ಕುವೆಂಪು ನುಡಿಗಳು
ಪಾಶ್ಚಾತ್ಯರಲ್ಲಿ ಅನೇಕರು, ವಿಶ್ವವಿದ್ಯಾನಿಲಯಗಳ ಮೆಟ್ಟಿಲನ್ನು ಕೂಡ ಹತ್ತದೇ ಇರುವವರು, ಎಷ್ಟೋಜನ ವಿಜ್ಞಾನದಲ್ಲಿ ದೊಡ್ಡ ಆವಿಷ್ಕಾರಗಳನ್ನು ಮಾಡಿದ್ದಾರೆ. ಕಾರಣ ಏನೆಂದರೆ ಅವರವರ ಭಾಷೆಗಳಲ್ಲಿ ಅವರು ಚಿಂತನೆ ನಡೆಸಿದ್ದಾರೆ.
ಪಂಪ ಕೀರ್ತಿದೃಷ್ಟಿಯಿಂದ ಕರ್ನಾಟಕದ ಕವಿ. ಆದರೆ ಅಂತರ್ ಮೌಲ್ಯದ ದೃಷ್ಟಿಯಿಂದ ಅವನು ಜಗತ್ಕವಿ. ಷೇಕ್ಸ್‌ಪಿಯರಿಗೆ ಒದಗಿದ ಅಥವಾ ಷೇಕ್ಸ್‌ಪಿಯರನ ಇಂಗ್ಲೆಂಡಿಗೆ ಒದಗಿದಂಥ ಜಗತ್ತನ್ನೇ ಜಯಿಸುವ, ಆಳುವ ಒಂದು ಸಂದರ್ಭ ನಮ್ಮ ಕರ್ನಾಟಕಕ್ಕೆ ಒದಗಿದ್ದರೆ, ನಾವು ಆಗ ಕನ್ನಡವನ್ನು ಅಲ್ಲಿ ಅಧಿಕೃತ ಭಾಷೆ ಮಾಡಿ, ನಮ್ಮ ಪಂಪ ರನ್ನ ಇವರನ್ನೆಲ್ಲ ಅಲ್ಲಿ ಮೆರೆದಿದ್ದರೆ, ನಮ್ಮ ವಿಮರ್ಶೆಗಳನ್ನೆಲ್ಲ ಬ್ರಾಡ್ಲೆ ಅವರೆಲ್ಲ ಬರೆದಹಾಗೆ ನಾವೂ ಬರೆದು ಮಾಡಿದ್ದರೆ, ಆಗ ಪಂಪನೂ ಕೀರ್ತಿದೃಷ್ಟಿಯಿಂದಲೂ ಜಗತ್ಕವಿಯೇ ಆಗಿಬಿಡುತ್ತಿದ್ದ.
ಕಚ್ಚಾಡುವುದು ಕರ್ನಾಟಕದ ರೋಗವಾಗಿಬಿಟ್ಟಿದೆ. ಒಡೆದುಹೋಗಿರುವ ಮನಸ್ಸನ್ನು ಕೂಡಿಸಿ ಒಲಿಸಿದರೆ ಎಲ್ಲಾ ಕ್ಷೇತ್ರಗಳಲ್ಲೂ ಅಮೃತೋದ್ಭವವಾದೀತು.