ಪಂಚತಂತ್ರ ಕತೆಗಳು, ಭಾಗ-೧ ಪೀಠಿಕೆ

ಪಂಚತಂತ್ರ ಕತೆಗಳು
ಪಂಚತಂತ್ರ ಕತೆಗಳು

ಒಂದಾನೊಂದು ಕಾಲದಲ್ಲಿ  ಪಾಟಲೀಪುರ ಅಂತ ಒಂದು ರಾಜ್ಯ ಇತ್ತು. ಆ ರಾಜ್ಯಾನ ಸುದರ್ಶನ ಅನ್ನೋ ಒಬ್ಬ ರಾಜ ಆಳ್ತಾ ಇದ್ದ. ಪಾಟಲೀಪುರವು  ವೇದ ಪುರಾಣ ನೀತಿ ಶಾಸ್ತ್ರ ಕಲಿತ ವಿದ್ವಾಂಸರು, ಧೈರ್ಯಶಾಲಿಗಳಾದ ಯೋಧರು, ಬುದ್ದಿವಂತ ಹಾಗು ಶ್ರೀಮಂತರಾದ ವ್ಯಾಪಾರಿಗಳು, ಪ್ರಾಮಾಣಿಕ ಪ್ರಜೆಗಳು, ದೇವಾಲಯಗಳು ಹಾಗು ಇನ್ನಿತರ ಸಂಪತ್ತಿನಿಂದ ಮೆರೆಯುತಿತ್ತು. 

ಆದರೂ ಆ ರಾಜನಿಗೆ ಒಂದು ಕೊರಗು. ತನ್ನ ಮಕ್ಕಳಾದ ರಾಜಕುಮಾರರು ಯಾರು ವಿದ್ಯೆ ಬುದ್ದಿ ಕಲಿಯದೇ ತಪ್ಪು ದಾರಿಯಲ್ಲಿ ಹೋಗುತ್ತಿದ್ದಾರೆ ಎಂದು. ಒಂದು ದಿನ ತನ್ನ ರಾಜ ಸಭೆಯಲ್ಲಿ ಎಲ್ಲ ವಿದ್ವಾಂಸರು, ಮಂತ್ರಿಗಳು, ಮಿತ್ರರೊಂದಿಗೆ ರಾಜ ತನ್ನ ಚಿಂತೆಯನ್ನು ಹಂಚಿಕೊಂಡ. 

“ನೀತಿ ಶಾಸ್ತ್ರ , ಒಳ್ಳೆಯ ನಡವಳಿಕೆ ಏನೊಂದೂ ಕಲಿಯದ ರಾಜಕುಮಾರರನ್ನು ಸರಿ ದಾರಿಗೆ ತರಲು ಯಾರಾದರು ಏನಾದರು ಪರಿಹಾರ ಹೇಳುವಿರಾ? “ ಎಂದು. 

ಆ ಸಭೆಯಲ್ಲಿ ವಿಷ್ಣುಶರ್ಮ ಎಂಬ ಒಬ್ಬ ವಿದ್ವಾಂಸನಿದ್ದನು. ಅವನು ದೇವತೆಗಳಿಗೇ ಗುರುವಾಗಿದ್ದ ಬೃಹಸ್ಪತಿಗೆ ಸಮಾನವಾಗಿ ನೀತಿಶಾಸ್ತ್ರಗಳನ್ನು ತಿಳಿದವನು ಎಂದು ಪ್ರಸಿದ್ದನಾಗಿದ್ದನು. ಅವನು ಎದ್ದು ನಿಂತು ಹೀಗೆ ಹೇಳಿದನು, 

“ಮಹಾರಾಜಾ, ಇದಕ್ಕೆ ಇಷ್ಟೊಂದು ಚಿಂತೆ ಮಾಡುವ ಅವಶ್ಯಕತೆಯಿಲ್ಲ. ರಾಜಕುಮಾರರನ್ನು ಆರು ತಿಂಗಳ ಕಾಲ ನನ್ನ ಜೊತೆಯಲ್ಲಿ ಕಳುಹಿಸಿರಿ. ನಾನು ಅವರನ್ನು ವಿದ್ಯಾವಂತರನ್ನಾಗಿ ಮಾಡುವೆ, ಸಾಧ್ಯವಾಗದೆ ಹೋದರೆ ನಾನು ಈ ರಾಜ್ಯವನ್ನೇ ಬಿಟ್ಟು ಹೋಗುವೆ” ಎಂದು ಪ್ರತಿಜ್ಞೆ ಮಾಡಿದನು.

