ವಾಣಿಯ ಸಮಸ್ಯೆ – ಕೊಡಗಿನ ಗೌರಮ್ಮನವರ ಕಾದಂಬರಿ

 

ಮರುದಿನ ಇಂದು ಮುರಿದ ಬೇಲಿಯನ್ನು ಸರಿಮಾಡಿಸುತ್ತಿದ್ದಾಗ ನೆರೆಮನೆಯ ಹಿತ್ತಲ ಬಾವಿಯ ಹತ್ತಿರ ತನ್ನ ಪ್ರಾಯದ ಹೆ೦ಗಸೊಬ್ಬಳನ್ನು ನೋಡಿದಳು. ಅವಳೂ ಇವಳನ್ನು ನೋಡಿದಳು. ನೋಡಿ ಮುಗುಳು ನಕ್ಕಳು. ಆ ನಗುವಿನ ಪ್ರತಿಬಿ೦ಬ ಇಂದುವಿನ ಮೋರೆಯಲ್ಲೂ ಮೂಡಿತು. ಸರಿ, ಮತ್ತೆರಡು ದಿನಗಳ ಕೆಲಸವಿದ್ದರೂ ಆ ದಿನದ ತರುವಾಯ ಬೇಲಿಯ ಕೆಲಸವು ಮುಂದುವರಿಯಲಿಲ್ಲ.

 

ಈ ರೀತಿ ನಗುವಿನಿಂದ ಮೊದಲಾದ ಇಂದು ಮತ್ತು ನೆರೆಮನೆಯ ವಾಣಿಯ ಪರಿಚಯವು ಒಂದು ವಾರ ತುಂಬುವುದರೊಳಗೆ ಸ್ನೇಹದ ದಾರಿ ಹಿಡಿದಿತ್ತು. ಯಾರ ಸ್ನೇಹವನ್ನೂ ಬಯಸದ ಇಂದುವಿಗೇ ವಾಣಿಯ ವಿಷಯಕ್ಕೆ ತನ್ನಲ್ಲಿ ಮೂಡಿದ್ದ ಆದರವನ್ನು ನೋಡಿ ಆಶ್ಚರ್ಯವಾಗುತ್ತಿತ್ತು. ವಾಣಿಯೇನೋ ಊರಿಗೆ ಹೊಸಬಳು. ಯಾರೊಬ್ಬರ ಗುರುತು ಪರಿಚಯವೂ ಇಲ್ಲ. ದಿನ ಬೆಳಗಾದರೆ ನೆರೆಮನೆಯ ಇಂದುವಿನ ಮುಖ ಕಾಣುವುದು. ವಾಣಿಗೆ ಅವಳ ಪರಿಚಯ ಕ್ರಮವಾಗಿ ಸ್ನೇಹವಾದುದು ಆಶ್ಚರ್ಯದ ಮಾತಲ್ಲ. ಆದರೆ ಅಷ್ಟೇ ಸಹಜಸ್ನೇಹದ ಸುಳಿವನ್ನೇ ಅರಿಯದ ತನ್ನ ಹೃದಯದಲ್ಲೂ ಆ ಸ್ನೇಹ ಪ್ರತಿಬಿಂಬಿಸುವುದೆಂದು ಮಾತ್ರ ಇಂದುವಿಗೆ ತಿಳಿಯದು.

 

ಆ ಮನೆಯಲ್ಲಿ ವಾಣಿ ಮತ್ತು ಅವಳ ಗಂಡ ರತ್ನ ಇಬ್ಬರೇ. ರತ್ನ ಆ ಊರಿಗೆ ಹೊಸದಾಗಿ ವರ್ಗವಾಗಿ ಬಂದ ಡಾಕ್ಟರ್‌. ಊರಿಗೆ ಒಬ್ಬನೇ ಡಾಕ್ಟರ್‌ ಆದುದರಿಂದ ಊಟ ತಿಂಡಿಗಳಿಗೆ ಸಹ ಬಿಡುವಿಲ್ಲದಷ್ಟು ಕೆಲಸ ಅವನಿಗೆ. ವಾಣಿಗಂತೂ ಮನೆಯೊಳಗೊಬ್ಬಳೇ ಇರುವುದಕ್ಕೆ ಬೇಸರ, ಆದರಿಂದ ಅವಳ ಮುಕ್ಕಾಲು ಸಮಯವೆಲ್ಲಾ ಇಂದುವಿನ ಮನೆಯಲ್ಲೇ ಕಳೆಯುತ್ತಿತ್ತು. ಇಂದುವೂ ಒಂದೆರಡು ಸಾರಿ ಅವಳ ಮನೆಗೆ ಹೋಗಿದ್ದಳು.

