ವಾಣಿಯ ಸಮಸ್ಯೆ – ಕೊಡಗಿನ ಗೌರಮ್ಮನವರ ಕಾದಂಬರಿ

ವಾಣಿಯ ಸಮಸ್ಯೆ

ಕೊಡಗಿನ ಗೌರಮ್ಮನವರ ಕಾದಂಬರಿ ‘ವಾಣಿಯ ಸಮಸ್ಯೆ’. ಓದಿರಿ, ಆನಂದಿಸಿರಿ’ 

ಇಂದು ಆ ದಿನ ಬೆಳಿಗ್ಗೆ ಎದ್ದು ಹೊರಗೆ ಬರುವಾಗ ಬಹಳ ವರ್ಷಗಳಿಂದ ಖಾಲಿಯಾಗಿದ್ದ ನೆರೆಮನೆಗೆ ಯಾರೋ ಒಕ್ಕಲು ಬಂದಿದ್ದಂತೆ ತೋರಿತು. ಮನೆಯ ಇದಿರೊಂದು ಸಾಮಾನು ತುಂಬಿದ ಲಾರಿ ನಿಂತಿತ್ತು. ಒಳಗಿನಿಂದ ಮಾತು ಕೇಳಿಸುತ್ತಿತ್ತು. ನೋಡಿ ಐದಾರು ವರ್ಷಗಳಿಂದ ಖಾಲಿ ಬಿದ್ದಿದ್ದ ಆ ಮನೆಗೆ ಬಂದವರು ಯಾರು ಎಂದು ತಿಳಿದುಕೊಳ್ಳುವ ಕುತೂಹಲಕ್ಕಿಂತಲೂ ಹೆಚ್ಚಾಗಿ ಇಂದುವಿಗೆ ಬೇಸರವಾಯ್ತು. “ನೆರೆಮನೆ ಅಜ್ಜಿ ಹೋದರೆ ಕರು ಕಟ್ಟಲು ಸ್ಥಳವಾಯ್ತು’ ಎನ್ನುವ ಸ್ವಭಾವ ಇಂದುವಿನದಲ್ಲವಾದರೂ ಆ ಮನೆಗೆ ಒಕ್ಕಲು ಬಂದುದರಿಂದ ಅವಳಿಗೆ ಸಂತೋಷಕ್ಕಿಂತ  ವ್ಯಸನವೇ ಹೆಚ್ಚಾಯ್ತು ಎಂದರೆ ತಪ್ಪಾಗಲಾರದು. ಅವಳಿಗೆ ಹಾಗಾಗಲು ಕಾರಣವೂ ಇತ್ತು. 

 

ಇಂದು ಹುಟ್ಟುವ ಮೊದಲೇ ತಂದೆಯನ್ನೂ ಹುಟ್ಟುವಾಗ ತಾಯನ್ನೂ ಕಳೆದುಕೊಂಡು ದಾಯಾದಿಗಳ ಮನೆಯಲ್ಲಿ ಎಲ್ಲರಿಗೂ ಹೊರೆಯಾಗಿ ಬೆಳೆದವಳು. ಇಷ್ಟೇ ಸಾಲದು ಎಂದೇನೋ ಮದುವೆಯಾಗಿ ಆರು ತಿಂಗಳಾಗುವ ಮೊದಲೇ ವೈಧವ್ಯ ಬೇರೆ ಪ್ರಾಪ್ತವಾಗಿ ಹೋಗಿತ್ತು. ಅವಳೀಗ ವಾಸಿಸುತ್ತಿರುವ ಆ ಪುಟ್ಟ ಮನೆಯೇ ಅವಳಿಗೆ ಒಂದಾನೊಂದು ಕಾಲದಲ್ಲಿ ಮದುವೆಯಾಗಿತ್ತು ಎಂಬುದರ ಗುರುತು. ತಾನು ಬದುಕುವುದು ಅಸಂಭವ ಎಂದು ತಿಳಿದಾಗ ಅವಳ ಗಂಡ ಅವಳ ಹೆಸರಿಗೆ ಮಾಡಿಟ್ಟದ್ದ ಸ್ವಲ್ಪ ಹಣವೂ ಆ ಮನೆಯೂ ಸಿಕ್ಕಿ, ಇಂದುವಿನ ಜೀವನವೇನೋ ಇತರರ ಹಂಗಿಲ್ಲದೆ ಸುಸೂತ್ರವಾಗಿ ಸಾಗುತ್ತಿತ್ತು.