ಇದನ್ನು ಕೇಳಿ ಸುದರ್ಶನ ರಾಜನಿಗೆ ಬಹಳವೇ ಸಂತೋಷವಾಯಿತು. ಅವನು ವಿಷ್ಣುಶರ್ಮನಿಗೆ ಒಡವೆ ವಸ್ತ್ರ ಸಂಪತ್ತನ್ನು ಬಹುಮಾನವಾಗಿ ಕೊಟ್ಟು, ತನ್ನ ರಾಜಕುಮಾರರನ್ನು ಕರೆಸಿ,

 “ಅಯ್ಯಾ ವಿಷ್ಣುಶರ್ಮ ಇನ್ನು ಮುಂದೆ ಇವರು ನಿನ್ನ ಜವಾಬ್ದಾರಿ. ನಿನ್ನಮಕ್ಕಳಂತೆಯೇ ತಿಳಿದು ಇವರನ್ನು ವಿದ್ಯಾವಂತರನ್ನಾಗಿ ಮಾಡು”

 ಎಂದು ಹೇಳಿ ಮಕ್ಕಳನ್ನು ವಿಷ್ಣುಶರ್ಮನ ಜೊತೆ ಕಳುಹಿಸಿಕೊಟ್ಟನು.

ವಿಷ್ಣುಶರ್ಮನು ಬಹಳ ಯೋಚನೆ ಮಾಡಿರಾಜಕುಮಾರರಿಗೆ ಬೇಗನೇ ಮತ್ತು ಸುಲಭವಾಗಿಕಲಿಯಲು ಸಾಧ್ಯವಾಗುವಂತೆ, ಪಂಚತಂತ್ರವೆಂಬ ಗ್ರಂಥವನ್ನು ರಚಿಸಿದನು. ಜೀವನದಲ್ಲಿ ಎದುರಾಗುವ ನಾನಾ ಬಗೆಯ ಸಂಧರ್ಭ ಸಂಕಷ್ಟಗಳನ್ನು ಜಾಣತನದಿಂದ ಬಗೆಹರಿಸಲು ಸಾಧ್ಯವಾಗುವ ಹಾಗೆ ಐದು ಬಗೆಯ ತಂತ್ರಗಳನ್ನು, ಕತೆಗಳ ರೂಪದಲ್ಲಿ ರಚಿಸಿದನು. 

ಈ ಪಂಚ ತಂತ್ರಗಳು ಯಾವೆಂದರೆ –

ಮಿತ್ರಭೇದ : ಮಿತ್ರರ ನಡುವೆ  ಒಡಕು ತಂದು ಕಾರ್ಯ ಸಾಧಿಸುವುದು.  ಕಾಡಿನ ರಾಜ ಸಿಂಹ ಹಾಗು ಒಂದು ಎತ್ತಿನ ಸ್ನೇಹದಿಂದಾದ ತೊಂದರೆ, ಒಂದು ಜಾಣ ನರಿಯು ಅವುಗಳ ಸ್ನೇಹವನ್ನು ಒಡೆದು ಕಾಡಿನ ಒಳಿತನ್ನು ಸಾದಿಸಿದ ಕತೆ.

ಮಿತ್ರಸಂಪ್ರಾಪ್ತಿ :  ಒಳ್ಳೆಯ ಮಿತ್ರರ ಸಹವಾಸದಿಂದ ಆಗುವ ಒಳಿತಿನ ಬಗೆ . ಪಾರಿವಾಳ, ಕಾಗೆ, ಇಲಿ, ಆಮೆಯ ಹಾಗು  ಒಂದು  ಜಿಂಕೆಯ ನಡುವಿನ ಸ್ನೇಹ ಮತ್ತು ಅವು ಒಟ್ಟಿಗೆ  ಆಪತ್ತಿನಿಂದ ಪಾರಾದ  ಬಗೆಯ ಕತೆ.

