ವಾಣಿಯ ಸಮಸ್ಯೆ – ಕೊಡಗಿನ ಗೌರಮ್ಮನವರ ಕಾದಂಬರಿ

 

ಅಂದಿನ ತಲೆನೋವು ಇಂದು ರತ್ನರ ಪರಿಚಯಕ್ಕೆ ಅಡಿಗಲ್ಲಾಯಿತು. ಮೊದಮೊದಲು ರತ್ನನಿದಿರು ಹೋಗಲು ನಾಚುತ್ತಿದ್ದ ಇಂದು ಈಗವನೊಡನೆ ನಿಸ್ಸಂಕೋಚವಾಗಿ ಮಾತಾಡುತ್ತಿದ್ದಳು. ಅವರಿಬ್ಬರೊಡನೆ ಸಿನಿಮಾಕ್ಕೆ ಹೋಗುವುದು ಸಹ ಅವಳ ಕಾರ್ಯಕ್ರಮಗಳಲ್ಲಿ ಸೇರಿಹೋಯ್ತು. ಹೀಗೆ ನೆರೆಮನೆಯ ಒಕ್ಕಲು ಬಂದು ಆರು ತಿಂಗಳು ತುಂಬುವ ಮೊದಲು ಇಂದುಎನ ಏಕಾಂತ ಜೀವನ ಸಂಫೂರ್ಣ ಬದಲಾಯಿತು. ಬದಲಾಯಿತು ಅಷ್ಟೆ –

 

ಅದರಿಂದವಳಿಗೆ ಹೆಚ್ಚಿನ ಶಾಂತಿ ಯಾ ಸುಖದೊರೆಯಿತೆಂದರೆ ತಪ್ಪಾಗುವುದು. ಆ ಮನೆಗೆ ಮೊದಲು ಬಂದಾಗಿದ್ದ ತನ್ನ ಮನೆ, ತಾನು, ಸ್ವತಂತ್ರವಾಗಿ ಸುಖವಾಗಿದ್ದೇನೆ ಎಂಬ ಅಭಿಮಾನವೂ ತೃಪ್ತಿಯೂ ಈಗಿರಲಿಲ್ಲ. ಅಷ್ಟರಲ್ಲೇ ನಾನು ಸುಖವಾಗಿದ್ದೇನೆ ಇರಬಲ್ಲೆ ಎಂದಿದ್ದ ಅವಳ ಭಾವನೆಯು ವಾಣಿ ರತ್ನರ ಸಂಸಾರವನ್ನು ನೋಡಿದಂದಿನಿಂದ ತನ್ನ ಜೀವನದಲ್ಲೂ ಒಂದು ದೊಡ್ಡ ಅಭಾವವಿದೆ ಎಂಬುದನ್ನು ಕಂಡುಕೊಂಡಿತ್ತು. ಮೊದಲು ಬಲು ಅಸ್ಪಷ್ಟವಾಗಿ ಮೊಳೆತ ಈ ಭಾವನೆಯು ವಾಣಿ ರತ್ನರಲ್ಲಿ ಹೆಚ್ಚಿನ ಬಳಕೆಯಾದಂತೆಲ್ಲಾ ಚಿಗುರುತ್ತಲೇ ಇತ್ತು. ಮತ್ತೆ ರತ್ನನೂ ಸದಾ ಇವಳನ್ನು ಯೋಚಿಸುತ್ತಿದ್ದುದರಿ೦ಲೇನೋ ಅವಳ ಮನವು ಇಚ್ಛೆಗೆ ವಿರೋಧವಾಗಿ ರತ್ನನ ಕಡೆ ಒಲಿಯತೊಡಗಿತ್ತು.

