ವಾಣಿಯ ಸಮಸ್ಯೆ – ಕೊಡಗಿನ ಗೌರಮ್ಮನವರ ಕಾದಂಬರಿ
೫
ಯೋಚನೆಗಳಿಗೆ ಎಡೆಕೊಡಬಾರದೆಂದು ಇಂದು ತನ್ನ ಹೆಚ್ಚಿನ ಸಮಯವನ್ನು ವಾಣಿಯ ಗೃಹಕೃತ್ಯಗಳಿಗಾಗಿ ಉಪಯೋಗಿಸತೊಡಗಿದಂದಿನಿ೦ದ ಅವರ ಗೃಹಕಾರ್ಯಗಳು ಸುಸೂತ್ರವಾಗಿ ನಡೆಯತೊಡಗಿದವು. ತನ್ನ ಮನೆಯಲ್ಲಾದ ಈ ಮಾರ್ಪಾಡನ್ನು ರತ್ನ ನೋಡದಿರಲಿಲ್ಲ. ನೋಡುತ್ತಿದ್ದಂತೆ ತಾನೆಂದೂ ನೋಡದಿದ್ದ ಇಂದುವಿನ ಕಾರ್ಯಕುಶಲತೆಗಾಗಿ ಅವನ ಮೆಚ್ಚಕೆಯೂ ಬೆಳೆಯದಿರಲಿಲ್ಲ. ಮನೆಯ ಪ್ರತಿಯೊಂದು ವಸ್ತುವಿನ ಸುವ್ಯವಸ್ಥಿತ ಶಿಸ್ತಿನಲ್ಲಿಯೂ ಅವನಿಗೆ ಇಂದುವಿನ ನೆನಪಾಗುತ್ತಿತ್ತು ಆವಳನ್ನವನು ಪ್ರತ್ಯಕ್ಷವಾಗಿ ನೋಡಿರದಿದ್ದರೂ ಅವಳ ಕೆಲಸ ಗಳನ್ನು ನೋಡಿ ಅವಳ ಚಿತ್ರವನ್ನು ಕಲ್ಪಿಸಿಕೊಂಡಿದ್ದನು. ಅವನ ಆ ಕಾಲ್ಪನಿಕ ಇಂದುವು ಆದರ್ಶ ಸ್ತ್ರೀಯಾಗಿದ್ದಳು. ಸುಯೋಗ್ಯ, ಗೃಹಣಿಯಾಗಲು ಬೇಕಾದ ಎಲ್ಲಾ ಸುಗುಣಗಳೊಡನೆ ಅವಳಿಗೆ ಅಪೂರ್ವ ಸೌಂದರ್ಯವೂ ಇತ್ತು ಆದರೆ ಅದೇಕೋ ಇಷ್ಟೆಲ್ಲ ಸುಂದರವಾಗಿ ಚಿತ್ರಿಸಿದ ಆ ಇಂದುವಿನ ಮೋರೆಯಲ್ಲಿ ನಗುವಿಲ್ಲ- ಅವಳ ಕಣ್ಣುಗಳಲ್ಲಿ ಹಾಸ್ಯವಿಲ್ಲ. ಬಹುಶಃ ಯಾವಾಗಲೂ ನಗುನಗುತ್ತಿರುವ ವಾಣಿಯನ್ನು ನೋಡಿಕೊಂಡಿದ್ದುದರಿಂದಲೇನೋ! ಅವಳಿಗಿಂತ ಎಲ್ಲಾ ತರದಲ್ಲೂ ಬೇರೆಯಾದ ಇಂದುವಿನ ಮುಖದಲ್ಲಿ ನಗುವಿರಬಾರದೆಂದು ಹಾಗೆ ಚಿತ್ರಿಸಿರಬಹುದು.
