ಝರತುಷ್ಟ್ರ: ಸತ್ಯದ ಹುಡುಕಾಟದಲ್ಲಿ ಒಬ್ಬ ಯುವಕನ ಪ್ರಯಾಣದ ಕತೆ
ಝರತುಷ್ಟ್ರ (Zarathustra)-ಪ್ರಾಚೀನ ಇರಾನೀ ಜನರ ಪ್ರವಾದಿ. ಗ್ರೀಕ್ ಮತ್ತು ಇತರ ಐರೋಪ್ಯ ಭಾಷೆಗಳಲ್ಲಿ ಈತನನ್ನು ಝೊರೊ ಆಸ್ಟರ್ (Zoroaster) ಎನ್ನಲಾಗಿದೆ. ಈತನ ಕಾಲವೂ ವೈದಿಕ ಋಷಿಮುನಿಗಳ ಕಾಲ ಹೇಗೋ ಹಾಗೆ ನಿಖರವಾಗಿ ತಿಳಿದುಬಂದಿಲ್ಲ. ಕ್ರಿಸ್ತನಿಗಿಂತ ಈತ 5000 ವರ್ಷಗಳಷ್ಟು ಹಿಂದಿನವನಿದ್ದಿರಬೇಕೆಂದು ವಿದ್ವಾಂಸರ ಊಹೆ.

ನಮ್ಮ ಭಾರತದ ವಾಯವ್ಯ ದಿಕ್ಕಿನಲ್ಲಿ ಇರಾಣ ಎಂಬ ದೇಶವಿದೆ. ಅಲ್ಲಿಯ ‘ರಯೆ‘(Ray) ಎಂಬ ನಗರದಲ್ಲಿ, ಒಂದು ರಾಜವಂಶದಲ್ಲಿ ಝೆರೋಸ್ತರನು ಹುಟ್ಟಿದನು. ಇವನ ತಂದೆಯ ಹೆಸರು ‘ಪೌರುಷಸ್ಪ ಸ್ಪಿತಾಮ‘(Pourušaspa Spitāma) ಎಂದು. ಅವನು ಬಹು ಪಂಡಿತನೂ ಸದಾಚಾರಿಯೂ ಆಗಿದ್ದನು. ತಾಯಿಯ ಹೆಸರು ‘ದುಗ್ಡೋವಾ‘(Dughdova) ಎಂದು. ಆಕೆ ಸುಶೀಲೆಯೂ ಪತಿವ್ರತೆಯೂ ಆಗಿದ್ದಳು. ಗಂಡ, ಹೆಂಡತಿ ಇಬ್ಬರೂ ದೇವರಲ್ಲಿ ಭಕ್ತಿಯುಳ್ಳವರಾಗಿದ್ದರು. ಅವರು ತಮ್ಮ ಮಗುವಿಗೆ ಸ್ಪಿತಮ (Spitāma) ಎಂದು ಮುದ್ದಾದ ಹೆಸರಿಟ್ಟರು.