 

ಇಂದು ರತ್ನರ ಮನಸ್ಸಿನಲ್ಲಿ ಒಬ್ಬರದೊಬ್ಬರಿಗೆ ತಿಳಿಯದಂತೆ ಈ ರೀತಿಯ ಭಾವನೆಗಳು ಮೂಡಿ ಮೊಳೆಯುತ್ತಿದ್ದಾಗ, ವಾಣಿಗೆ ಅಕಸ್ಮಾತ್ತಾಗಿ ತೌರ ಮನೆಗೆ ಹೋಗುವ ಪ್ರಸಂಗ ಬಂದಿತು. ಬೇಸಿಗೆಯಲ್ಲಿ ಒಂದು ತಿಂಗಳು ರಜಾಪಡೆದು ಗ೦ಡ ಹೆಂಡಿರಿಬ್ಬರೂ ಜೊತೆಯಾಗಿ ಹೋಗುವುದೆಂದು ಮೊದಲೇ ನಿಶ್ಚಯವಾಗಿತ್ತು. ಆದರೆ ಅನಿರೀಕ್ಷಿತವಾಗಿ ಅವಳ ತಾಯಿಗೆ ಖಾಯಿಲೆ ಎಂದು ಅವಳಣ್ಣ ಅವಳನ್ನು ಕರೆದುಕೊಂಡು ಹೋಗಲು ಬಂದುಬಿಟ್ಟ, ರತ್ನನಿಗೆ ಆಗ ರಜಾ ಸಿಕ್ಕುವ೦ತಿರಲಿಲ್ಲ. ಆದುದರಿಂದ ವಾಣಿಯೊಬ್ಬಳೇ ಅಣ್ಣನೊಡನೆ ಹೊರಟುಹೋದಳು.

 

ಹುಚ್ಚು ಹುಡುಗಿ! ಹೋಗುವಾಗ ಇಂದುವಿನೊಡನೆ ‘ಇಂದೂ, ಅಮ್ಮನಿಗೆ ಕಾಯಿಲೆ; ವಾಸಿಯಾದೊಡನೆಯೇ ಬಂದುಬಿಡುತ್ತೇನೆ. ನಾನು ಬರುವತನಕ ಸ್ವಲ್ಪ ನಮ್ಮನೆ ಕಡೆ ನೋಡಿಕೋ’ ಎಂದಳು. ರತ್ನನೂ ಅಲ್ಲೇ ನಿಂತಿದ್ದ. ಇಂದು ಬೇರೇನೂ ಹೇಳಲಾರದೆ ‘ಹೂಂ’ ಎ೦ದಳು. ಆದರೆ ವಾಣಿಯೊಡನೆ “ಹೂಂ’ ಎಂದುದೆಷ್ಟೋ ಅಷ್ಟೇ- ಅವಳು ಹೊರಟು ಹೋದ ತರುವಾಯ ಇಂದು ಆ ಕಡೆ ಹೋಗಲಿಲ್ಲ. ಅವಳು ಸ್ವಭಾವತಃ ಪಾಪಿಭೀರು. ಸಮಾಜದ ಕಟ್ಟು ಕಟ್ಟಲೆಗಳನ್ನೇ ದೇವರ ನಿಯಮಗಳು ಎಂದು ತಿಳಿದು ಬೆಳೆದವಳು. ಅವಳಿಗೆ ತನ್ನೊಲವು ರತ್ನನ ಕಡೆ ತಿರುಗಿದೆ ಎಂಬುದರ ಅರಿವು ಆದಾಗಲೇ ಬಹಳ ಭಯವಾಯಿತು. ವಾಣಿ ಹೊರಟುಹೋದ ಮೇಲಂತೂ ಅವಳ ಭಯವು ಒಂದಕ್ಕೆ ಹತ್ತಾಗಿ ಬೆಳೆಯತೊಡಗಿತು. ತನ್ನ ಶಾಂತ ಜೀವನ ಪ್ರವಾಹವನ್ನು ಕಲಕಿ ಕದಡಿಸುವ ಯೋಜನೆಗಳಿಗೆ ಹೃದಯದಳೆಡೆ ಕೊಟ್ಟೆ ಹೇಗೆ? ಏಕೆ? ಎಂಬ ಪ್ರಶ್ನೆಗಳು ಸದಾ ಅವಳನ್ನು ಬಾಧಿಸತೊಡಗಿದವು. ಆದರ ಈ ಯೋಚನೆಗಳ ಜೊತೆಯಲ್ಲೇ ರತ್ನನ ಮೂರ್ತಿಯೂ ಅವಳ ಹೃದಯದಲ್ಲಿ ಮೂಡಿಹೋಗಿತ್ತು. ವಾಣಿಯ ಪತಿಯನ್ನು ತಾನು ಪ್ರೀತಿಸುವುದು ಅನುಚಿತ ಎ೦ಬುದು ಅವಳಿಗೆ ತಿಳಿದಿದ್ದರೂ ಆ ವಿಷಯದಲ್ಲವಳು ಏನು ಮಾಡಲಾರದವಳಾಗಿದ್ದಳು. ಅವನನ್ನು ಪ್ರೀತಿಸದಿರುವುದು ಅವಳ ಶಕ್ತಿಗೆ ಮೀರಿದ ಮಾತಾಗಿತ್ತು. ತನ್ನ ಈ ಅನುಚಿತ ಪ್ರೇಮವು ರತ್ತನಿಗೆಲ್ಲಿ ತಿಳಿದು ಬಿಡುವುದೋ ಎಂಬ ಭಯದಿಂದಲೇ ಅವಳು ವಾಣಿ ಹೊರಟುಹೋದ ತರುವಾಯ ಆ ಕಡೆ ಸಹ ಹೋಗಲಿಲ್ಲ. ಹಿತ್ತಲಲ್ಲಿದ್ದ ಹೂಗಿಡಗಳ ಆರೈಕೆ ಮಾಡುವುದು ಸಹಾ ನಿಂತುಹೋಯ್ತು. ತಾನಲ್ಲಿದ್ದಾಗ ನೆರೆಮನೆಯ ಹಿತ್ತಲಲ್ಲಿ ರತ್ನದ ಭೇಟಿಯಾಗಬಹುದೆ೦ಬ ಭಯವೇ ಇದಕ್ಕೆ ಕಾರಣ.

