ಜ್ಯೋತಿಯೇ ಆಗು ಜಗಕೆಲ್ಲ – ಜನಪದಗೀತೆ
ಆಚಾರಕರಸಾಗು ನೀತಿಗೆ ಪ್ರಭುವಾಗು
ಮಾತಿನಲಿ ಚೂಡಾಮಣಿಯಾಗು | ನನಕಂದ
ಜ್ಯೋತಿಯೇ ಆಗು ಜಗಕೆಲ್ಲ || ೧ ||
ಸಂಸಾರವೆಂಬುದು ಸಾಗರ ಹೊಳೆಯಪ್ಪ
ಈಸಬಲ್ಲವನಿಗೆ ಎದೆಯುದ್ದ | ನನಕಂದ
ಓದುಬಲ್ಲವನಿಗೆ ಕೈಲಾಸ || ೨ ||
ಬಂಗಾರದ ಬಳೆತೊಟ್ಟು ಬೈಬ್ಯಾಡ ಬಡವರ
ಬಂಗಾರ ನಿನಗೆ ಸ್ಥಿರವಲ್ಲ | ಮದ್ದಿನದ
ಹೊತ್ತು ಹೊರಳೋದು ತಡವಲ್ಲ || ೩ ||
ಕೊಟ್ಟು ಕುದಿಯಲುಬೇಡ ಇಟ್ಟು ಹಂಗಿಸಬೇಡ
ಎಷ್ಟುನ್ಡರೆಂದು ಅನಬೇಡ | ಇವು ಮೂರು
ಮುಟ್ಟುವುದು ಶಿವನ ಬಳಿಯಲ್ಲಿ || ೪ ||
ಅಕ್ಕ ಇದ್ದರೆ ಭಾವ ರೊಕ್ಕ ಇದ್ದರೆ ಸಂತೆ
ಮಕ್ಕಳಿದ್ದರೆ ಮನಿಮಾರು | ಹಡೆದವ್ವ
ನೀ ಇದ್ದರೆ ನಮಗ ಸಾಂರಾಜ್ಯ || ೫ ||
ಉಂಡಾಗ ಉಡುವಾಗ ಜನವೆಲ್ಲ ನೆಂಟರು
ಅಡವಿಯ ಸೊಪ್ಪು ತಲೆಯಲ್ಲಿ | ತಪ್ಪಾಗ
ಒಡಹುಟ್ಟಿದಣ್ಣ ಮುಖನೋಡ || ೬ ||
ಜನಪದ ಸಾಹಿತ್ಯದಲ್ಲಿ ಗೀತೆಯೊಂದು ಪ್ರಮುಖ ಪ್ರಕಾರವಾಗಿದ್ದು, ನೂರಾರು ವರ್ಷಗಳಿಂದ ಮೌಖಿಕವಾಗಿ ಉಳಿದುಕೊಂಡು ಬಂದಿರುವ ಸಾಹಿತ್ಯವಾಗಿದೆ.
ಅದು ಹಳ್ಳಿಯ ಬದುಕಿನೊಂದಿಗೆ ಮಿಳಿತವಾಗಿದೆ. ಬಹುತೇಕ ಜನಪದ ಗೀತೆಗಳು ಕ್ರಿಯೆಯ ಪ್ರೇರಣೆಯಿಂದ ಜನ್ಮ ತಾಳಿವೆ.
ಜನಪದರ ನಿತ್ಯದ ಕೆಲಸಗಳಾದ ಕುಟ್ಟುವುದು, ಬೀಸುವುದು, ಕೇರುವುದು, ಕಡೆಯುವುದು, ತೂಗುವುದು, ಬಿತ್ತುವುದು, ತೂರುವುದು, ಕಳೆ ಕೀಳುವುದು, ಗಾಡಿ ಹೊಡೆಯುವುದು ಮುಂತಾದ ಸಂದರ್ಭಗಳಲ್ಲಿ ಹಾಡುಗಳು ಸಹಜವಾಗಿ ಹೊರಹೊಮ್ಮುತ್ತವೆ.
ಜೊತೆಗೆ ಹಬ್ಬ, ಹರಿದಿನ, ಮದುವೆ, ಗೃಹಪ್ರವೇಶ ಮುಂತಾದ ಶುಭಕಾರ್ಯಗಳು ಹಾಡಿನಿಂದಲೇ ಆರಂಭಗೊಂಡು, ಹಾಡಿನಿಂದಲೇ ಮುಕ್ತಾಯಗೊಳ್ಳುತ್ತವೆ.
ಈ ಜನಪದ ಗೀತೆಗಳು ಜೀವನ ಮೌಲ್ಯಗಳನ್ನು ಒಳಗೊಂಡಿದ್ದು ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಲು ಮಾರ್ಗದರ್ಶಿಯಾಗಿವೆ.