ವಾಣಿಯ ಸಮಸ್ಯೆ – ಕೊಡಗಿನ ಗೌರಮ್ಮನವರ ಕಾದಂಬರಿ

 

ಒಂದು ದಿನ ಬೆಳಿಗ್ಗೆ ಸುಮಾರು ಹನ್ನೊಂದು ಗ೦ಟೆಯ ಹೊತ್ತಿನಲ್ಲಿ ಇಂದು ಅಡಿಗೆ ಮಾಡುತ್ತಿರುವಾಗ ವಾಣಿ ಬ೦ದಳು. ಇಂದುವಿನ ಮನೆಗೆ ವಾಣಿ ಬರುವುದಕ್ಕೆ ಸಮಯಾಸಮಯಗಳ ಕಟ್ಟುಗಳಿರಲಿಲ್ಲ. ಬೆಳಿಗ್ಗೆ ಎದ್ದ೦ದಿನಿಂದ ರಾತ್ರಿ ಮಲಗುವ ತನಕ ಆ ಮನೆಯಿಂದ ಈ ಮನೆಗೆ, ಈ ಮನೆಯಿಂದ ಆ ಮನೆಗೆ ಓಡಾಡುವುದು ಅವಳ ಪದ್ಧತಿ. ಅವಳು ಬ೦ದು ಹೋಗುವುದರಲ್ಲಿ ವಿಶೇಷವೇನೂ ಇಲ್ಲ. ಆದರೆ ಆ ದಿನದ ವಾಣಿಯ ಬರುವು ಇಂದುವಿನ ಶಾ೦ತಜೀವನ ಪ್ರವಾಹವನ್ನು ಅಲ್ಲೋಲ ಕಲ್ಲೋಲ ಮಾಡಲು ಕಾರಣವಾಯ್ತು. ವಾಣಿ ಬಂದುದು ಹೆಚ್ಚಿನ ಕೆಲಸಕ್ಕೇನೂ ಅಲ್ಲ. ಸಾರಿಗೆ ಬೇಳೆ ಬೇಯಲು ಹಾಕಿ ಅದು ಬೇಯುವ ತನಕ ಸುಮ್ಮನೆ ಕೂತಿರಬೇಕೆಂದು ಇಂದುವಿನ ಮನೆಗೆ ಹರಟೆ ಹೊಡೆಯಲು ಬ೦ದಿದ್ದಳಷ್ಟೆ.

 