ಇರಾಣದೇಶದ ಅರಸನು ಅತ್ಯಾಚಾರಿಯಾಗಿದ್ದನು. ಸ್ಪಿತಮನು ಹುಟ್ಟಿದ ಕೆಲವು ದಿವಸಗಳಲ್ಲಿ ಅರಸನಿಗೆ ಅಪಶಕುನಗಳು ಕಂಡುವು. ಆಗ ಅವನು ಜ್ಯೋತಿಷಿಗಳನ್ನು ಕರೆಸಿ ಕೇಳಿದನು. ಅವರು “ಈಗ ಹುಟ್ಟಿ ಬಂದಿರುವ ಸ್ಪಿತಮನು ಮುಂದೆ ನಿಮ್ಮ ಅನ್ಯಾಯ-ಅತ್ಯಾಚಾರಗಳನ್ನು ಬಯಲಿಗೆ ತರುವನು; ಜನರಲ್ಲಿ ನಿಮ್ಮ ವಿಷಯದಲ್ಲಿ ಆದರ-ವಿಶ್ವಾಸಗಳು ಹುಟ್ಟದಂತೆ ಮಾಡುವನು. ಅವನ ಮುಂದೆ ನಿಮ್ಮ ಆಟವೇನೂ ನಡೆಯದು. ಅವನನ್ನೇ ಜನರು ಹಿಂಬಾಲಿಸುವರು. ಅವನು ಒಂದು ಹೊಸ ಧರ್ಮವನ್ನು ಸ್ಥಾಪಿಸುವನು” ಎಂದು ಹೇಳಿದರು. ಆಗ ಅರಸನಿಗೆ ಚಿಂತೆ ಹುಟ್ಟಿತು. ಚಿಕ್ಕವನಿರುವಾಗಲೇ ಈ ಸ್ಪಿತಮನನ್ನು ಹೇಗಾದರೂ ಮಾಡಿ ಕೊಲ್ಲಿಸಬೇಕೆಂದು ಹಂಚಿಕೆ ಹಾಕಹತ್ತಿದನು. ಅರಸನಂತೆಯೆ ಆಗಿನ ಕಾಲದ ಬೇರೆ ಧರ್ಮದ ಜನರೂ ಬಾಲಕ ಸ್ಪಿತಮನನ್ನು ಕೊಲ್ಲಿಸಬೇಕೆಂದು ನಾನಾ ಉಪಾಯಗಳನ್ನು ಮಾಡಿದರು. ಆದರೆ ಅವೆಲ್ಲ ಕೊನೆಗಾಣದೆ ಹೋದುವು.
ಸ್ಪಿತಮನು ದಿನದಿನಕ್ಕೆ ಬೆಳೆಯತೊಡಗಿದನು. ತಂದೆಯು ಅವನಿಗೆ ಮನೆಯಲ್ಲಿಯೆ ಓದು-ಬರಹಗಳನ್ನು ಕಲಿಸಿದನು; ಧರ್ಮ-ನೀತಿಗಳನ್ನು ತಿಳುಹಿದನು. ತನ್ನ ಸುತ್ತುಮುತ್ತಣ ಜನರ ರೀತಿ-ನಡತೆಗಳನ್ನು ಕಂಡು ಬಾಲಕ ಸ್ಪಿತಮನು ಮನಸ್ಸಿನಲ್ಲಿ ನೊಂದುಕೊಳ್ಳುತ್ತಿದ್ದನು. “ಈ ಜನರನ್ನು ಹೇಗೆ ತಿದ್ದಬೇಕು?” ಎಂದು ತನ್ನಲ್ಲಿ ತಾನೆ ಯೋಚನೆ ಮಾಡುತ್ತಿದ್ದನು. ದೊಡ್ಡವನಾದಂತೆ ಸ್ಪಿತಮನಿಗೆ ಸಂಸಾರದ ತೊಂದರೆಗಳು ಬೇಡವೆನಿಸಿದುವು. ಅವನ ಮನಸ್ಸು ಏಕಾಂತವಾಸದ ಕಡೆಗೆ ಎಳಸಿತು. ಹದಿನೈದು ವರುಷದವನಾಗುತ್ತಲೆ ಅವನು ಮನೆಬಿಟ್ಟು ಅಡವಿಗೆ ಹೋದನು.
ಸ್ವಾರ್ಥಭಾವವನ್ನು ಸಂಪೂರ್ಣವಾಗಿ ಬಿಟ್ಟಾಗಲೆ ತಪಸ್ಸಿನ ಫಲವು ಸಿಗುವುದೆಂದು ಝೆರೋಸ್ತರನಿಗೆ ಮನವರಿಕೆಯಾಯಿತು. ಆದುದರಿಂದ ಅವನು ಸ್ವಂತದ ಸುಖ-ದುಃಖಗಳ ವಿಚಾರವನ್ನೆಲ್ಲ ಮರೆತು ಪರರಿಗೆ ನೆರವಾಗಲು ತೊಡಗಿದನು. ದೀನರು, ದುರ್ಬಲರು, ಮುದುಕರು ಇವರಿಗೆಲ್ಲ ಶಕ್ತಿ ಮೀರಿ ಸಹಾಯಮಾಡುವನು. ರೋಗಿಗಳಿಗೆ ಔಷಧಗಳನ್ನು ಕೊಟ್ಟು ಉಪಚರಿಸುವನು, ಹಸಿದವರಿಗೆ ಅನ್ನವನ್ನು ನೀಡುವನು, ನೀರಡಿಸಿ ಬಂದವರಿಗೆ ನೀರನ್ನು ಕೊಡುವನು. ಹೊರೆಹೊತ್ತು ನಡೆಯುವವರ ಶ್ರಮವನ್ನು ಕಡಿಮೆಮಾಡಲು, ತಾನು ಅವರ ಹೊರೆಯನ್ನು ಹೊರುವನು. ಸಂಸಾರದಲ್ಲಿ ಒದಗುವ ಆಪತ್ತು- ವಿಪತ್ತುಗಳಿಂದ ನರಳುತಿರುವವರನ್ನು ಸಮಾಧಾನದ ಮಾತುಗಳಿಂದ ಸಂತಯಿಸುವನು.
ಜನಸೇವೆಯ ಕಾರ್ಯದೊಂದಿಗೆ ದೇವನನ್ನು ಕಾಣಬೇಕೆಂದು ಅವನ ತಪಸ್ಸಾಧನೆಯೂ ನಡೆದಿತ್ತು. ಆ ವೇಳೆಯಲ್ಲಿ ತಪಸ್ಸನ್ನು ಕೆಡಿಸಲು ಅನೇಕ ದುರ್ಗುಣಗಳು ಝೆರೋಸ್ತರನ ಮನಸ್ಸನ್ನು ಪೀಡಿಸತೊಡಗಿದುವು. ಆದರೆ ಸ್ಪಿತಮನು “ಪ್ರಾಣಹೋದರೂ ಚಿಂತೆಯಿಲ್ಲ. ನಾನು ಭಗವಂತನ ಆರಾಧನೆಯನ್ನು ಎಂದೂ ಬಿಡಲಿಕ್ಕಿಲ್ಲ” ಎಂದು ದೃಢಪ್ರತಿಜ್ಞೆ ಮಾಡಿದನು. ತನ್ನ ಮನಸ್ಸಿಗೆ ಶಾಂತಿಸಿಗುವವರೆಗೆ ಅವನು ತಪಶ್ಚರ್ಯವನ್ನು ಮಾಡಿದನು. ಇದರಿಂದ ಅವನಲ್ಲಿ ತೇಜಸ್ಸು ಹುಟ್ಟಿತು. ಜನರು ಅವನ ಮುಖದ ಕಾಂತಿಗೆ ಮೆಚ್ಚಿ ‘ಝೆರೋಸ್ತರ್‘ ಎಂದರೆ ‘ಚಿನ್ನದ ಹೊಳಪಿನ ತೇಜಸ್ವಿ‘ ಎಂದು ಕರೆಯಹತ್ತಿದರು.