 

ಇಂದು ಮೊಟ್ಟಮೊದಲು ವಾಣಿಯ ಮನೆಗೆ ಹೋದಾಗ ಬಟ್ಟೆ-ಬರೆ, ಪಾತ್ರೆ- ಪದಾರ್ಥಗಳೆಲ್ಲಾ ಮನೆ ತುಂಬಾ ಅಸ್ತವ್ಯಸ್ತವಾಗಿ ಬಿದ್ದಿದ್ದವು. ವಾಣಿ ‘ಏನೋ ಹೊಸದಾಗಿ ಬಂದುದರಿಂದ ಮನೆಯನ್ನಿನ್ನೂ ವ್ಯವಸ್ಥಿತ ರೀತಿಗೆ ತರಲು ಸಮಯವಾಗಲಿಲ್ಲ’ ಎಂದು ಹೇಳಿದರೂ ತನ್ನ ಮನೆಯನ್ನು ಸದಾ ಸುವ್ಯವಸ್ಥಿತ ರೀತಿಯಲ್ಲಿಟ್ಟುಕೊ೦ಡಿದ್ದ ಇಂದುವಿಗೆ ‘ಬ೦ದು ಹದಿನೈದು ದಿನಗಳಾದರೂ ಇನ್ನೂ ಸಮಯವಾಗಿಲ್ಲವ?’ ಎಂದು ಆಶ್ಚರ್ಯ. ಆ ದಿನ ಅವುಗಳನ್ನೆಲ್ಲಾ ಸರಿಮಾಡಿಡಲು ವಾಣಿಗೆ ನೆರವಾದಳು. ಮಧ್ಯಾಹ್ನ ಎರಡು ಗಂಟೆಗೆ ಕೆಲಸ ಸುರು ಮಾಡಿದ್ದರೂ ಎಲ್ಲವನ್ನೂ ಸರಿಯಾಗಿ ಮಾಡುವಾಗ ಕತ್ತಲಾಗುವ ಸಮಯವಾಗಿತ್ತು. ಅಂತೂ ಎಲ್ಲಾ ಮುಗಿಯುವಾಗ ಮನೆಯು ಸ್ವಚ್ಛವಾಗಿ, ಸುಂದರವಾಗಿ ತೋರಿತು.

 

ಈ ಕೆಲಸದಲ್ಲಿ ವಾಣಿಗೆ ಇಂದು ನೆರವಾದಳು ಎನ್ನುವುದಕ್ಕಿಂತ ಇಂದುಗೆ ವಾಣಿ ನೆರವಾದಳು ಎಂದರೆ ಸರಿಯಾಗಬಹುದು. ಮುಕ್ಕಾಲು ಕೆಲಸ ಮಾಡಿದವಳು ಇಂದು. ಯಾವ ಯಾವ ಪದಾರ್ಥವನ್ನು ಎಲ್ಲೆಲ್ಲಿ ಇಡಬೇಕು; ಹೇಗೆ ಇಟ್ಟರೆ ಹೆಚ್ಚು ಸುಂದರವಾಗಿ ತೋರಬಹುದು ಎ೦ದು ಆಲೋಚಿಸಿ ಸರಿಮಾಡಿ ಅಣಿಯಾಗಿಟ್ಟವಳು ಇಂದು. ಇಂದು ಹೊರಲಾರದ ದೊಡ್ಡ ದೊಡ್ಡ ವಸ್ತುಗಳನ್ನು ಎತ್ತಿಡಲು ಸಹಾಯ ಮಾಡುವುದು ಅಥವಾ ಅವಳು ಹೇಳಿದ ಸಾಮಾನುಗಳನ್ನು ತಂದು ಕೊಡುವುದು ಇವು ವಾಣಿ ಮಾಡಿದ ಕೆಲಸ. ಅಂತೂ ಅವರ ಕೆಲಸ ಮುಗಿಯುವಾಗ ಮನೆಯೊಂದು ಹೊಸ ಕಳೆ ತಳೆದಿತ್ತು. ವಾಣಿಗಂತೂ ರೂಪು ಬದಲಾದ ತನ್ನ ಮನೆಯನ್ನು ನೋಡಿ ಹಿಡಿಸಲಾರದಷ್ಟು ಆಶ್ಚಯ ಆನಂದ.