ಮೊದಮೊದಲು ಅವಳ ಕೆಲಸಗಳನ್ನು ಮೆಚ್ಚಿ ಇಷ್ಟೊಂದು ಕಾರ್ಯ ಕುಶಲೆಯಾದ ಇಂದು ಹೇಗಿರಬಹುದು ಎಂದು ಒಂದು ತೆರದ ಕುತೂಹಲದಿಂದ ಇಂದುವಿನ ಚಿತ್ರವನ್ನು ಮನದೊಳಗೇ ಚಿತ್ರಿಸತೊಡಗಿದ್ದ ರತ್ನನಿಗೆ ಬರಬರುತ್ತ ಅವಳನ್ನು ಯಾವಾಗಲೂ ಚಿತ್ರಿಸುವುದೇ ಒಂದು ಹವ್ಯಾಸವಾಗಿ ಹೋಯ್ತು. ಒಮ್ಮೊಮ್ಮೆ ತುಂಬ ಕೆಲಸದ ಮಧ್ಯದಲ್ಲೂ ಅವನಿಗೆ ಇಂದುವಿನ ಯೋಚನೆ ಬಂದುಬಿಡುತ್ತಿತ್ತು. ತಾನು ಯತ್ನಿಸದಿದ್ದರೂ ತಾನಾಗಿ ಮೂಡುವ ಅವಳ ಯೋಚನೆ, ರೂಪಗಳಿಗಾಗಿ ಅವನಿಗೇ ಆಶ್ವರ್ಯವಾಗುತ್ತಿತ್ತು. ಇದೆಂಥಾ ಭ್ರಾಂತಿ! ಎ೦ದು ಸ್ವಲ್ಪ ಕೋಪವೂ ಬರುತ್ತಿತ್ತು. ಆದರಿದೆಲ್ಲಾ ವಾಣಿಯ ಪ್ರತಿಜ್ಜೆಗಳಂತೆ ಒಂದು ಸ್ಟಲ್ಪ ಹೊತ್ತಿಗೆ ಮಾತ್ರವಷ್ಟೆ. ಇತರರ ಅಸಾಧ್ಯ ರೋಗಗಳನ್ನು ತನ್ನ ಔಷಧಿಗಳ ಬಲದಿಂದ ವಾಸಿಮಾಡುತ್ತಿದ್ದ ರತ್ನನಿಗೆ ಕೊನೆಕೊನೆಗೆ ಇ೦ದುವನ್ನು ಚಿತ್ರಿಸುವ ರೋಗದಿಂದ ಪಾರಾಗಲು ಅಸಾಧ್ಯವಾಗಿ ತೋರಿತು. ಏನೇನು ಮಾಡಿದರೂ ತನ್ನ ಮನೋರಾಜ್ಯದಿಂದ ಮಾಸದ ಇಂದುವಿನ ಕಾಲ್ಪನಿಕ ರೂಪವನ್ನು ಸಂಪೂರ್ಣವಾಗಿ ಉಜ್ಜಿಬಿಡಲು ಆವನಿಗೆ ಕೊನೆಗೆ ತೋರಿದ ಒಂದೇ ಒಂದು ಉಪಾಯವೆಂದರೆ ಅವಳನ್ನು ಪ್ರತ್ಯಕ್ಷವಾಗಿ ನೋಡಿಬಿಡುವುದು. ತಾನು ಚಿತ್ರಿಸಿದಷ್ಟು ಸುಂದರವಾಗಿರದ ಅವಳನ್ನು ಸ್ವತಃ ನೋಡಿದರೆ ತನ್ನ ಭ್ರಾಂತಿ ಮಾಸಬಹುದೆಂದು ಅವನಿಗೆ ತೋರಿತು.
