಮಾಂಸವನ್ನು ತಿನ್ನೋಣ ಬಾ ಎಂದು ಕರಟಕನು ಹೇಳಿದಾಗ ದಮನಕನು ಹೀಗೆ ಉತ್ತರಿಸಿದನು.
“ಮಿತ್ರರಿಗೆ ಉಪಕಾರವನ್ನೂ ಶತ್ರುಗಳಿಗೆ ಅಪಕಾರವನ್ನೂ ಮಾಡುವುದಕ್ಕಾಗಿ ಲೋಕದಲ್ಲಿಯ ಜನರು ಅರಸರ ಸೇವೆಯಲ್ಲಿ ಇರುತ್ತಾರೆಯೇ ಹೊರತು ಬರಿಯ ತಮ್ಮ ಹೊಟ್ಟೆ ಹೊರೆಯುವುದಕ್ಕೆ ಅಷ್ಟೇ ಅಲ್ಲ. ದುರ್ಬಲರು ಮತ್ತು ಬಲಿಷ್ಟರು ಆದ ಸಕಲ ಮನುಷ್ಯರು ತಮ್ಮ ತಮ್ಮ ಶಕ್ತಿಗೆ ಅನುಸಾರವಾಗಿ ಕೆಲಸಗಳನ್ನು ಮಾಡಲು ಅಪೇಕ್ಷಿಸುತ್ತಾರೆ. ಹಾಗೆ ನೀನು ನಿನ್ನ ಬಲಕ್ಕೆ ತಕ್ಕಷ್ಟು ಮಾಡಲು ಯೋಚಿಸಿದೆ. ಹೀನನಾದವನು ಎಷ್ಟು ದೀನನಾಗಿ ಕೇಳಿಕೊಂಡರೂ ಅವನಿಗೆ ಯಾರೂ ಕೊಡರು, ಕೊಟ್ಟರೂ ಸಹ ಒಪ್ಪತ್ತಿಗೆ ಆಗುವಷ್ಟು, ಸ್ವಲ್ಪವೇ ಕೊಡುವರು. ಉಳ್ಳವನಿಗಾದರೆ ಅವನು ಕೇಳದಿದ್ದರೂ ಅರಸರು ಅವನ ಆಸೆ ತೀರುವ ಹಾಗೆ ಕೊಡುವರು. ಸ್ವಲ್ಪ ನೀರಿನಿಂದಲೇ ಕಲ್ಲುಭೂಮಿಯಲ್ಲಿ ಪ್ರವಾಹ ಹೊರಳಿ ಹರಿದ ಹಾಗೆ ಸ್ವಲ್ಪ ಫಲದಿಂದಲೇ ಅಲ್ಪನು ಬಹಳ ಸಂತೋಷವನ್ನು ಹೊಂದುವನು. ಆದರೆ ಘನವಾದ ವಿದ್ಯೆಯಿಂದಲೂ ಪರಾಕ್ರಮದಿಂದಲೂ ಉಪಾಯದಿಂದಲೂ ನಾಲ್ಕು ಜನ ನೋಡಿ ಮೆಚ್ಚುವಂತೆ ಬದುಕುವುದೇ ಮೇಲು. ”
ಇದನ್ನು ಕೇಳಿ – ” ಎಲೈ ನಾವು ಪ್ರಧಾನರಲ್ಲವಾದುದರಿಂದ ಯಾವ ಕೆಲಸಕ್ಕೂ ಶಕ್ತರಲ್ಲ. ನಮಗೆ ಇಷ್ಟು ನೀತಿಗಳಿಂದೇನು ಕೆಲಸ? ಎಂದು ಕರಟಕನು ನುಡಿಯಲು, ಮರಳಿ ದಮನಕನು ಇಂತೆಂದನು.
