ವಾಣಿಯ ಸಮಸ್ಯೆ – ಕೊಡಗಿನ ಗೌರಮ್ಮನವರ ಕಾದಂಬರಿ

 

ಇಂದು ಒಳಗೆ ಬ೦ದಳು. ಒ೦ದೇ ಒಂದು ಗಳಿಗೆಯ ಹಿಂದೆ ಅವಳ ಜೀವನದಲ್ಲಿ ಶಾಂತಿಯಿತ್ತು-ಸಂತೋಷವಿತ್ತು-ಏನೋ ಒಂದು ತರದ ತೃಪ್ತಿಯೂ ಇತ್ತು. ಮತ್ತೆ ತನ್ನ ಮನೆ, ಅದರ ಸೌಂದರ್ಯ ಸ್ವಚ್ಛತೆಗಳಿಗಾಗಿ ಅಭಿಮಾನವಿತ್ತು. ಅದೇಕೋ, ಆ ಒಂದು ಗಳಿಗೆಯ ಹಿಂದಿದ್ದ ಅವಳ ಆನಂದ, ಅಭಿಮಾನ, ಶಾಂತಿ, ತೃಪ್ತಿ ಎಲ್ಲಾ ಇಂದು ಒಳಗೆ ಬರುವಾಗ ಮಾಯವಾಗಿದ್ದವು. ಬದಲಾಗಿ ಅವುಗಳ ಸ್ಥಾನವನ್ನು ಹಿಂದೆಂದೂ ಇಂದುವನ್ನು ಬಾಧಿಸದ ಪ್ರಶೆಗಳು ಬಂದು ಆವರಿಸಿದ್ದುವು. ‘ವಾಣಿಗೆ- ಯಾವುದರ ಬೆಲೆಯನ್ನೂ ಆರಿಯದ ವಾಣಿಗೆ- ಎಲ್ಲವನ್ನೂ ಕೊಟ್ಟ ದೇವರು ತನ್ನ ಜೀವನವನ್ನೇಕೆ ಅ೦ಧಕಾರಮಯವನ್ನಾಗಿ ಮಾಡಿದ? ಎಂಬುದು ಎಲ್ಲದುದಕ್ಕಿಂತಲೂ ಅವಳಿಗೆ ಬಲು ದೊಡ್ಡದಾದ ಪ್ರಶ್ನೆಯಾಗಿ ತೋರಿತು. ಎಷ್ಟು ಯೋಚಿಸಿದರೂ ಪ್ರತ್ಯುತ್ತರ ದೊರೆಯದ ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವುದರಲ್ಲೇ ತಲ್ಲೀನಳಾದ ಇಂದು ಆ ದಿನ ಸಾಯಂಕಾಲ ಪುನಃ ವಾಣಿ ಬರುವ ತನಕವೂ ಕೂತಲ್ಲಿಂದ ಎದ್ದಿರಲಿಲ್ಲ. ಮಾಡಿಟ್ಟಿದ್ದ ಅಡಿಗೆಯೂ ಹಾಗೇಯೇ ಇತ್ತು.

 