ಮಧ್ಯಾಹ್ನದ ಮೇಲೆ ತುಂಬಾ ಕೆಲಸವಿದ್ದ ರತ್ನ, ಬೇಗನೆ ಊಟ ತೀರಿಸಿ ಹೋಗಬೇಕೆಂದು ಆ ದಿನ ಬೇಗನೆ ಮನೆಗೆ ಬಂದ. ಮನೆಯಲ್ಲಿ ವಾಣಿ ಇಲ್ಲ. ಒಂದೆರಡು ಬಾರಿ ಕೂಗಿದ. ಪ್ರತ್ಯುತ್ತರವೂ ಇಲ್ಲ. ಕೊನೆಗೆ ಹಿತ್ತಲಲ್ಲಿರಬಹುದೇನೋ ಎ೦ದು ಬಂದು ನೋಡುವಾಗ ಇಂದುವಿನ ಮನೆಯಿಂದ ವಾಣಿಯ ಮಾತು ಕೇಳಿಸಿತು. ಮಧ್ಯಾಹ್ನದ ವೇಳೆಯಲ್ಲಿ ಮಾಡುವ ಕೆಲಸ ಬಿಟ್ಟು ನೆರೆಮನೆಗೆ ಹೋಗಿ ಸಮಯ ಕಳೆಯುತ್ತಿರುವಳಲ್ಲ ಎಂದು ಸ್ವಲ್ಪ ಕೋಪವೂ ಬಂತು. “ವಾಣೀ’ ಎಂದು ಸ್ವಲ್ಪ ಗಟ್ಟಿಯಾಗಿಯೇ ಕೂಗಿದ. ಮಾತಿನ ಸಂಭ್ರಮದಲ್ಲಿ ಅವಳಿಗದು ಕೇಳಲಿಲ್ಲ. ಅವಳ ಮಾತಿನ ಗಲಾಟೆಯಲ್ಲಿ ಇಂದುವಿಗೂ ಕೇಳಿಸುವಂತಿರಲಿಲ್ಲ. ಆದುದರಿಂದ ಮಾತಿನಲ್ಲಿ ಮುಳುಗಿದ್ದ ಅವರಿಗೆ ರತ್ನ ಹಿತ್ತಲ ಬೇಲಿಯ ಹತ್ತಿರ ಬ೦ದು ಪುನಃ ಜೋರಾಗಿ “ವಾಣೀ’ ಎನ್ನುವಾಗ ತುಂಬ ಗಾಬರಿಯಾಯ್ತ ವಾಣಿಯಂತೂ “ಅಯ್ಯೋ ಇಂದೂ, ಇನ್ನೂ ಅಡಿಗೆ ಆಗ್ಲಿಲ್ಲ’ ಎಂದು ಅವಸರದಿಂದ ಹೊರಗೆ ಬಂದಳು. ಇಂದುವೂ ಅವಳನ್ನು ಹಿಂಬಾಲಿಸಿ ಬಾಗಿಲ ಹತ್ತಿರ ಬರುವಾಗ ಬೇಲಿಯ ಹತ್ತಿರ ನಿಂತಿದ್ದ ದಣಿದ ರತ್ನನನ್ನು ನೋಡಿದಳು. ವಾಣಿ ‘ಎಷ್ಟೋತ್ತಾಯ್ತು ಬಂದೂ. ಈಗ್ಲೇ ಆಸ್ಪತ್ರೆಗೆ ಮತ್ತೆ ಹೋಗ್ಗೇಕೇ?’ ಎಂದು ಕೇಳುತ್ತಿದ್ದಳು. ಇಂದು ಅವಳ ಮಾತುಗಳನು ಕೇಳಿ ರತ್ನನಿಗೆ ಪುನಃ ಉಪವಾಸ ವ್ರತ ಎಂದು ತಿಳಿದುಕೊ೦ಡಳು. ರತ್ತನಿಗೇನೋ ಹಿಂದೆ ಅನೇಕ ಸಾರಿ ಈ ತರದ ಅನುಭವಗಳಾಗಿದ್ದರೂ ಇಂದುವಿಗೆ ಆಗಲೇ ಅದರ ಖುದ್ದಾದ ಅನುಭವ. ತಾನು ವಾಣಿಯ ಸಮಯವನ್ನು ಹಾಳು ಹರಟೆಯಲ್ಲುಪಯೋಗಿಸಲು ಸಹಾಯಕಳಾದೆನಲ್ಲಾ ಎಂದು ಬಹಳ ಬೇಸರವೂ ಆಯ್ತು ಬಾಗಿಲ ಸಂದಿನಿಂದ ದಣಿದ ಬೆಂಡಾಗಿದ್ದ ರತ್ನನನ್ನು ನೋಡುತ್ತಿದ್ದಂತೆ ಮನಸ್ಸಿನಲ್ಲಿ ಈ ಭಾವನೆಗಳು ಮೂಡುತ್ತಿದ್ದವು. ಮತ್ತೆ ಎಂದೂ ಇಲ್ಲದ ಏನೇನೋ ಯೋಚನೆಗಳು ಒಂದರ ಮೇಲೊಂದಾಗಿ ಬರತೊಡಗಿದವು. ಅವುಗಳನ್ನೇ ಹಿಂಬಾಲಿಸುವಂತೆ ನಿಡಿದಾದ ನಿಟ್ಟುಸಿರೊ೦ದು ಹೊರಬಿತ್ತು. ಕಣ್ಣೀರ ಕಾಲುವೆಯೊಡೆಯಲು ಇಷ್ಟೇ ಸಾಕಾಗಿತ್ತು. “ಅಯ್ಯೋದೇವರೇ” ಎಂದು ಉಕ್ಕುತ್ತಿದ್ದ ಕಣ್ಣೀರನ್ನು ಸೆರಗಿನಿಂದ ಒರಸುತ್ತಾ ಒಳಗೆಬಂದಳು; ಅಷ್ಟು ಹೊತ್ತಿಗೆ ವಾಣಿ ರತ್ನರೂ ತಮ್ಮ ಮನೆಯ ಜಗಲಿ ತಲಪಿದ್ದೆರು.

 

You may also like...

2 Responses

Leave a Reply

Your email address will not be published. Required fields are marked *