ರತ್ನನಿಗೆ ಇಂದುವನ್ನು ಪ್ರತ್ಯಕ್ಷಮಾಡಿಕೊಳ್ಳುವುದೇನೂ ಕಷ್ಟದ ಮಾತಾಗಿರಲಿಲ್ಲ. ತಾನು ಮನೆಯಲ್ಲಿಲ್ಲದ ವೇಳೆಯಲ್ಲೆಲ್ಲಾ ಅವಳು ತನ್ನ ಮನೆಗೆ ಬರುವಳೆಂಬುದು ಅವನಿಗೆ ಗೊತ್ತಿದ್ದ ವಿಷಯ. ಅನಿರೀಕ್ಷಿತವಾಗಿ ತಾನು ಮನೆಗೆ ಬಂದುದಾದರೆ ಅವಳು ಕಾಣ ಸಿಕ್ಕುವಳೆಂದೂ ಅವನಿಗೆ ಗೊತ್ತು. ಅದೇ ಒಂದು ದಿನ ಸಾಯಂಕಾಲ ಮನೆಗೆ ಬರಲು ಹೊತ್ತಾಗುವುದೆಂದು ಹೇಳಿ ಹೋದವನು ಮೂರು ಗಂಟೆ ಹೊಡೆಯುವ ಮೊದಲೇ ಮನೆಗೆ ಬ೦ದ. ತನ್ನೆಣಿಕೆಯಂತೆ ಇಂದುವು ಮನೆಯಲ್ಲಿರುವಳೆಂದು ಬಾಗಿಲಿಗೆ ಬರುವಾಗಲೇ ಒಳಗೆ ನಡೆಯುತ್ತಿದ್ದ ಸಂಭಾಷಣೆಯಿಂದ ಅವನಿಗೆ ತಿಳಿಯಿತು. ನಿಧಾನವಾಗಿ ಒಳಗೆ ಹೋದ.
ನಡುಮನೆಯ ಮೇಜಿನ ಮೇಲೆ ಬಿದ್ದಿದ್ದ ಅವನ ಒಂದು ಮೂಟೆ ಬಟ್ಟೆಗಳನ್ನು ಇಸ್ತಿಮಾಡಿ ಮಡಿಸುತ್ತಾ ಬಾಗಿಲಿಗೆ ಬೆನ್ನು ಹಾಕಿ ನಿಂತಿದ್ದಳು ಇಂದು. ವಾಣಿ ಅದೇ ಮೇಜಿನ ಮೇಲೆ ಒಂದು ಕೊನೆಯಲ್ಲಿ ಕಾಲುಗಳನ್ನಿಳಿಬಿಟ್ಟುಕೊ೦ಡು ಕುಳಿತು ಮಾತಿನ ಸ೦ಭ್ರಮದಲ್ಲಿ ಮೈಮರೆತಿದ್ದಳು.
ಬಾಗಿಲ ಹತ್ತಿರವೇ ಐದಾರು ನಿಮಿಷಗಳಿಂದ ರತ್ನ ನಿಂತಿದ್ದರೂ ಇಬ್ಬರಿಗೂ ಅವನು ಬಂದುದು ತಿಳಿಯಲಿಲ್ಲ. ರತ್ನ ಮಾತಿನ ಮಳೆ ಸುರಿಸುತ್ತಿದ್ದ ತನ್ನ ಹೆಂಡತಿಯನ್ನೂ, ಕೆಲಸದಲ್ಲಿ ಮುಳುಗಿದ್ದರೂ ಅವಳಿಗೆ ಸಮಯೋಚಿತವಾದ ಉತ್ತರಗಳನ್ನು ಹೇಳುತ್ತಿದ್ದ ಇಂದುವನ್ನೂ ಜೊತೆಯಾಗಿ ನೋಡಿದ. ಅವರಿಬ್ಬರೊಳಗಿನ ಅಜಗಜಾಂತರ ವೃತ್ಯಾಸವನ್ನೂ ನೋಡಿ ಇಂದುವಿನ ಚಿತ್ರವನ್ನು ಸಂಪೂರ್ಣವಾಗಿ ಉಜ್ಜಿಬಿಡಬೇಕೆಂದು ಬಂದಿದ್ದವನು ಹೊಸದಾಗಿ ಚಿತ್ರಿಸತೊಡಗಿದ. ಹೌದು; ಅವನ ಕಾಲ್ಪನಿಕ ಇಂದುವಿನ ಅಪತಿಮ ಸೌಂದರ್ಯವು ನಿಜವಾದ ಇಂದುವಿಗಿಲ್ಲದಿದ್ದರೂ ಅವಳ ಕಾರ್ಯತತ್ವರತೆಯು ಆ ಕಮ್ಮಿಯನ್ನು ತುಂಬಿಕೊಟ್ಟಿತು. ಐದು, ಹತ್ತು. ಹದಿನೈದು ನಿಮಿಷ ಗಳಾದರೂ ರತ್ನ ನಿಂತಲ್ಲಿಂದ ಕದಲಲಿಲ್ಲ. ಈ ಮಧ್ಯೆ ವಾಣಿ ಅದೇಕೋ ಬಾಗಿಲ ಕಡೆ ತಿರುಗಿದವಳು ರತ್ನನನ್ನು ನೋಡಿ ‘ಏನು ಇಷ್ಟೊಂದು ಬೇಗ? ಸಿನಿಮಾಕ್ಕೆ ಹೋಗೋದಕ್ಕೊ…’ ಎಂದು ಮೇಜಿನಿಂದ ಕೆಳಗಿಳಿದಳು. ಆಗಲೇ ಇಂದುವಿಗೂ ತನ್ನ ಬಂದುದರ ಅರಿವಾದುದು, ಅವನ ಆಕಸ್ಮಿಕ ಬರುವಿನಿಂದ ಅಪ್ರತಿಭಳಾದ ಅವಳು. ಫಕ್ಕನೆ ಇಸ್ತ್ರಿ ಪೆಟ್ಟಿಗೆಯನ್ನು ಕೆಳಗಿಟ್ಟು ತಿರುಗಿದಳು. ಸರಿ, ರತ್ನನ ಚಿತ್ರದಲ್ಲಿ ಬಾಕಿ ಉಳಿದಿದ್ದ ಮುಖವೂ ಪೂರ್ಣವಾಯ್ತು.
ತಿರುಗಿದ ಇಂದು ಎವೆಯಿಕ್ಕದೆ ತನ್ನ ಮುಖ ನೋಡುತ್ತಿದ್ದ ರತ್ನನನ್ನು ನೋಡಿ, ಸಂಕೋಚದಿಂದ ಮಾಡುವ ಕೆಲಸವನ್ನು ಅಷ್ಟಕ್ಕೇ ಬಿಟ್ಟು ಹಿತ್ತಲ ಬಾಗಿಲಿಸಾಗಿ ತನ್ನ ಮನೆಗೆ ನೆಡೆದುಬಿಟ್ಟಳು. ರತ್ನಬಂದಿರುವನೆಂದೆಣಿಸಿದ ವಾಣಿ ಅವನೊಡನೆ ಪ್ರಶ್ನೆ ಕೇಳುವ ಸಂಭ್ರಮದಲ್ಲಿ ಅವಳನ್ನು ತಡೆಯಲೂ ಇಲ್ಲ.
ಮತ್ತೆ ಒಂದೂವರೆ ಗಂಟೆಯ ತರುವಾಯ ವಾಣಿ ಇಂದೂವನ್ನೂ ತಮ್ಮೊಡನೆ ಸಿನಿಮಾಕ್ಕೆ ಕರೆದುಕೊಂಡು ಹೋಗುವ ಸಲುವಾಗಿ ಅವಳ ಮನೆಗೆ ಹೋದಾಗ ಇಂದು ತಲೆನೋವೆಂದು ಮಲಗಿದ್ದಳು. ವಾಣಿ ‘ಸಿನಿಮಾಕ್ಕೆ ಬಾ’ ಎಂದು ಮಾಡಿದ ಬಲವಂತವೆಲ್ಲವೂ ವ್ಯರ್ಥವಾಯ್ತು. ನಿಜಕ್ಕೂ ಅವಳಿಗೆ ತರೆನೋವಿದ್ದುದೇನೋ ಹೌದು, ಆದರೆ ಆ ತಲೆನೋವು ಬರಲು ಕಾರಣ ಬಗೆಹರಿಯದಿದ್ದೊಂದು ಸಮಸ್ಯೆ ಎಂದು ಮಾತ್ರ ವಾಣಿಗೆ ತಿಳಿಯಲಿಲ್ಲ. ತಿಳಿದಿದ್ದರವಳು ಸಿನಿಮಾಕ್ಕಿಂದು ಹೊರಟು ನಿಂತಿದ್ದ ರತ್ನನನ್ನು ಇಂದುವಿನ ಮನೆಗೆ ಕರತರುತ್ತಿರಲಿಲ್ಲ.
