ಶಿಬಿ ಚಕ್ರವರ್ತಿಯ ಕಥೆ
ಬಹಳ ಹಿಂದೆ ಶಿಬಿ ಚಕ್ರವರ್ತಿ ಎಂಬ ಮಹಾ ಸತ್ಯವಂತನಾದ ಒಬ್ಬ ಅರಸನಿದ್ದನು. ಆತನ ಸತ್ಯತೆಯನ್ನು ಪರೀಕ್ಷಿಸಬೇಕೆಂದು ಇಂದ್ರನೂ ಅಗ್ನಿಯೂ ಆಲೋಚಿಸಿ, ಇಂದ್ರನು ಡೇಗೆ ಹಕ್ಕಿಯಾದನು; ಅಗ್ನಿಯು ಕಪೋತ ಪಕ್ಷಿ (ಪಾರಿವಾಳ) ಆದನು. ಈ ರೀತಿ ವೇಷ ಮರೆಸಿದ ನಂತರ ಆ ಕಪೋತ ಪಕ್ಷಿಯನ್ನು ಹಿಡಿದು ಭಕ್ಷಿಸಲು ಆ ಡೇಗೆಯು ಬೆನ್ನು ಹತ್ತಿ ಅಟ್ಟಿಸಿಕೊಂಡು ಬಂದಿತು.
ಆ ಕಪೋತವು ಪ್ರಾಣ ಭೀತಿಯಿಂದ ಓಡುತ್ತಾ ,ಓಡುತ್ತಾ, ಶಿಬಿಚಕ್ರವರ್ತಿಯ ಬಳಿಗೆ ಬಂದು, ಆ ರಾಯನ ಬೆನ್ನಿನ ಮರೆಯಲ್ಲಿ ನಿಂತು – ಸತ್ಯಸಂಧನೇ, ಪ್ರಾಣ ಭೀತಿಯಿಂದ ನಾನು ನಿನ್ನ ಮರೆಯನ್ನು ಹೊಕ್ಕು ಇದ್ದೇನೆ. ನನ್ನನ್ನು ಕೈಬಿಡದೆ ರಕ್ಷಿಸಯ್ಯಾ , ಎಂದು ಕೂಗಲು;- ಅಂಜ ಬೇಡವೈ, ಕಪೋತವೇ, ನಿನ್ನ ಪ್ರಾಣಕ್ಕೆ ಬದಲಾಗಿ ನನ್ನ ಪ್ರಾಣವನ್ನು ಬೇಕಾದರೂ ಕೊಟ್ಟು ನಿನ್ನನ್ನು ಸಂರಕ್ಷಿಸುವೆನೇ ಹೊರತು, ಶರಣಾಗತನಾದ ನಿನ್ನನ್ನು ಬಿಟ್ಟು ಕೊಡುವುದಿಲ್ಲವೆಂಬ ಅಭಯವನ್ನು ಕೊಟ್ಟು, ಮಾತಾಡುತ್ತಿದ್ದ ಅರಸನ ಎದುರಿಗೆ ತೀಕ್ಷ್ಣವಾದ ಮೂಗುಳ್ಳ ಡೇಗೆಯು ಬಂದು, ಕೂತುಕೊಂಡು – ಎಲೈ, ಸತ್ಯವಂತನಾದ ರಾಯನೇ, ನನಗೆ ಆಹಾರಾರ್ಥವಾಗಿ ದೇವರು ನಿರ್ಮಾಣ ಮಡಿದ ಈ ಕಪೋತ ಪಕ್ಷಿಯು ನಿನ್ನ ಹಿಂದೆ ಕೂತುಕೊಂಡು ಇರುವುದರಿಂದ, ನಾನು ಅದನ್ನು, ನೀನು ಪ್ರಭುವಾದ ಕರಣ ನಿನ್ನ ಮಾತು ಮೀರಿ, ಹಿಡಿದುಕೊಳ್ಳಕೂಡದು. ಇದು ಧರ್ಮವೆಂದು ಹೇಳಿದ್ದೇನೆ. ಆದ್ದರಿಂದ. ಧರ್ಮಾತ್ಮನೇ , ನನ್ನ ಆಹಾರವನ್ನು ನನಗೆ ದಯಮಾಡಿ ಕೊಟ್ಟು, ಕೀರ್ತಿಯನ್ನು ಸಂಪಾದಿಸೈ, ಪುಣ್ಯಾತ್ಮಾ , ಎಂದು ಹೇಳಿದ ಶ್ಯೇನ ಪಕ್ಷಿಯ( ಹದ್ದು, ಗಿಡುಗ, ಸೆಳೆವ, ರಣಹದ್ದುಗಳು) ವಾಕ್ಯವನ್ನು ಕೇಳಿ, ಆಶ್ಚರ್ಯದಿಂದ ನಕ್ಕು, ಎಲೈ ಪಕ್ಷಿ ಶ್ರೇಷ್ಟನೇ, ನೀನು ಮಹಾಪರಾಕ್ರಮಶಾಲಿಯಾಗಿ, ಸಕಲ ಪಕ್ಷಿಗಳನ್ನೂ ಹಿಂಸಿಸಿ ತಿನ್ನುವುದು ನಿನಗೆ ಧರ್ಮವೇ ಸರಿ. ಆದಾಗ್ಯೂ ನನ್ನ ಬೆನ್ನಿನ ಮೇರ್ ಬೀಳುವುದಕ್ಕೂ ಮುಂಚಿತವಾಗಿಯೇ ನೀನಿದನ್ನು ಹಿಡಿದು ಭಕ್ಷಿಸಿದ್ದರೆ , ಈ ಜಗಳವೇ ಇರುತ್ತಿರಲಿಲ್ಲ. ಈಗ ನನ್ನ ಮರೆಯನ್ನು ಬಿದ್ದು – ನನ್ನನ್ನು ರಕ್ಷಿಸೈ, ರಕ್ಷಿಸೈ, ಎಂದು ಮೊರೆ ಇಡುವ ಸಾಧು ಕಪೋತವನ್ನು ನಿನಗೆ ಒಪ್ಪಿಸಿ, ಕೊಲ್ಲಿಸಿದರೆ, ನಾನು ಯಾವ ಲೋಕದಲ್ಲಿ ಏನಾಗಿ ಬಾಧೆ ಪೆಡಲಿ? ಮತ್ತು ಮೇರ್ ಹೊಕ್ಕವರನ್ನು ಕಾಯದೆ ಬಿಟ್ಟರೆ, ಅದಕ್ಕಿಂತಲೂ ಅರಸುಗಳಿಗೆ ಹಾನಿಯಾದ ಕೆಲಸ ಬೇರೊಂದು ಎಲ್ಲಿಯೂ ಇಲ್ಲ. ನೀನು ಬೇರೆ ಆಹಾರವನ್ನು ಹುಡುಕಿಕೊಂಡು ಈ ಪಕ್ಷಿಯನ್ನು ಬಿಡು. ಇಲ್ಲವಾಯಿತೇ? ನಿನ್ನ ಆಹಾರಕ್ಕೆ ತಕ್ಕ ಮಾಂಸವನ್ನು ತರಿಸಿ ಕೊಡುವೆನು; ಭಕ್ಷಿಸಿ ಸುಖದಿಂದ ಹೋಗು, ಎಂದು ಹೇಳುವ ಚಕ್ರವರ್ತಿಯನ್ನು ಕುರಿತು ಶ್ಯೇನವು ಇಂತೆಂದಿತು :- ಅಯ್ಯಾ, ಭೂಪಾಲತಿಲಕನೇ, ಚಕ್ರವರ್ತಿಯೇ, ನಿನ್ನ ಮಾತು ಸತ್ಯವೇ ಸರಿ. ಆದರೂ ನನಗೆ ದೇವದತ್ತವಾದ ಕಪೋತದ ಮಾಂಸಕ್ಕಿಂತಲೂ ಇನ್ನು ಬೇರೆ ಮರಿಗ ಪಕ್ಷಿಗಳ ಮಾಂಸಗಳು ರುಚಿಯಾಗಿರವು. ನನಗೆ ಅವು ಬೇಡಲೇ ಬೇಡ. ನೀನು ಅಷ್ಟು ದಯಾಳತ್ವವನ್ನು ವಹಿಸಿ, ನನ್ನ ಆಹಾರವಾದ ಕಪೋತವನ್ನು ರಕ್ಷಿಸಬೇಕೆಂದು ಮನಸ್ಸು