ತಪಸ್ಸನ್ನು ಮುಗಿಸಿ ಝೆರೋಸ್ತರನು ತಿರುಗಿ ಮನೆಗೆ ಬಂದನು. ಆಗ ಅವನಿಗೆ ಮೂವತ್ತು ವರುಷಗಳಾಗಿದ್ದುವು. ಅವನು ಜನರಿಗೆ ಒಳ್ಳೆಯ ಮಾರ್ಗದಿಂದ ನಡೆಯುವಂತೆ ಬೋಧಿಸತೊಡಗಿದನು:
“ದೇವರು ಎಲ್ಲರಿಗಿಂತ ದೊಡ್ಡವನು. ಅವನೇ ನಮ್ಮನ್ನೆಲ್ಲ ಕಾಪಾಡುವವನು. ಮಾನವರೆಲ್ಲರೂ ದೇವರ ಭಕ್ತರಾಗಬೇಕು. ದಾನಧರ್ಮ, ಪರೋಪಕಾರ, ಜನಸೇವೆ — ಇವೇ ದೇವರ ಪ್ರೀತಿಯ ಕೆಲಸಗಳು, ಇವುಗಳನ್ನು ಪ್ರತಿಯೊಬ್ಬ ಮಾನವನು ಮಾಡುತ್ತಿರಬೇಕು. ಇದೇ ನಿಜವಾದ ಧರ್ಮದ ದಾರಿ”. ಝೆರೋಸ್ತರನು ಜನರಿಗೆ ಬೋಧಿಸಿದ ಮುಖ್ಯ ಮಾತುಗಳಿವು.
ಮೊದಮೊದಲು ಝೆರೋಸ್ತರನ ಉಪದೇಶವನ್ನು ಯಾರೂ ಕೇಳಲಿಲ್ಲ. ಆದರೂ ಆ ಧೀರಪುರುಷನು ತಾನು ಹಿಡಿದ ಕೆಲಸವನ್ನು ಬಿಡಲಿಲ್ಲ. ಕೊನೆಗೆ ಬಲ‍್ಖ್ ಪ್ರಾಂತದ ಆರಸನಾದ ವಿಸ್ತಾಸ್ಪನು, ಅವನನ್ನು ಕರೆಸಿಕೊಂಡು ಅವನ ಶಿಷ್ಯನಾದನು. ಅಂದಿನಿಂದ ಝೆರೋಸ್ತರನು ತನ್ನ ಹೊಸಧರ್ಮವನ್ನು ಹಬ್ಬಿಸಲು ಪ್ರಾರಂಭಿಸಿದನು. ಸುತ್ತುಮುತ್ತಲಿನ ಜನರೆಲ್ಲ ಆ ಹೊಸಧರ್ಮವನ್ನು ಸ್ವೀಕರಿಸಿ ಆತನ ಅನುಯಾಯಿಗಳಾದರು. ಹೀಗೆ ಜನರಲ್ಲಿ ಸೇವಾಬುದ್ಧಿ ಪರೋಪಕಾರಗಳು ನೆಲೆಗೊಳ್ಳುವಂತೆ ಹೊಸಧರ್ಮವನ್ನು ಬೋಧಿಸಿ ಝೆರೋಸ್ತರನು ಮಹಾತ್ಮನೆಂದು ಹೊಗಳಿಸಿಕೊಂಡನು. ಝೆರೋಸ್ತರನ ಉಪದೇಶಗಳನ್ನೆಲ್ಲ ಒಟ್ಟುಗೂಡಿಸಿ ಒಂದು ಗ್ರಂಥದಲ್ಲಿ ಬರೆದಿಟ್ಟಿದ್ದಾರೆ. ಅದರ ಹೆಸರು “ಅವೆಸ್ತಾ” ಎಂದಿದೆ. ಅದು ಪಾರಸೀ ಧರ್ಮದ ಪವಿತ್ರಗ್ರಂಥವಾಗಿದೆ.
ಝೆರೋಸ್ತರನ ಉಪದೇಶಗಳನ್ನೆಲ್ಲ ಒಟ್ಟುಗೂಡಿಸಿ ಒಂದು ಗ್ರಂಥದಲ್ಲಿ ಬರೆದಿಟ್ಟಿದ್ದಾರೆ. ಅದರ ಹೆಸರು “ಅವೆಸ್ತಾ” ಎಂದಿದೆ. ಅದು ಪಾರಸೀ ಧರ್ಮದ ಪವಿತ್ರಗ್ರಂಥವಾಗಿದೆ.