 

ಆ ಮನೆ ಎಂದರೆ ಅವಳಿಗೆ ಬಲು ಪ್ರೀತಿ. ಅದನ್ನು ಸುಂದರವಾಗಿಟ್ಟುಕೊಳ್ಳುವುದೊ೦ದೇ ಅವಳ ಜೀವನದ ಗುರಿ. ತಾನು, ತನ್ನದು ಎಂಬುದಕ್ಕೆ ಎಡೆಯಿಲ್ಲಡೆ ಬೆಳೆದು ಬೇಸತ್ತ ಅವಳಿಗೆ ಆ ಮನೆಯ ಮೇಲೆ ಅಷ್ಟೊಂದು ಪ್ರೀತಿ ಇದ್ದುದೇನೂ ಆಶ್ಚರ್ಯವಲ್ಲ. ಮತ್ತೆ ಅವಳು ಜೀವನದಲ್ಲಿ ಸ್ವಲ್ಪವಾದರೂ ಸುಖವನ್ನು ಕಂಡಿದ್ದರೆ ಅದೂ ಆ ಮನೆಯಲ್ಲಿಯೇ. ಅವನು ಸತ್ತುಹೋದರೆ ತನ್ನ ಜೀವನವೇ ಹಾಳಾಯ್ತು ಎಂಬ ತಿಳುವಳಿಕೆ ಬರುವ ಮೊದಲೇ ಅವಳ ಗ೦ಡ ಸತ್ತು ಹೋಗಿದ್ದ. ಮದುವೆಯಲ್ಲವನ ಮುಖ ಕಂಡವಳು ಮತ್ತೊಮ್ಮೆ ನೋಡಿದ್ದು ಸತ್ತ ಮೇಲೆ. ಹಾಗೆ ನೋಡುವುದಾದರೊ ಅವನು ಸತ್ತಮೇಲೆಯೇ ಅವಳ ಜೀವನ ಕೊಂಚ ಸುಖಮಯವಾಯಿತೆನ್ನಬೇಕು. ಏಕೆಂದರೆ ಅವಳಿಗಾಗಿ ಅವನಿಟ್ಟಿದ್ದ ಧನದ ಲೋಭದಿಂದ ಮನೆಯವರ ಪ್ರೀತಿ ಅವಳ ಮೇಲೆ ಹೆಚ್ಚಾಯಿತು. ಆದರೆ ಇಂದು ಬುದ್ಧಿ ಬಂದು ತಿಳಿದುಕೊಳ್ಳುವಷ್ಟಾದ ಮೇಲೆ ತಾನೇ ಬೇರೆಯಾಗಿ ಸ್ಪತಂತ್ರ ವಾಗಿರಲು ಬಯಸಿದಳು. ಅವಳ ಮೇಲಲ್ಲದಿದ್ದರೂ ಅವಳ ಹಣದ ಮೇಲಿನ ಪ್ರೀತಿಯಿಂದ ಮನೆಯವರು “ತರುಣಿಯಾದ ನೀನೊಬ್ಬಳೇ ಒಂದು ಮನೆಯಲ್ಲಿರುವುದು ಸರಿಯಲ್ಲ’ ಎ೦ದು ಎಷ್ಟೋ ಹೇಳಿದರೂ ಇಂದು ಮಾತ್ರ ತನ್ನ ನಿಶ್ಚಯವನ್ನು ಬದಲಾಯಿಸಲಿಲ್ಲ.