ಸಿನಿಮಾವನ್ನು ನೋಡಿಯಾದರೂ ಇಂದುವಿನ ಚಿತ್ರವು ಅಳಿಸಿಹೋಗಬಹುದೆಂದು ರತ್ನ ವಾಣಿಯ ಇಚ್ಛೆಯಂತೆ ಸಿನಿಮಾಕ್ಕೆ ಹೊರಟಿದ್ದ. ಆದರೆ ಅಷ್ಟಕ್ಕೇ ಹುಡುಗಾಡಿಕೆಯ ವಾಣಿ ಸುಮ್ಮನಾಗದೆ ‘ಇಂದುವನ್ನೂ ಕರೆದುಕೊಂಡು ಹೋಗೋಣ’ ಎಂದು ರತ್ನ ನಿರೋಧಿಸುತ್ತಿದ್ದಂತೆಯೇ ಇಂದುವನ್ನು ಕರೆದುಕೊಂಡು ಬರಲು ಓಡಿದಳು. ವಾಣಿ ಹಿಂತಿರುಗುವಾಗ ಇಂದು ಅವಳ ಜೊತೆಯಲ್ಲಿಲ್ಲದುದನು ನೋಡಿ ರತ್ನನಿಗೆ ಸಮಾಧಾನವಾಯ್ತು. ಆದರೆ ವಾಣಿ ಬಂದು ‘ಇಂದುವನ್ನು ಸ್ವಲ್ಪ ನೋಡಿ ಔಷಧಿ ಮಾಡಿಕೊಡಿ’ ಎನ್ನುವಾಗ ಅವನಿಗೆ ವಾಣಿಯ ಹುಡುಗಾಟಿಕೆಗಾಗಿ ಕೋಪಬಂತು. “ಸ್ವಲ್ಪ ತಲೆ ನೋವಾದ್ರೆ ಏನ್ನಹಾ। ಒ೦ದು ಏಸ್ಪರಿನ್ ಮಾತ್ರೆ ಕೊಟ್ಟು ಬೇಗ ಬಾ – ಹೊತ್ತಾಗಿ ಹೋಗುತ್ತೆ?” ಎಂದು ಸ್ವಲ್ಪ ಒರಟಾಗಿಯೇ ಹೇಳಿದ. ಬೇರೆ ಸಮಯದಲ್ಲಾಗಿದ್ದರೆ ಇಂದುವನ್ನು ನೋಡಿ ಔಷದಿ ಕೊಡಲು ಅವನಿಗೆ ಯಾವ ಅಭ್ಯಂತರವೂ ಇರುತ್ತಿರಲಿಲ್ಲ. ದಿನ ಬೆಳಗಾದರೆ ನೋಡುವ ಇತರ ರೋಗಿಗಳ ಗುಂಪಿಗೆ ಅವಳು ಸೇರಿಹೋಗುತ್ತಿದ್ದಳು.