ಮಹಾತ್ಮಾ ಝೆರೋಸ್ತರನ ತರುವಾಯ ಅವನ ಧರ್ಮವು ಜಗತ್ತಿನ ಬೇರೆಬೇರೆ ಭಾಗಗಳಲ್ಲಿ ಹಬ್ಬಿತು. ಈಗ ನಮ್ಮ ಭಾರತದಲ್ಲಿ ಸುಮಾರು ಎರಡು ಲಕ್ಷದಷ್ಟು(1956 ರ ಸಮಯದಲ್ಲಿ) ಪಾರಸಿ ಧರ್ಮದ ಜನರಿದ್ದಾರೆ. ಅವರ ಪೂರ್ವಜರು ಇರಾಣದಿಂದ ಓಡಿಬಂದು ಭಾರತದಲ್ಲಿ ಆಶ್ರಯಪಡೆದರು. ಅವರು ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಇದ್ದುಕೊಂಡು ವ್ಯಾಪಾರ-ಉದ್ಯೋಗಗಳನ್ನು ಮಾಡುತ್ತಾರೆ. ಪಾರಸೀ ಜನರು ಝೆರೋಸ್ತರನ ಉಪದೇಶಗಳನ್ನು ಬಹು ಭಕ್ತಿಯಿಂದ ಪಾಲಿಸುತ್ತಾರೆ. ಪರೋಪಕಾರವೇ ಅವರ ಧರ್ಮದ ಮುಖ್ಯ ಆಚಾರವಾಗಿದೆ. ಮನುಷ್ಯನು ಬದುಕಿರುವಾಗ ಅವನು ಪರೋಪಕಾರಕ್ಕಾಗಿಯೆ ದುಡಿಯುತ್ತಿರಬೇಕು; ಇಷ್ಟೇ ಅಲ್ಲ, ಸತ್ತ ಮೇಲೆಯೂ ಆತನ ದೇಹವು ಪರೋಪಕಾರಕ್ಕೆ ಉಪಯೋಗವಾಗಬೇಕೆಂದು ಅವರ ಧರ್ಮದ ಕಟ್ಟಳೆ. ಅದಕ್ಕಾಗಿಯೆ ಪಾರಸೀ ಜನರು, ತಮ್ಮ ಹೆಣಗಳನ್ನು ಹೂಳುವುದಿಲ್ಲ, ದಹನ ಮಾಡುವುದೂ ಇಲ್ಲ. ಸ್ಮಶಾನದಲ್ಲಿರುವ ಎತ್ತರವಾದ ಒಂದು ಜಗುಲಿಯ ಮೇಲೆ ಬರಿಮೈಯಿಂದ ಹಣವನ್ನು ಇಟ್ಟುಬಿಡುತ್ತಾರೆ. ಅದನ್ನು ಹದ್ದು ಕಾಗೆಗಳು ಹರಿದು ತಿಂದುಬಿಡುವುವು. ಇದರಿಂದ ದೇಹದ ಸದುಪಯೋಗವಾದಂತಾಗುವುದು ಎಂದು ಅವರ ನಂಬುಗೆ.
ಇಂದಿಗೆ ಸುಮಾರು ಮೂರು ಸಾವಿರ ವರುಷಗಳ ಹಿಂದೆ ಆಗಿಹೋದ ಆ ಮಹಾತ್ಮನ ಕೀರ್ತಿಯು ಈಗಲೂ ಜಗತ್ತಿನ ತುಂಬ ಪಸರಿಸಿದೆ. ಆದುದರಿಂದಲೇ ಜನರು ವರುಷ-ವರುಷವೂ ಆತನ ಜಯಂತಿಯನ್ನು ಆಚರಿಸುತ್ತಾರೆ.
ಐತಿಹಾಸಿಕ ಕತೆಗಳು ಪುಸ್ತಕದಿಂದ ಸಂಗ್ರಹಿಸಿದ ಕತೆ. ಲೇಖಕರು: ಜಿ.ವಿ ಅಂಗಡಿ.