 

ಇದು ಆರು ವರ್ಷಗಳ ಹಿ೦ದಿನ ಮಾತು. ಆಗವಳಿಗೆ ಇಪ್ಪತ್ತು ವರ್ಷ ವಯಸ್ಸು. ಅವಳು ಊರು ಬಿಟ್ಟು ಆ ಮನೆಗೆ ಬರುವಾಗಲೇ ನೆರೆಮನೆ ಖಾಲಿಯಿತ್ತು. ಅಂದಿನಿಂದಿಂದಿನವರೆಗೂ ಇಂದುವಿಗೆ ತನ್ನ ಮನೆಯ ಹಿತ್ತಲಷ್ಟೇ ಸ್ವತಂತ್ರದಿಂದ ನೆರೆಮನೆಯ ಹಿತ್ತಲಲ್ಲೂ ಹೋಗಿ ಬರುವುದು ವಾಡಿಕೆಯಾಗಿ ಹೋಗಿತ್ತು. ಕಾಲಕ್ರಮದಲ್ಲಿ ಮುರಿದ ಮಧ್ಯದ ಬೇಲಿಯನ್ನು ಸಹ ಕಟ್ಟಿಸುವ ಅವಶ್ಯಕತೆ ಅವಳಿಗೆ ತೋರಿ ಬರಲಿಲ್ಲ.

 

ಅವಳದು ಏಕಾ೦ತವನ್ನು ಬಯಸುವ ಜೀವ. ಹುಟ್ಟಿದಂದಿನಿಂದ ತನ್ನವರು, ತನ್ನದು ಎ೦ಬುದಿಲ್ಲದೆ ಒ೦ಟಿಯಾಗಿ ಬೆಳೆದಿದ್ದ ಅವಳಿಗೆ ಸ್ವತಂತ್ರವಾದ ಮೇಲೂ ಬೇರೆಯವರ ಸಹವಾಸ, ಸ್ನೇಹ, ಪ್ರೀತಿಗಳು ಅಗತ್ಯವಾಗಿ ಕಾಣಬರಲಿಲ್ಲ. ಹಾಗೊಮ್ಮೆ ಅವಶ್ಯವೆಂದು ತೋರಿದ್ದರೂ ತಾನಾಗಿ ಇನ್ನೊಬ್ಬರ ಸ್ನೇಹವನ್ನು ಕೋರದಷ್ಟು ಸಂಕೋಚವುಳ್ಳ ಪ್ರಕೃತಿ ಅವಳದು. ಅದರಿಂದ ತಾನೇತಾನಾಗಿದ್ದ ಅವಳಿಗೆ ನೆರೆಮನೆಗೆ ಒಕ್ಕಲು ಬಂದಿರುವುದು ಎಂದು ತಿಳಿದಾಗ ಸ೦ಂತೋಷವಾಗಿದ್ದುದು ಆಶ್ಚರ್ಯವಲ್ಲ. ಆದರೆ ಅವಳ ಸ೦ತೋಷವನ್ನೇನೂ ನೆರೆಮನೆಯ ಒಕ್ಕಲು ಹೊಂದಿಕೊಂಡಿರಲಿಲ್ಲ. ಅದು ಅವಳಿಗೂ ತಿಳಿದಿದ್ದರೂ ‘ಬ೦ದರಲ್ಲಾ’ ಎಂದಾಗದೆ ಮಾತ್ರ ಹೋಗಲಿಲ್ಲ. ಇನ್ನು ಮುರಿದ ಬೇಲಿಯನ್ನೂ ಕಟ್ಟಿಸದಿದ್ದರೆ ತನ್ನ ಏಕಾಂತಕ್ಕೆ ಭಂಗಬರುವುದೆ೦ದುಕೊಂಡು ಇಂದು ಒಳಗೆ ಹೋದವಳು ಆ ದಿನ ಮತ್ತೆ ಹಿತ್ತಲ ಕಡೆಗೆ ಹೋಗಲಿಲ್ಲ.

 

You may also like...

2 Responses

Leave a Reply to ಸುರೇಶ Cancel reply

Your email address will not be published. Required fields are marked *