 

ಈಗಂತೂ ಹೋಗದ ಹೊತ್ತನ್ನು ಕೊಲ್ಲುವುದಕ್ಕೆ ಇಂದುವಿಗುಳಿದ ಒಂದೇ ಒಂದು ಸಾಧನ; ಭಾವನಾ ಪ್ರಪಂಚದಲ್ಲಿ ಹಗಲು ಕನಸುಗಳನ್ನು ಹೆಣೆಯುವುದು; ಎಷ್ಟಾದರೂ ಇವೆಲ್ಲಾ ಕನಸುಗಳೇ ಎಂದು ಕೊಳ್ಳುವುದು.

 

ವಾಣಿ ಇದ್ದಾಗ ಪ್ರತಿದಿನ ಇಂದುವನ್ನು ನೋಡುತ್ತಿದ್ದ ರತ್ನನಿಗೆ ಈಗವರಿಬ್ಬರೂ ಜೊತೆಯಾಗಿ ಇಲ್ಲದಂತಾದುದರಿಂದ ತುಂಬಾ ಬೇಸರವಾಯ್ತು. ದಿನಾ ಇಂದು ಆವರ ಮನೆಗೆ ಹೋಗುತ್ತಿದ್ದಾಗ ಸ್ವಲ್ಪ ಸ್ವಲ್ಪವಾಗಿ ಅವನ ಹೃದಯವನ್ನಾಕ್ರಮಿಸಿದ್ದರ ಅರಿವು ಅವನಿಗಾದುದು ಅವಳು ಒಮ್ಮೆಗೇ ಆ ಕಡೆ ಹೋಗುವುದನ್ನು ನಿಲ್ಲಿಸಿದಾಗ. ಆಗ ಅವನಿಗೂ ಅವಳು ತಮ್ಮ ಮನೆಗೆ ಬರದಿರುವುದು ಒಳ್ಳೆಯದಾಯಿತು ಎಂದು ತೋರಿದರೂ ಚಪಲಮನಸ್ಸು ಮಾತ್ರ ಅವಳ ದರ್ಶನಕ್ಕೆ ತವಕಿಸುತ್ತಿತ್ತು

 

ವಾಣಿ ಹೊರಟುಹೋದ ಮೇಳವಣಿಗೆ ಹೋಟಲಿನಲ್ಲಿ ಊಟ; ಕ್ಲಬ್ಬಿನಲ್ಲಿ ವಾಸ. ಮನೆಗೆ ಬರಬೇಕಾದರೆ ಬಟ್ಟೆ ಬದಲಾಯಿಸುವುದಕ್ಕೆ, ಮತ್ತೆ ರಾತ್ರಿ ನಿಡ್ರೆಮಾಡುವುದಕ್ಕೆ, ಅಷ್ಟೆ, ಕ್ಲಬ್ಬಿನಿಂದ ಕೊನೆಯ ವ್ಯಕ್ತಿ ಹೋಗುವ ತನಕವೂ ಅವನಲ್ಲೇ ಇರುತ್ತಿದ್ದ. ಮತ್ತೆ ಹೋಟಿಲಿಗೆ ಹೋಗಿ ಊಟ ಮಾಡಿ ಮನೆ ತಲಪಬೇಕಾದರೆ ಹನ್ನೊಂದು ಗಂಟೆ ಹೊಡೆದು ಹೋಗುತ್ತಿತ್ತು. ಆದರೂ ಹಗಲೆಲ್ಲಾದರೂ ಮನೆಗೆ ಬಂದರೆ ಹಿತ್ತಲ ಕಡೆ ಹೋಗಿ ಇಂದು ಎಲ್ಲಾದರೂ ಇರುವಳೋ ಎಂದು ನೋಡುದಿರುತ್ತಿರಲಿಲ್ಲ.

 

ವಾಣಿ ಹೋಗಿ ಎರಡು ತಿಂಗಳುಗಳಾಗಿದ್ದರೂ ಸದ್ಯದಲ್ಲೇ ಬರುವ ಸೂಚನೆ ಏನೂ ಇರಲಿಲ್ಲ. ಒಂದು ದಿನ ಬೆಳಿಗ್ಗೆ ಇ೦ದು ನೀರು ಸೇದುತ್ತಿರುವಾಗ ರತ್ನ ಹಿತ್ತಲಬೇಲಿಯ ಹತ್ತಿರ ಬಂದ. ವಾಣಿ ಹೊರಟುಹೋದ ಮೇಲೆ ಅದೇ ಅವರು ಮೊದಲ ಸಾರಿ ಒಬ್ಬರನ್ನೊಬ್ಬರು ನೋಡಿದ್ದು, ಅವಳಿರುವಾಗ ನಿಸ್ಸಂಕೋಚವಾಗಿ ಮಾತಾಡಿಕೊಂಡಿದ್ದ ಅವರಿಗೆ ಆಗ ಮಾತಾಡಲು ಏನೂ ತೋರಲಿಲ್ಲ. ಆದರೂ ಇಂದು ತಾನು ಸುಮ್ಮನಿದ್ದರೆ ಮನದ ಭಾವನೆಗಳೆಲ್ಲಿ ಬಯಲಾಗುವುದೋ ಎಂಬ ಭಯದಿಂದ ‘ವಾಣಿ ಯಾವತ್ತು ಬರ್ತಾಳೆ?’ ಎ೦ದು ಕೇಳಿದಳು. ಅವಳ ಆ ಪ್ರಶ್ನೆಗೆ ಪ್ರತ್ಯತ್ತರ ಕೊಡುವ ಬದಲು ರತ್ನ ‘ಆರೋಗ್ಯವಾಗಿರುವೆಯಾ ಇಂದಿರಾ? ಇದೇನು ಇತ್ತೀಚೆಗೆ ನಿನ್ನನ್ನೂ ಕಾಣುವುದಿಲ್ಲ?’ ಎಂದು ಕೇಳಿದ.