 

ಅವಳದು ಜನ್ಮತಃ ಉದಾಸೀನ ಪ್ರವೃತ್ತಿ. ಯಾವ ಕೆಲಸವನ್ನಾದರೂ ನಾಳೆ ಮಾಡಿದರಾಯ್ತು ಎನ್ನುವ ಪ್ರಕೃತಿ. ನಾಳೆ ನಾಳೆ ಎಂದು ಯಾವಾಗಲೂ ಅವಳ ಕೆಲಸಗಳು ನಾಳೆಗಾಗಿ ಬಿದ್ದಿರುತ್ತಿದ್ದವು. ಅದರಿಂದ ಸಹಜವಾಗಿಯೇ ಅವಳ ಮನೆ ಎಂದೂ ಅ೦ದಿನಷ್ಟು ಸುಂದರವಾಗಿ ತೋರಿರಲಿಲ್ಲ.

 

ಆ ದಿನ ಸಾಯಂಕಾಲ ರತ್ನ ಸ್ವಲ್ಪ ಬೇಗನೆ ಬಂದ. ಅವನಿಗೂ ತನ್ನ ಮನೆಯ ಸುವ್ಯವಸ್ಥಿತ ರೀತಿಯನ್ನು ನೋಡಿ ಬಹಳ ಆಶ್ಚರ್ಯವಾಗದಿರಲಿಲ್ಲ. ಆದರೆ ಕಾಫಿ ಕುಡಿದು ಮುಗಿಯುವ ಮೊದಲೇ ವಾಣಿಯ ಬಾಯಿಯಿಂದ ಮನೆಯ ಆ ರೂಪಿಗೆ ಕಾರಣಳಾದವಳು ನೆರೆಮನೆಯ ಇಂದು ಎಂದು ತಿಳಿಯಿತು. ತಿಳಿದು- ‘ನನ್ನ ವಾಣಿಯೂ ಗೃಹ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸುವಂತಾಗಿದ್ದರೆ’ ಎಂದೆನ್ನಿಸಿತವನಿಗೆ. ತನ್ನ ಬಯಕೆಗಳು ಪೂರ್ತಿಯಾಗುವುದು ತಾನು ಬಯಸಿದಷ್ಟು ಸುಲಭವಲ್ಲ ಎಂಬುದು ರತ್ನನ ಐದು ವರ್ಷಗಳ ದಾಂಪತ್ಯ ಜೀವನದ ಅನುಭವ. ಆದರೆ ಇನ್ನೂ ರತ್ಮನಿಗೆ ‘ಹಾಗಾಗಿದ್ದರೆ- ಹೀಗಾಗಿದ್ದರೆ’ ಎಂದು ಅ೦ದುಕೊಳ್ಳದಿರುವಷ್ಟು ನಿರಾಶೆಯಾಗಿರಲಿಲ್ಲ.

 

ರತ್ನ ಕೆಲಸ ತೀರಿಸಿ ದಣಿದು ಬರುವಾಗ ವಾಣಿ ಇಂದುವಿನ ಮನೆಯಲ್ಲಿ ಹರಟೆಹೊಡೆಯುತ್ತ ಕೂತುಬಿಡುತ್ತಿದ್ದಳು. ರತ್ನ ಬಂದ ಮೇಲೆ ಓಡಿ ಹೋಗಿ ಮತ್ತೆ ಕಾಫಿ ಮಾಡಬೇಕು. ವಾಣಿಯ ಕಾಫಿಯಾಗುವುದರೊಳಗೆ ರತ್ನನನ್ನು ಕೂಗಲು ಯಾರಾದರೂ ಬಂದೇ ಬರುವರು. ಎಷ್ಟೋ ಸಾರಿ ಅವನು ಏನನ್ನೂ ತೆಗೆದುಕೊಳ್ಳದೆ ಹಾಗೆಯೇ ಹೊರಟುಹೋಗಿ ಬಿಡಬೇಕಾಗುತ್ತಿತ್ತು. ಆಮೇಲೆ ಸ್ವಲ್ಪ ಹೊತ್ತು ಆಯ್ಯೋ, ಬೇಗನೆ ಕಾಫಿ ತಿಂಡಿ ಮಾಡಿಟ್ಟರಬೇಕಿತ್ತು’ ಎಂದು ವಾಣಿ ನೊಂದುಕೊಳುತ್ತಿದ್ದಳೇನೋ ನಿಜ; ಆದರೆ ಅದು ಸ್ವಲ್ಪ ಹೊತ್ತು ಮಾತ್ರ ಮರುದಿನ ಯಥಾಪ್ರಕಾರ….. ರತ್ನನ ಬಟ್ಟೆಬರೆಗಳೂ ಹಾಗೆಯೇ ಅವನಿಗೆ ಬೇಕಾದಷ್ಟು ಬಟ್ಟೆ ಬರೆಗಳಿದ್ದರೂ ಬೇಕಾದಾಗ ಒಂದು ಟೈ ಸಹ ಸರಿಯಾಗಿ ಸಿಕ್ಕುವುದು ಕಷ್ಟವಾಗುತ್ತಿತ್ತು.