ಯಾವನೊಬ್ಬನು ಪೂರ್ವ ಜನ್ಮದಲ್ಲಿ ಮಾಡಿದ ಪುಣ್ಯದಿಂದ ಬುದ್ಧಿಯುಳ್ಳವೆನಾಗುವನು ; ಬುದ್ಧಿಬಲದಿಂದ ಅರಸರಿಂದ ಪೂಜ್ಯನಾಗುವನು. ಅರಸರು ಮಾನಿಸುವುದರಿಂದ’ ಅವನ ಬುದ್ಧಿಗೆ ಪ್ರಕಾಶವುಂಟಾಗುವುದು, ಅದರಿಂದ ಅವೆನು ರಾಜತಂತ್ರ ನಡೆಸಲಿಕ್ಕೆ ಪ್ರಧಾನನಾಗುವನು. ಪ್ರಧಾನತ್ವ ಬರಲು ಸಮಸ್ತವೂ ಉಂಟಾಗುವುದು. ಅಪ್ರಧಾನನು ಪ್ರಧಾನನಾಗುವುದಕ್ಕ ಎಷ್ಟು ಹೊತ್ತು ಹಿಡಿದೀತು? ಮೇಲಾಗಿ ಒಬ್ಬನ ನಡತೆ ಒಳ್ಳಯದಾಗಿದ್ದರೆ ಜನರು ಅವನನ್ನು ಗಣ್ಯನಾಗಿ ನೋಡುವರು; ನಡತೆ ಕೆಟ್ಟುದಾದರೆ ಅವೆನ ನಂಟರು ಸಹ ಅವನನ್ನು ಅಲಕ್ಷ್ಯವಾಗಿ ನೋಡುವರು. ದೊಡ್ಡತನವೂ ಚಿಕ್ಕತನವೂ ನಡತೆಯಿಂದಲೇ ಬರುವುದು. ಒಂದು ದೊಡ್ಡ ಕಲ್ಲನ್ನು ಮೆಹಾಪ್ರಯತ್ನದಿಂದ ಬೆಟ್ಟದ ಮೇಲಕ್ಕೆ ತೆಗೆದುಕೊಂಡು ಹೋಗುವುದು ಕಷ್ಟ. ಆ ಕಲ್ಲನ್ನು ಅಲ್ಲಿಂದ ಕೆಳಕ್ಕೆ ತಳ್ಳಿನೀಡುವುದು ಸುಲಭ. ಹಾಗೆಯೇ ಒಳ್ಳೆಯ ಗುಣಗಳನ್ನುಳ್ಳವನೆಂದು ಹೊಗಳಿಕೊಳ್ಳುವುದು ಕಷ್ಟ, ದುರ್ಜನನೆಂದು ಹೆಸರೆತ್ತುವುದು ಸುಲಭ.
ಎಂದು ಹೇಳಲಾಗಿ ಕರಟಕನು ಕೇಳಿ –ಎಲೈ, ಒಳ್ಳಯ ನೀತಿ ವಾಕ್ಯಗಳ ವಿವರಿಸಿ ತಿಳಿಸಿದೆ. ನನ್ನ ಮೆನಸ್ಸಿನಲ್ಲಿಯ ಸಂಶಯ ತೀರಿತು. ಈಗ ನೀನೇನು ಮಾಡಬೇಕೆಂದಿದ್ದೀಯೋ ಅದನ್ನು ಹೇಳು- ಎನಲು, ದಮೆನಕನಿಂತೆಂದನು,
ಬಲವೂ ಪರಾಕ್ರಮವೂ ಧೈರ್ಯವೂ ಉಳ್ಳ ನಮ್ಮ ಅರಸನು ನೀರು ಕುಡಿವುದಕ್ಕಾಗಿ ನದಿಗೆ ಹೋಗಿ, ನೀರಲ್ಲಿ ಇಳಿಯಲ್ಲಿಕೆ ಹೆದರಿದ್ದಾನೆ. ಅದು ನಿನಗೆ ಹೇಗೆ ತಿಳಿಯಿತು ಎನ್ನುತ್ತಿಯೋ ? ಕೇಳು;
“ಕುದುರೆ ಆನೆಗಳಂತಹ ಪಶುಗಳು ಶಿಕ್ಷೆಗಳಿಂದ ಒಬ್ಬರ ವಶವಾಗಿ ಅವರನ್ನು ತಮ್ಮ ಮೇಲೆ ಏರಿಸಿಕೊಂಡು ತಿರುಗುತ್ತವೆ. ಬುದ್ಧಿಯಿಲ್ಲದವರು ವಿಧಿಯ ಮೇಲೆ ಭಾರ ಹಾಕಿ ತಮ್ಮ ಪ್ರಯತ್ನವನ್ನೇ ಮಾಡುವುದಿಲ್ಲ. ಆದ್ರೆ ಪಂಡಿತನಾದವನು ಒಬ್ಬರು ಹೇಳಿದ ತಾತ್ಪರ್ಯವನ್ನು ಊಹಿಸುವನು, ಇನ್ನೊಬ್ಬರ ಮನದ ಇಂಗಿತವನ್ನು ತಿಳಿದುಕೊಳ್ಳುವನು. ಆದ್ದರಿಂದ ಈಗ ನಾನು ಅರಸನ ಬಳಿ ಹೋಗಿ, ನನ್ನ ಮೇಲೆ ಆತನ ಮನಸ್ಸು, ಗಮನ ಬರುವ ಹಾಗೆ ಸೇವೆಗೈದು ಆತನಿಂದ ಮನ್ನಣೆ ಪಡೆಯುವೆನು.”
ಅದನ್ನು ಕೇಳಿ – ” ಎಲೈ ಸ್ನೇಹಿತನೇ, ನೀನು ಈ ಮುಂಚೆ ಅರಸನ ಸೇವೆಯಲ್ಲಿ ಇದ್ದವನಲ್ಲ. ಅವನ ಚಿತ್ತವೃತ್ತಿಯನ್ನು ಅರಿತು ಹೇಗೆ ನಡೆಯಬಲ್ಲೆ?” ಎಂದ ಕಿರಾತಕ.