ಆದರೆ ಆಗ, ಇಂದುವನು ಮರೆಯಬೇಕೆಂದು ಯತ್ನಿಸುತ್ತಿರುವಾಗ, ಅವಳ ಮನೆಗೇ ಹೋಗಿ ಔಷಧಿ ಮಾಡಿಕೊಡಬೇಕೆಂದು ಬಲವಂತಪಡಿಸುವ ವಾಣಿಯ ಮಾತುಗಳು ಅವನಿಗೆ ಅಸಹ್ಯವಾಗಿದ್ದವು. ಇದು ವಾಣಿಯ ಹುಡುಗಾಟಿಕೆಯ ಸರಳ ಬುದ್ಧಿಗೆ ತಿಳಿಯುವುದು ಹೇಗೆ? ಓಂದೇ ಸವನೆ ಹಠಮಾಡಿ ಕೊನೆಗೂ ರತ್ನನನ್ನು ಇಂದುವಿನ ಮನೆಗೆ ಎಳೆದೊಯ್ದಳು.
ಒ೦ದೇ ದಿನದಲ್ಲಿ. ಕೆಲವೇ ಗಂಟೆಗಳ ಅಂತರದಲ್ಲಿ ಅದೂ ಅವಳ ಮನೆಯಲ್ಲೇ ರೋಗಿಯ ಅವಸ್ಥೆಯಲ್ಲಿ ಇಂದುವನ್ನು ಪುನಃ ನೋಡುವ ಪ್ರಸಂಗವು ಬರಬಹುದೆಂದು ರತ್ನ ಎಂದೂ ಯೋಚಿಸಿರಲಿಲ್ಲ. ಅದರಲ್ಲೂ ತಾನು ಇನ್ನೊಮ್ಮೆ ನೋಡುವಾಗ ಅವಳಳುವುವುದನ್ನು ನೋಡಬಹುದು ಎಂಬುದು ಅವನು ಕನಸಿನಲ್ಲಿ ಸಹ ಊಹಿಸದ ಮಾತು, ಹೌದು; ಇಂದು ಅಳುತ್ತಿದ್ದಳು – ಬಿಕ್ಕಿ ಬಿಕ್ಕಿ ಚಿಕ್ಕ ಮಕ್ಕಳಂತೆ ಅಳುತ್ತಿದ್ದಳು. ತಲೆನೋವಿನ ಬಾಧೆಗಾಗಿ ತಾನಳುವುದಲ್ಲವಂದು ಗೊತ್ತಿದ್ದರೂ, ಅಳುವ ಕಾರಣವು ಏನೆಂದು ಅವಳಿಗೇ ತಿಳಿಯದಷ್ಟು ಸೂಕ್ಷವಾಗಿತ್ತು.
ವಾಣಿ ಮೊದಲನೆಯ ಸಾರಿ ಬಂದು ಹೋದ ತರುವಾಯ ಅವಳ ಅಳು ಶುರುವಾಗಿತ್ತು ತಾನತ್ರೂ- ಸುತ್ತಲೂ ಬಂದು ನೋಡುವವರು ಯಾರೂ ಇಲ್ಲವೆಂಬ ಧೈರ್ಯದಿಂದಲೇ ಅಳುವೂ ನಿರಾತಂಕವಾಗಿ ಸಾಗಿತ್ತು. ಅವಳೆಣಿಸಿದಂತೆ ವಾಣಿ ಸಿನಿಮಾಕ್ಕೆ ಹೋಗದೆ ರತ್ನನನ್ನು ತಮ್ಮ ಮನೆಗೆ ಕೆರೆದುಕೊಂಡು ಬರುವಳೆಂದು ಅವಳಿಗೆ ಹೇಗೆ ಗೊತ್ತಾಗಬೇಕು?