ಕಾಕೋಲೂಕೀಯ :  ಇದು ಯುದ್ಧ ಹಾಗು ಶಾಂತಿಯ ತಂತ್ರದ ಕತೆ. ಇಂದಿಗೂ ಬಗೆಹರಿಯದ ಕಾಗೆ ಹಾಗು ಗೂಬೆಗಳ ಜಗಳದ ಕತೆಯ ಮೂಲಕ ಈ ತಂತ್ರವನ್ನು ಪ್ರಸ್ತುತಪಡಿಸಲಾಗಿದೆ. 

ಲಬ್ಧಪ್ರಣಾಶ : ಅನಿರೀಕ್ಷಿತವಾಗಿ ಕಷ್ಟದಲ್ಲಿ ಸಿಲುಕಿಕೊಂಡಾಗ ಧೈರ್ಯಗೆಡದೆ ಸಮಾಧಾನ ಬುದ್ಧಿಯಿಂದ ಕೆಲಸ ಮಾಡಿದರೆ ಹೇಗೆ ಕಷ್ಟಗಳನ್ನು ಗೆಲ್ಲಬಹುದು ಎಂಬುದರ ವಿಷಯವಾಗಿ ಒಂದು ಮಂಗಾ ಹಾಗು ಮೊಸಳೆಯ ಕತೆಯ ಮೂಲಕ ಹೇಳಲಾಗಿದೆ. 

ಅಪರೀಕ್ಷಿತಕಾರಕ : ಮುಂದಾಲೋಚನೆ ಇಲ್ಲದೆ ದುಡುಕಿ ಯಾವದೇ ಕೆಲಸಕ್ಕೆ ಕೈ ಹಾಕಿದರೆ ಉಂಟಾಗುವ ಸಮಸ್ಯೆಗಳು,ಹಾಗು ಅದನ್ನು ಬಗೆಹರಿಸುವ ತಂತ್ರವನ್ನು ಒಬ್ಬ ಬ್ರಾಹ್ಮಣ ಹಾಗು ಮುಂಗುಸಿಯ ಕತೆಯಲ್ಲಿ ವಿವರಿಸಲಾಗಿದೆ. ಯಾವುದೇ 

ಪಂಚತಂತ್ರ ಕತೆಗಳ ವಿಶೇಷತೆ ಏನೆಂದರೆ ಯಾವುದೇ ತಂತ್ರದ ಮುಖ್ಯಕತೆಗಳ ಒಳಗೆ , ಇನ್ನಷ್ಟು ಸಣ್ಣ ಸಣ್ಣ ಕತೆಗಳ ಮೂಲಕ ತಂತ್ರದ ಅಂಶಗಳು ಸುಲಭವಾಗಿ ಅರ್ಥವಾಗುವಂತೆ ರಚಿಸಿರುವುದು. ಈ ಸಣ್ಣ ಕತೆಗಳನ್ನು ಬಿಡಿಯಾಗಿ ಓದಬಹುದು, ಆದರೆ ತಂತ್ರದ ಸಂಪೂರ್ಣ ಸಾರಾಂಶ ಅರ್ಥವಾಗಲು ಮುಖ್ಯಕತೆಯ ಜೊತೆಗೆ  ಓದಬೇಕು. 

ಮುಂದಿನ ಭಾಗದಲ್ಲಿ ಮಿತ್ರಭೇದ –  ಸಿಂಹ ಹಾಗೂ ಎತ್ತಿನ ಕತೆ

You may also like...

1 Response

  1. 11th August 2020

    […] ಈ ಕತೆಗಳನ್ನು ಸರಳ ಭಾಷೆಯಲ್ಲಿ ಓದಲು ಪಂಚತಂತ್ರ ಕತೆಗಳು , ಲಿಂಕನ್ನು ಕ್ಲಿಕ್ […]

Leave a Reply

Your email address will not be published. Required fields are marked *