 

ಅದೇ ಮೊದಲವಳು ಅವನ ಬಾಯಿಂದ ತನ್ನ ಹೆಸರನ್ನು ಕೇಳಿದ್ದು. ಅಂದಿನವರೆಗೂ ಅವಳಿಗೆ ತನ್ನ ಹೆಸರು ಅಷ್ಟೊಂದು ಸುಂದರವೆಂದು ತಿಳಿದಿರಲಿಲ್ಲ.

 

ರತ್ನನ ಬಾಯಿಂದ ಹೊರಟ ಮಾತ್ರಕ್ಕೆ ತನ್ನ ಹೆಸರಿನಲ್ಲಾದ ಬದಲಾವಣೆಯು ಅವಳ ಮುಖವನ್ನರಳಿಸಿತು. ಕಣ್ಣುಗಳು ಹೃದಯದ ಗುಟ್ಟುಗಳನ್ನೆಲ್ಲಾ ಹೊರಗೆಡವಿ ಅವನ ಮುಖವನ್ನು ನೋಡಿದವು. ರತ್ನನ ಕಣ್ಣಗಳೂ ಮನದ ಭಾವನೆಗಳನ್ನು ಮುಚ್ಚಿಟ್ಟುಕೊಂಡಿರಲಿಲ್ಲ. ಅವನ ಆ ನೋಟವೇ ಭೂಮಿಯಿಂದ ಮೇಲಕ್ಕೆ ಹೋಗಿದ್ದ ಇಂದುವನ್ನು ಧರೆಗಿಳಿಸಿ ಮರೆತಿದ್ದ ಕರ್ತವ್ಯವನ್ನು ಜಾಗೃತಿಗೊಳಿಸಿದ್ದು. ಮರುಕ್ಷಣ ಸೇದಿದ್ದ ನೀರನ್ನು ಸಹ ತೆಗೆದುಕೊಳ್ಳದೆಲ್ಲಗೆ ಹೋಗಿಬಿಟ್ಟಳು. ರತ್ನ ಬಹಳ ಹೊತ್ತು ಅಲ್ಲೇ ನಿಂತಿದ್ದರೂ ಪುನಃ ಅವಳು. ಹೊರಗೆ ಬರಲಿಲ್ಲ.

 

ಮರುದಿನ, ಮರುದಿನ, ಮರುದಿನವೆಂದು ಮೂರು ದಿನ ರತ್ನ ಇಂದುವನ್ನು ನಿರೀಕ್ಷಿಸಿದರೂ ಅವಳ ದರ್ಶನವಾಗಲಿಲ್ಲ. ನಾಲ್ಕನೆಯ ದಿನ ಟಪ್ಪಾಲು ಮೂಲಕ ಇಂದುವಿಗೊಂದು ಕಾಗದ ಬಂತು. ರತ್ನನ ಅಕ್ಷರಗಳ ಪರಿಚಯವಿದ್ದ ಅವಳಿಗದು ಅವನದೆಂದು ನೋಡಿದೊಡನೆಯೇ ತಿಳಿಯಿತು. ತಿಳಿದು ಬಹಳ ಹೊತ್ತು ಒಡೆಯದೆ ಅದನ್ನು ಕೈಯಲ್ಲಿ ಹಿಡಿದುಕೊಂಡು ಅಲೋಚಿಸುತ್ತ ಕುಳಿತಿದ್ದಳು. ಮತ್ತವಳು ಬಲುಹೊತ್ತಿನ ಮೇಲೆ ಅಲ್ಲಿಂದೇಳುವಾಗಲೂ ಆದು ಒಡೆಯಲ್ಪಟ್ಟರಲಿಲ್ಲ: ಆದರೆ ಅವಳ ಕಣ್ಣೀರಿನ್ನಿಂದ ಅಭಿಷಿಕ್ತವಾಗಿ ಒದ್ದೆಯಾಗಿ ಹೋಗಿತ್ತು. ಎದ್ದವಳು “ಹಾಗೆಯೇ ಆ ಕಾಗದವನ್ನು ಹಿಡಿದುಕೊಂಡು ಅಡಿಗೆ-ಮನೆಗೆ ಹೋದಳು ಮತ್ತೊಂದು ನಿಮಿಷದಲ್ಲಿ ಒಲೆಯಲ್ಲಿ ಉರಿಯುತ್ತಿದ್ದ ಬೆ೦ಕಿಯಲ್ಲದು ಬೂದಿಯಾಗಿ ಹೋಯ್ತು