ವಾಣಿಯ ದೀನ ಮುಖಮುದ್ರೆಯನ್ನು ನೋಡಿ ಹಿಂದೆ ಮರುಕಗೊಳ್ಳುತ್ತಿದ್ದ ಇ೦ದುವಿಗೆ ಆ ದಿನ ಅವಳ ಅಳುಮೋರೆಯನ್ನು ನೋಡಿ ಸ್ವಲ್ಪ ಸಂತೋಷವೇ ಆಯಿತು. ದೇವರು ತನಗೊಬ್ಬಳಿಗೆಂದೇ ದುಃಖವನ್ನು ಮೀಸಲಾಗಿರಿಸಬೇಕೇಕೆ? ವಾಣಿಗೂ ಅದರ ರುಚಿ ಕೊಂಚ ಗೊತ್ತಾಗಲಿ ಎಂದು ಮನದಲ್ಲೇ ಹೇಳಿಕೊಂಡಳು. ತಾನು ಆ ರೀತಿ ಬಯಸುವುದು ಸ್ಟಾರ್ಥವೆಂದೂ ತನ್ನ ದುಃಖಕ್ಕೆ ಕಾರಣಳು ವಾಣಿ ಅಲ್ಲವೆಂದೂ ಇಂದುವಿಗೆ ತಿಳಿದಿದ್ದರೂ ವಾಣಿಯ ಬಾಡಿದ ಮುಖವು ಅವಳಲ್ಲಿ ಕರುಣೆಯನ್ನು ಹುಟ್ಟಿಸಲಿಲ್ಲ. ವಾಣಿ ಅಳುತ್ತಾ ‘ಎ೦ದೂ ಏನೂ ಅನ್ನದಿದ್ದವರು ಕೋಪಿಸಿಕೊಂಡು ಹೊರಟುಹೋದರು’ ಎಂದು ಹೇಳುವಾಗ ಇಂದುವಿಗೆ ಒಂದು ತರದ ಆನಂದವೇ ಆಯ್ತು. ಆದರೆ ಮರುಕ್ಷಣದಲ್ಲಿ ಆ ರೀತಿ ಸಂತೋಷಪಡುವುದು ತಪ್ಪು ಎಂದು, ಎಂದೂ ಆ ತರದ ಭಾವನೆಗಳಿಗೆ ಎಡೆಕೊಡದಿದ್ದ ಇಂದುವಿನ ಮನವು ಎಚ್ಚರಿಸಿದಾಗ ಅವಳಿಗೇ ತನ್ನ ನೀಚಭಾವನೆಗಳಿಗಾಗಿ ನಾಚಿಕೆಯಾಯ್ತ್ವು. ಆ ಭಾವನೆಗಳಿಗೆ ಎಡೆಕೊಟ್ಟ ತಪ್ಪಿನ ಪ್ರಾಯಶ್ಚಿತ್ತ ಸ್ವರೂಪವಾಗಿ ವಾಣಿಯನ್ನು ಸಂತೈಸಿ ಅವಳ ಕೆಲಸಕ್ಕೆ ನೆರವಾದಳು.

 

ಎಲ್ಲ ಕೆಲಸಗಳನ್ನು ತೀರಿಸಿ ಇಂದು ತನ್ನ ಮನೆಗೆ ಹಿ೦ತಿರುಗುವುದೂ ರತ್ನ ತನ್ನ ಮನೆಗೆ ಬರುವೂದೂ ಸರಿಯಾಯ್ತು. ಅವನಿಗೂ ಮಧ್ಯಾಹ್ನದಿಂದ ನೆಮ್ಮದಿ ಇಲ್ಲ. ಎಂದೂ ವಾಣಿಯೊಡನೆ ಕೋಪಿಸಿಕೊಂಡವನಲ್ಲ. ಬಹಳ ದಿನಗಳಿಂದ ತಡೆದಿದ್ದ ಅವನ ಅಸಮಾಧಾನವು ಆ ದಿನ ಹಸಿವಿನ ಭರದಲ್ಲಿ ತಡೆಯಲಾರದೆ ಕೋಪಕ್ಕೆ ಎಡೆಕೊಟ್ಟಿತ್ತು. ಕೋಪ ಇಳಿಯುತ್ತ ಬಂದಂತೆ ಅವನಿಗೆ ತನ್ನ ವರ್ತನೆಗಾಗಿ ಸ್ವಲ್ಪ ನಾಚಿಕೆಯಾಯ್ತು. ವಾಣಿ ಎಷ್ಟು ನೊಂದುಕೊ೦ಡಿರುವಳೋ ಎಂದು ಕ್ಲಬ್ಬಿಗೆ ಸಹ ಹೋಗದೆ ಮನೆಗೇ ನೇರವಾಗಿ ಬಂದಿದ್ದ. ಆದರೆ ಅವನೆಣಿಸಿದಂತೆ ವಾಣಿ ದೀಪವನ್ನು ಸಹ ಹತ್ತಿಸದೆ ಅಳುತ್ತ ಮಲಗಿರಲಿಲ್ಲ. ಅವನ ಮನೆ ಇಂದುವಿನ ಕೈವಾಡದಿಂದ ನೂತನ ರೂಪ ತಳೆದು ದೀಪದ ಬೆಳಕಿನಲ್ಲಿ ಬೆಳಗುತ್ತಿತ್ತು. ನಗುಮುಖದ ವಾಣಿ ಅವನ ಬರುವನ್ನೇ ಇದಿರು ನೋಡುತ್ತ ಅಡಿಗೆಯನ್ನು ಸಿದ್ಧಪಡಿಸಿ ಕಾಯುತ್ತಿದ್ದಳು.