 

ಮದುವೆಯಾದ ಹೊಸತರಲ್ಲಿ. ರತ್ನನಿಗೆ ನವಪ್ರಣಯದ ಭರದಲ್ಲಿ ವಾಣಿಯ ಈ ಕುಂದುಕೊರತೆಗಳೊಂದೂ ತಿಳಿಯದಿದ್ದರೂ ದಿನಗಳು ಕಳೆದಂತೆ ಅವನಿಗೆ ‘ನನ್ನ ವಾಣಿಯು ಹೀಗೇಕೆ?’ ಎಂದಾಗದೆ ಹೋಗುತ್ತಿರಲಿಲ್ಲ. ಆದರೆ ಅವಳ ಪಶ್ಚಾತ್ತಾಪದಿಂದ ಕೂಡಿದ ಮುಖ, ತುಂಬಿದ ಕಣ್ಣುಗಳನ್ನು ನೋಡುವಾಗ ಅವನಿಗೆ ಏನನ್ನುವುದಕ್ಕೂ ತೋರದೆ ಅವಳನ್ನು ಸಂತೈಸಿ, ನಗಿಸಿ, ನಕ್ಕು ನಲಿಯುತ್ತಿದ್ದ. ಇನ್ನು ಮು೦ದೆ ಹೀಗೆ ಮಾಡಬೇಡವೆ೦ದು ಹೇಳಿ ಸ್ವಲ್ಪ ಕೋಪಿಸಿ ವಾಣಿಗೆ ಬುದ್ಧಿ ಕಲಿಸಬೇಕೆನ್ನುವ ಅವನ ಪ್ರಯತ್ನಗಳಿಗೆಲ್ಲಾ ಇದೇ ರೀತಿಯ ಅಂತ್ಯಗಳಾಗುತ್ತಿದ್ದವು.

 

ದಿನ ಕಳೆದಂತೆ- ಅವರವರ ಸ್ನೇಹ ಬೆಳೆದಂತೆ ವಾಣಿಯ ಈ ತರದ ಅಲಕ್ಷತನ ಇಂದುವಿಗೆ ತಿಳಿಯದಿರಲಿಲ್ಲ. ಅವಳಿಗೆ ತಿಳಿಯದಿದ್ದರೂ ಹೀಗೇನಾದರೂ ನಡೆದಾಗಲೆಲ್ಲ ವಾಣಿ ಇಂದುವಿನೆದುರು ತಾನೇ ಹೇಳುತ್ತಿದ್ದಳು. ತನ್ನ ತಿಳಿಗೇಡಿತನವನ್ನು ಹಳಿದುಕೊಳ್ಳುತ್ತಿದ್ದಳು. ಮೊದಮೊದಲು ಇಂದು ವಾಣಿಯನ್ನು ಸಮಾಧಾನಪಡಿಸುತ್ತಿದ್ದಳು. ಆದರೆ ಯಾವಾಗಲೂ ಅವಳ ಪ್ರಕೃತಿಯೇ ಹೀಗೆ೦ದು ತಿಳಿದ ಮೇಲೆ ಮಾತ್ರ ಇಂದುವಿಗೆ ‘ರತ್ನನಂಥ ಗ೦ಡನನ್ನು ಪಡೆದೂ ಅವನನ್ನು ಸುಖದಲ್ಲಿಟ್ಟರಲಾರಳಲ್ಲ ಈ ವಾಣಿ!’ ಎ೦ದು ಆಶ್ಚರ್ಯ. ‘ತನ್ನ ಪತಿಯಾಗಿದ್ದರೆ ತಾನು ಹೇಗೆ ನಡೆದುಕೊಳ್ಳುತ್ತಿದ್ದೆ’ ಎಂದು ಒಂದು ನಿಟ್ಟುಸಿರು. ಮತ್ತೆ ‘ಥೂ, ಹುಚ್ಚುಯೋಚನೆ’ ಎಂದೊಂದು ಮೋಡಮುಚ್ಚಿದನಗು.

 

You may also like...

2 Responses

Leave a Reply

Your email address will not be published. Required fields are marked *