 

ಮತ್ತೊಂದು ವಾರದ ತರುವಾಯ ವಾಣಿ ತೌರಮನೆಯಿಂದ ಬಂದಳು. ಬಂದವಳು ನೇರವಾಗಿ ಇಂದುವಿನ ಮನೆಗೇ ಹೋದಳು. ಇಂದುವಿನ ಮನೆಗೆ ಬೀಗ ಹಾಕಿತ್ತು ನೋಡಿ ವಾಣಿಯ ಆಶ್ಚರ್ಯಕ್ಕೆ ಮಿತಿಯಿಲ್ಲ! ತನ್ನವರೆಂಬವರಿಲ್ಲದ ಇಂದು ಅದೆಲ್ಲಿಗೆ ಹೋಗಿರಬಹುದು ಎಂದವಳಿಗೆ. ಇದಿರು ಮನೆಯಲ್ಲಿ ವಿಚಾರಿಸಿದಳು. ಇಂದು ತನ್ನನ್ನು ಸಾಕಿದವರ ಮನೆಗೆ ಹೋಗಿರುವಳೆಂದು ತಿಳಿಯಿತು. ಇದನ್ನು ಕೇಳಿ ಅವಳಿಗೆ ಇನ್ನಷ್ಟು ಆಶ್ಚರ್ಯ. ತಾನೆಂದೆಂದಿಗೂ ಅವರ ಮನೆಗೆ ಹೋಗುವುದಿಲ್ಲವೆನ್ನುತ್ತಿದ್ದ ಇ೦ದು, ಈಗೇಕೆ ತಾನಾಗಿ ಅಲ್ಲಿ ಹೋದಳು ಎಂಬುದನ್ನು ತಿಳಿಯುವುದು ವಾಣಿಯ ಸರಳ ಶಕ್ತಿಗೆ ಮೀರಿದ ಮಾತಾಗಿತ್ತು. ಕೊನೆಗೂ ಅವಳಿಗೆ ಇಂದುವಿನ ಆಶ್ಚರ್ಯಕರವಾದ ವರ್ತನೆಯ ಕಾರಣವು ತಿಳಿಯಲಿಲ್ಲ. ತಿಳಿದಿದ್ದ ರತ್ನನೂ ಹೇಳುವ ಪ್ರಯತ್ನಕ್ಕೆ ಕೈ ಹಚ್ಚದುದರಿಂದ ಕೊನೆಯತನಕವೂ ವಾಣಿಗದು ಸಮಸ್ಯೆಯಾಗಿಯೇ ಉಳಿಯಿತು.

 

******** ಮುಕ್ತಾಯ *******

 

attribution: Kodagina Gowramma / Public domain

You may also like...

2 Responses

Leave a Reply

Your email address will not be published. Required fields are marked *