 

ಆದರೆ ಇದೆಲ್ಲಾ ನೋಡಿ ಅವನಿಗಾದ ಆಶ್ಚರ್ಯ-ಆನಂದ ಕೇವಲ ಒಂದೇ ಒಂದು ಗಳಿಗೆ ಮಾತ್ರ. ವಾಣಿಯು ಬಡಿಸುತ್ತಿದ್ದ ಅಡಿಗೆಯನ್ನು ಊಟ ಮಾಡುತ್ತಿರುವಾಗಲೇ ನೆರಮನೆಯ ಇಂದುವಿನ ಕೃತಿ ಇದು ಎಂದವನಿಗೆ ತಿಳಿಯದೆ ಹೋಗಲಿಲ್ಲ. ತಿಳಿದು ಹಿಂದಿನಂತೆ ‘ನನ್ನ ವಾಣಿಯೂ ಹೀಗೆಯೇ ಕಾರ್ಯಕುಶಲೆಯರಾಗಿದ್ದರೆ-‘ ಎಂದೆಂದುಕೊಳ್ಳುವ ಬದಲು ತಾನೆಂದೂ ನೋಡದ ಇಂದುವಿನ ರೂಪವನ್ನು ಕಲ್ಪಿಸತೊಡಗಿದ. ಅವನನ್ನು ಮೆಚ್ಚಿಸಬೇಕೆ೦ದು ಆ ದಿನ ವಾಣಿಯು ಆಡಿದ ಮಾತುಗಳೆಲ್ಲಾ ಅವನಿಗೆ ಬಲು ದೂರದಿಂದ ಕೇಳಿದಂತಿದ್ದುವು. ಅವನ ಅನನ್ಯಮನಸ್ಥತೆಯನ್ನು ಕಂಡು ವಾಣಿ ಬೆಳಗಿನಿಂದಲೂ ಊಟವಿಲ್ಲದೆ ಬಹಳ ದಣಿದಿರುವರು’ ಎ೦ದು ಮನದಲ್ಲಿಯೇ ಹಲುಬಿದಳು. “ಇನ್ನು ಮುಂದೆಂದೂ ಹೀಗಾಗಗೊಡುವುದಿಲ್ಲ’ ಎಂದು ಪ್ರತಿಜ್ಞೆಯನ್ನು ಮಾಡಿಕೊಂಡಳು. ‘ಹಿಂದೆಷ್ಟೋ ಸಾರಿ ವಾಣಿ ಇದೇ ರೀತಿಯ ಪ್ರತಿಜ್ಞೆಯನ್ನು ಮಾಡಿಕೊಂಡಿದ್ದರೂ ಅವುಗಳೆಂದೂ ನೇರವೇರಿರಲಿಲ್ಲ. ಆದರೆ ಈ ಸಾರಿ ದಿನಬೆಳಗಾದರೆ ಇಂದು ಕೆಲಸಕ್ಕೆ ನೆರವಾಗುತ್ತಿದ್ದುದರಿ೦ದ ವಾಣಿಗೆ ಪ್ರತಿಜ್ಞಾಪಾಲನೆಯು ಕಷ್ಟವಾಗಿ ತೋರಲಿಲ್ಲ. ನಿಜವಾಗಿ ನೋಡಿದರೆ ಇಂದುವೇ ಪ್ರತಿಜ್ಞೆಯನ್ನು ಪಾಲಿಸುವವಳಾಗಿದ್ದಳು.

 

You may also like...

2 Responses

Leave a Reply

Your email address will not be published. Required fields are marked *