ಮಾಡಿದರೆ, ಆ ಕಪೋತದ ತೂಕಕ್ಕೆ ಸರಿಯಾಗಿ ನಿನ್ನ ದಿವ್ಯ ಭೋಜನದಿಂದ ಬೆಳೆದ ಶರೀರ ಮಾಂಸವನ್ನು ಕೊಟ್ಟರೆ, ಅದನ್ನು ನಾನು ಭುಂಜಿಸಿ, ಈ ಕಪೋತವನ್ನು ಬಿಟ್ಟು ಹೋಗುತ್ತೇನೆಂದು ಹೇಳಲು; ಅರಸು ಪರಮ ಸಂತೋಷವನ್ನು ಹೊಂದಿ, ಹಾಗೆಯೇ ಆಗಲಿ, ಶ್ಯೇನ ಪಕ್ಷಿಯೇ; ನನ್ನ ಮಾಂಸವನ್ನೇ ಕೊಡುತ್ತೇನೆಂದು, ಮಹಾ ತೀಕ್ಷ್ಣವಾದ ಅರುಗುಳ್ಳ ಖಡ್ಗದಿಂದ ಮಹಾ ಧೀರನಾದ ಶಿಬಿ ಕ್ಯಾಕ್ಟ್ರವರ್ತಿಯು ತನ್ನ ಕೋಮಲವಾದ ಅಂಗದ ಮಾಂಸವನ್ನು ಖಂಡ ಖಂಡವಾಗಿ ಕೊಯಿದು, ಕೊಯಿದು, ಒಂದು ತ್ರಾಸಿನಲ್ಲಿ ಕಪೋತವನ್ನು ಇತ್ತು, ಅದಕ್ಕೆ ಸರಿ ತೂಕವಾಗಿ ತೂಗುತ್ತಾ, ತೂಗುತ್ತಾ ಇದ್ದರೂ, ಆ ಕಪೋತಕ್ಕೆ ಅರಿಯಾಗಿ ಮಾಂಸವಿ ತೂಗಲಾರದೆ ಹೋಯಿತು. ಆಗ ಆ ರಾಜನು ಅತಿ ಶಾಂತತ್ವವನ್ನು ತಾಳಿ , ಸತ್ಯವನ್ನು ಈಡೇರಿಸಬೇಕೆಂದು ತನ್ನ ಶಿರಸ್ಸನ್ನು ಕತ್ತರಿಸಿ ಕೊಡುವುದಕ್ಕೆ ಕುತ್ತಿಗೆ ಪ್ರದೇಶಕ್ಕೆ ಖಡ್ಗವನ್ನು ಚಾಚಿದನು. ಆಗ ಇಂದ್ರ ಅಗ್ನಿಗಳಿಬ್ಬರೂ ಶ್ಯೇನ ಕಪೋತ ರೂಪಗಳನ್ನು ಬಿಟ್ಟು, ನಿಜ ರೂಪಗಳಿಂದ ಅರಸನ ಎದುರಿಗೆ ನಿಂತು, ಅವನ ಕೈಯಲ್ಲಿ ಇದ್ದ ಖಡ್ಗವನ್ನು ಹಿಡಿದು, ಅತ್ತ ಸರಿಸಿ, ಇಂತೆಂದರು;- ಓ ಸತ್ಯ ಪ್ರತಿಜ್ಞೆಯುಳ್ಳ ಚಕ್ರವರ್ತಿಯೇ, ನಿನ್ನ ಪದ ವಾಕ್ಯ ಪ್ರಮಾಣಜ್ಞತೆಗೆ ಮೆಚ್ಚಿದೆವು. ನಾವು ಇಂದ್ರಾಗ್ನಿಗಳು. ನಿನ್ನ ಸತ್ಯ ಗುಣಗಳನ್ನು ಪರೀಕ್ಷೆ ಮಾಡಬೇಕೆಂದು ಬಂದು ಸಾಂಗವಾಗಿ ಪರೀಕ್ಷಿಸಿದೆವು. ನಿನ್ನ ಸತ್ಯಕ್ಕೆ ಮೆಚ್ಚಿದೆವು ಎಂದು ಹೇಳಿ,ಅವನನ್ನು ಹರಸಿ, ತಮ್ಮ ಲೋಕಕ್ಕೆ ಹೊರಟುಹೋದರು.