ಅದಕ್ಕೆ ದಮನಕನು ತಿರುಗಿ “ಬಹಳ ಸಮರ್ಥರಾದವರಿಗೆ ಅಸಾಧ್ಯವೊಂದುಂಟೇ? ಉದ್ಯೋಗ ಮಾಡಬಲ್ಲವರಿಗೆ ದೂರ ಭೂಮಿಯೊಂದುಂಟೇ? ವಿದ್ಯೆಗಳನ್ನು ಕಲಿತವರಿಗೆ ಪರದೇಶವೊಂದುಂಟೇ? ಪ್ರಿಯವಾದಿಗಳಾದವರಿಗೆ ಶತ್ರುಗಳುಂಟೇ? ಅರಸರೂ ಹೆಂಗಸರೂ ಬಳ್ಳಿಗಳೂ ಯಾವಾಗಲೂ ತಮ್ಮ ಸಮೀಪವನ್ನು ಬಿಡದ ಆಶ್ರಿತರನ್ನು ಪರಿಗ್ರಹಿಸುವರಲ್ಲದೆ ‘ಇವನಿಗೆ ವಿದ್ಯೆ ಬಾರದೆಂದೂ, ಇವನದು ಒಳ್ಳೆಯ ಕುಲವಲ್ಲವೆಂದೂ, ಇವನು ತಿಳಿದವನಲ್ಲವೆಂದೂ ಅನಾದರಣೆ ಮಾಡರು.ಯಾವ ವ್ಯಕ್ತಿಯು ಅರಸನ ಕೋಪಪ್ರಸಾದಗಳ ಕುರುಹುಗಳನ್ನರಿತು ನಡೆದುಕೊಳ್ಳುವನೋ ಅವನು ಆ ಅರಸನ ದಯೆಯಿಂದ ಪ್ರಸಿದ್ಧಿ ಪಡೆಯುವನು. ಆದುದರಿಂದ ನಮ್ಮ ಅರಸನು ಮನ್ನಿಸುವ ಸೇವಕರೊಂದಿಗೆ ಹೋಗಿ ಆತನ ಸಮೀಪವನ್ನು ಬಿಡದೆ ಅನುಸರಿಸಿ ಇರುವೆನು”, ಎಂದನು.
ಆಗ ಕರಟಕನು – ಎಲೈ, ಅರಸನ ಬಳಿಗೆ ಹೋಗಿ ನೀನೇನು ಮಾಡುತ್ತೀಯೆ? ಎಂದು ಕೇಳಲಾಗಿ ದಮನಕನು ಇಂತೆಂದನು.
ಒಳ್ಳೆಯ ಮೆಳೆ ಬಿದ್ದರೆ ಬೀಜದಿಂದ ಬೀಜವು ಹೇಗೆ ಉಂಟಾಗುವುದೋ ಹಾಗೆಯೇ ಚೆನ್ನಾಗಿ ಉತ್ತರ ಕೊಟ್ಟರೆ ಅದರಿಂದ ಮತ್ತೊಂದು ಉತ್ತರ ಹುಟ್ಟುತ್ತದೆ. ನೀತಿಮಾರ್ಗದಲ್ಲಿ ಪ್ರವರ್ತಿಸಿದ ಬುದ್ದಿವಂತರು ಒಳೆಯ ಉಪಾಯವನ್ನು ತೋರಿಸುವುದರಿಂದ ಬರುವ ಕಾರ್ಯಸಿದ್ಧಿಯೂ ಅಪಾಯವನ್ನು ತೋರಿಸುವುದರಿಂದ ಬರುವೆ ಕೆಲಸಗೇಡೂ ಪ್ರತ್ಯಕ್ಷವಾಗಿ ಕಾಣಿಸುವ ಹಾಗೆ ತಿಳಿಸುತ್ತಾರೆ. ಬೃಹಸ್ಪತಿಯದುರೂ ಸರಿಯೇ, ಅನುಕೂಲಕರ ಸಮಯವನ್ನರಿಯದೆ ಮಾತನಾಡಿದರೆ ಅವಮಾನವನ್ನು ಹೊಂದುವನು. ನಾನು ಸಮಯವನ್ನು ವಿಚಾರಿಸದೆ ಏನನ್ನೂ ಹೇಳುವುದಿಲ್ಲ, ಸರಿಯಾದ ಸಮಯಕ್ಕೆ ಕಾಯುವೆನು”.- ಎನ್ನಲು ಕರಟಕನು ನಿನಗೆ ಕಾರ್ಯಸಿದ್ಧಿ ಆಗಿಯೇ ತೀರುವುದು , ಹೋಗು ಎಂದು ದಮನಕನಿಗೆ ಹೇಳಿ ಕಳುಹಿಸಿದನು.