ಅವಳಳುವಿಗೆ ವಾಣಿ ರತ್ನ ಇಬ್ಬರಿಗೂ ತೋರಿದ ಒಂದೇ ಒಂದು ಕಾರಣ ಅವಳ ಅಸಾಧ್ಯವಾದ ತಲೆನೋವು. ಎಷ್ಟು ಅಕಾಸ್ಟ್ರಾತ್ಮಾಗಿ ಇಂದುವಿನ ಅಳುವು ಶುರುವಾಗಿತ್ತೋ ಅಷ್ಟೇ ಬೇಗನೆ ರತ್ನ ವಾಣಿಯರನ್ನು ನೋಡಿ ನಿಂತುಹೋಯ್ತು. ಚಿಕ್ಕ ಮಕ್ಕಳಂತೆ ತಾನಳುವುದನ್ನು ಅವರು ನೋಡಿ ಬಟ್ಟರಲ್ಲಾ ಎಂದು ಅವಳು ಭೂಮಿಗಿಳಿದು ಹೋದಳು. ಮತ್ತೆ ತನಗೆ ಹೇಳದೆಯೇ ವಾಣಿ ರತ್ನವನ್ನು ಕರೆದುಕೊಂಡು ಬಂ೦ದಳಲ್ಲಾ ಎಂದು ಬೇರೆ. ರತ್ನನಿಗೂ ಹಾಗೆಯೇ. ಇಂದು- ಅಳುತ್ತಿರುವ ಇಂದುವನ್ನು ನೋಡಿ ಮನಸ್ಸಿನ ಬೇರೆಲ್ಲಾ ಯೋಚನೆಗಳೂ ಮಾಯವಾಗಿ, ಚಿಕ್ಕಮಕ್ಕಳನ್ನು ಸಂತೈಸುವಂತೆ ಅವಳನ್ನು ಸಂತೈಸಿ ಸಮಾಧಾನಪಡಿಸಬೇಕೆ೦ಂದು ತೋರಿತು. ಆದರೆ ಪಕ್ಕದಲ್ಲೇ ನಿಂತಿದ್ದ ವಾಣಿಯೂ ಅವನ ನಾಲ್ಕಾರು ವರ್ಷಗಳ ರೋಗಿಗಳನ್ನು ನೋಡಿದ್ದ ಅಭ್ಯಾಸಬಲವೂ ಅವನನ್ನು ಬದುಕಿಸಿದವು. ಮನದೊಳಗೆ ಯೋಚನೆಗಳ ಯುದ್ಧವೇ ನಡೆಯುತ್ತಿದ್ದರೂ ಹೊರಗೆ ಗಂಭೀರವಾಗಿ ಅವಳ ತಲೆ ಮುಟ್ಟಿ ನೋಡಿದ. ಮತ್ತೆ ವಾಣಿಯ ಕಡೆ ತಿರುಗಿ ‘ಜ್ವರವೂ ಇದೆ’ ಎಂದ. ಅದಕ್ಕೆ ವಾಣಿ “ನೀವು ಔಷಧಿ ಮಾಡಿಕೊಟ್ಟು ಸಿನಿಮಾಕ್ಕೆ ಹೋಗಿ; ನಾನಿಲ್ಲೇ ಇರುತ್ತೇನೆ” ಎಂದು ಇಂದುವಿನ ವಿರೋಧವನ್ನು ಮೂಲೆಗೊತ್ತಿ ಅಲ್ಲೇ ಕುಳಿತುಬಿಟ್ಟಳು. ರತ್ನ ಒಬ್ಬನೇ ಸಿನಿಮಾಕ್ಕೆ ಹೋದ. ಆದರೆ ಆ ದಿ ರಾತ್ರಿ ವಾಣಿ ‘ನೀವು ನೋಡಿದ ಚಿತ್ರ ಯುವುದು?’ ಎಂದು ಕೇಳಿದ್ದರೆ ‘ಅಳುತ್ತಿದ್ದ ಇಂದುವಿನ ಮುಖ’ ಎಂದವನು ಹೇಳಬೇಕಾಗುತ್ತಿತ್ತು.
ಕನ್ನಡ
ಧನ್ಯವಾದ ಕೊಡಗಿನ ಗೌರಮ್ಮ ಕಾದಂಬರಿಗಳು ಹಂಚಿಕೆ ಇನ್ನು ಕಾದಂಬರಿಗಳು ಹಂಚಿಕೆ ಮಾಡಿ.